ʻಹೆಸರಿನಲ್ಲಿ ಅಹಿಂಸೆ ಇದೆ, ಮಾತಿನಲ್ಲಿ ಕನ್ನಡಿಗರ ಭಾವನೆಗಳಿಗೆ ಹಿಂಸೆ ಇದೆʼ; ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಖಡಕ್ ತಿರುಗೇಟು
ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕಾಗಿ ಬೆಂಗಳೂರಿನಲ್ಲಿ 2.5 ಎಕರೆ ಜಾಗ ನೀಡಿರುವುದನ್ನು ನಟ ಚೇತನ್ ಟೀಕಿಸಿದ ಬೆನ್ನಲ್ಲೇ, ನಿಖಿಲ್ ಕುಮಾರಸ್ವಾಮಿ ಅವರು ಚೇತನ್ ಅವರ 'ಯೋಗ್ಯತೆ'ಯನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಚೇತನ್ ಅವರು ನಿಖಿಲ್ ಅವರ ಚುನಾವಣಾ ಸೋಲು ಮತ್ತು ಸ್ವಜನಪಕ್ಷಪಾತದ ಬಗ್ಗೆ ಲೇವಡಿ ಮಾಡಿದ್ದರು. ಈ ಬಗ್ಗೆ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.
-
ನಟ ಚೇತನ್ ಅಹಿಂಸ ಅವರು ಈಚೆಗೆ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಜಾಗದ ಬಗ್ಗೆ ಮಾತನಾಡಿ, ವಿವಾದಕ್ಕೊಳಗಾಗಿದ್ದರು. "ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಕ್ಕಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ" ಎಂಬ ಅವರ ಹೇಳಿಕೆಯನ್ನು ರಾಜ್ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದರು. ಈ ನಡುವೆ ನಟ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದರು.
ನಿಖಿಲ್ ಮಾತಿಗೆ ಪ್ರತಿಕ್ರಿಯಿಸಿದ್ದ ಚೇತನ್
"ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ" ಎಂದು ನಿಖಿಲ್ ಹೇಳಿದ್ದರು. ಈ ಮಾತಿಗೆ ಪ್ರತಿಕ್ರಿಯೆನೀಡಿದ್ದ ನಟ ಚೇತನ್, "ಪ್ರಜಾಪ್ರಭುತ್ವದಲ್ಲಿ, ಯಾರು ಮಾತನಾಡಲು ‘ಯೋಗ್ಯ’? ಮಾಜಿ ಪ್ರಧಾನಿಯ ಮಗ—2006ರಲ್ಲಿ ಅವಕಾಶವಾದಿ ‘ಸ್ಮಾರಕ ಪಾಲಿಟಿಕ್ಸ್’ ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆಸಂಬಂಧಪಟ್ಟ ‘ಫ್ಯಾನ್ ವಾರ್ಸ್’ ಪ್ರೇರೇಪಿಸಿದವರಾ" ಎಂದು ಚೇತನ್ ಪ್ರಶ್ನೆ ಮಾಡಿದ್ದಾರೆ.
JDS Protest: ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ರೆ ತುಂಗಭದ್ರಾ ಡ್ಯಾಂಗೆ ಮುತ್ತಿಗೆ: ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ
ಅಲ್ಲದೆ, "ಅವರ ಮಗ, ಮೂರು ಬಾರಿ ಸೋತವರು—ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ" ಎಂದು ಚೇತನ್ ಬರೆದುಕೊಂಡಿದ್ದರು.
ಚೇತನ್‌ಗೆ ತಿರುಗೇಟು ನೀಡಿದ ನಿಖಿಲ್
ಚೇತನ್ ಪೋಸ್ಟ್‌ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ನಿಖಿಲ್ ಕುಮಾರಸ್ವಾಮಿ, "ರಾಜ್‌ಕುಮಾರ್ ಎಂದರೆ ಕೇವಲ ಒಬ್ಬ ನಟರಲ್ಲ, ಅವರು ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಅಹಂಕಾರದ ಪರಮಾವಧಿ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ, ಆದರೆ ಅವುಗಳಿಗೆ ಒಂದು ಘನತೆ ಇರಬೇಕು. ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಟ್ವೀಟ್
ರಾಜ್‌ಕುಮಾರ್ ಎಂದರೆ ಕೇವಲ ಒಬ್ಬ ನಟರಲ್ಲ, ಅವರು ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಅಹಂಕಾರದ ಪರಮಾವಧಿ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ.
— Nikhil Kumar (@Nikhil_Kumar_k) April 28, 2026
ಸಾರ್ವಜನಿಕ ಜೀವನದಲ್ಲಿ… pic.twitter.com/3XSGJpBQP7
"ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ. ಸಂಸ್ಕಾರ ಮನೆಯಿಂದ ಬರಬೇಕು, ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು; ಕೇವಲ ಪ್ರಚಾರದ ಹಪಾಹಪಿಯಿಂದಲ್ಲ! ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.