ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೆಜಿಎಫ್‌ʼ ಗೆದ್ದಮೇಲೆ ನಟಿ ಶ್ರೀನಿಧಿ ಶೆಟ್ಟಿ 7-8 ಕೋಟಿ ರೂ. ಸಂಭಾವನೆ ಕೇಳಿದ್ರಾ? ಕೊನೆಗೂ ಬಯಲಾಯ್ತು ರಹಸ್ಯ!

Srinidhi Shetty Remuneration: ನಟಿ ಶ್ರೀನಿಧಿ ಶೆಟ್ಟಿ ಅವರು ತಮ್ಮ ಸಂಭಾವನೆ ವಿಚಾರವಾಗಿ ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಚಿತ್ರರಂಗದ ಆರಂಭಿಕ ಹಂತದಲ್ಲಿರುವ ತಮಗೆ ದೊಡ್ಡಮಟ್ಟದ ಮೊತ್ತ ಕೇಳುವ ಉದ್ದೇಶವಿಲ್ಲವೆಂದು ನೇರವಾಗಿ ಹೇಳಿದ್ದಾರೆ. ಕೇವಲ ಹಣಕ್ಕಾಗಿ ನಟಿಸುವುದಾದರೆ 40ಕ್ಕೂ ಹೆಚ್ಚು ಚಿತ್ರಗಳನ್ನು ಒಪ್ಪಿಕೊಳ್ಳಬಹುದಿತ್ತು ಎಂದು ಅವರು ಹೇಳಿದ್ದಾರೆ.

KGF ನಟಿ ಶ್ರೀನಿಧಿ ಶೆಟ್ಟಿ 8 ಕೋಟಿ ಸಂಭಾವನೆ ಕೇಳಿದ್ರಾ? ಇಲ್ಲಿದೆ ಉತ್ತರ!

-

Avinash GR
Avinash GR Oct 9, 2026 7:54 PM

ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಶ್ರೀನಿಧಿ ಶೆಟ್ಟಿ, ತಮ್ಮ ಸಂಭಾವನೆಯ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. 'ಕೆಜಿಎಫ್' ಚಿತ್ರಗಳ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ನಟಿ ಶ್ರೀನಿಧಿ ತಮ್ಮ ಮುಂಬರುವ ಚಿತ್ರಗಳಿಗೆ ಬರೋಬ್ಬರಿ 7 ರಿಂದ 8 ಕೋಟಿ ರೂಪಾಯಿಗಳ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣ ವ್ಯಾಪಕವಾಗಿ ಚರ್ಚೆಯಾಗಿದ್ದವು. ಆದರೆ, ಈ ಎಲ್ಲಾ ಮಾತುಗಳು ಕೇವಲ ಊಹಾಪೋಹಗಳಷ್ಟೇ ಎಂದು ಸ್ವತಃ ಶ್ರೀನಿಧಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಆಧಾರರಹಿತ ವದಂತಿಯಷ್ಟೇ

ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಶ್ರೀನಿಧಿ ಶೆಟ್ಟಿ, ಹರಿದಾಡುತ್ತಿರುವ ಸಂಭಾವನೆ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. "ಕೆಜಿಎಫ್ ಯಶಸ್ಸಿನ ನಂತರ ನಾನು ಪ್ರತಿ ಚಿತ್ರಕ್ಕೆ 7 ರಿಂದ 8 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ನಾನು ಚಿತ್ರರಂಗಕ್ಕೆ ಕಾಲಿಟ್ಟು ನಟಿಸಿರುವುದೇ ಕೆಲವೇ ಕೆಲವು ಚಿತ್ರಗಳಲ್ಲಿ. ಹೀಗಿರುವಾಗ ಆರಂಭಿಕ ಹಂತದಲ್ಲೇ ಅಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಕೇಳಲು ಹೇಗೆ ಸಾಧ್ಯ? ಇದೆಲ್ಲ ಕೇವಲ ಆಧಾರರಹಿತ ವದಂತಿಯಷ್ಟೇ" ಎಂದು ಅವರು ಸ್ಪಷ್ಟವಾದ ಉತ್ತರ ನೀಡಿದ್ದಾರೆ.

ದುಡ್ಡಿಗೋಸ್ಕರ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ

ಚಿತ್ರಗಳ ಆಯ್ಕೆಯಲ್ಲಿ ಹಣಕ್ಕಿಂತ ಕಥೆ ಮತ್ತು ಪಾತ್ರಗಳ ಗುಣಮಟ್ಟವೇ ತಮಗೆ ಮುಖ್ಯ ಎಂಬುದನ್ನು ಒತ್ತಿ ಹೇಳಿದ ನಟಿ ಶ್ರೀನಿಧಿ ಶೆಟ್ಟಿ, "ಕೇವಲ ಹಣ ಗಳಿಸುವುದೇ ನನ್ನ ಮುಖ್ಯ ಉದ್ದೇಶವಾಗಿದ್ದರೆ, ಕಳೆದ ಕೆಲವೇ ವರ್ಷಗಳಲ್ಲಿ ನಾನು 30 ರಿಂದ 40 ಸಿನಿಮಾಗಳನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ನಾನು ಎಂದಿಗೂ ಕೇವಲ ದುಡ್ಡಿಗೋಸ್ಕರ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಗಟ್ಟಿಯಾದ ಕಥಾಹಂದರ ಹಾಗೂ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ಕೊಡುವ ಉತ್ತಮ ಪಾತ್ರಗಳಿಗೆ ನಾನು ಮೊದಲ ಆದ್ಯತೆ ನೀಡುತ್ತೇನೆ" ಎಂದು ತಮ್ಮ ವೃತ್ತಿಪರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮುಜುಗರ ತರುವಂತಹ ಪಾತ್ರಗಳನ್ನು ಒಪ್ಪೋದಿಲ್ಲ

"ವಿಭಿನ್ನ ಬಗೆಯ ಪಾತ್ರಗಳಲ್ಲಿ ನಟಿಸಲು ನಾನು ಸದಾ ರೆಡಿ ಇರುತ್ತೇನೆ. ಆದರೆ ನನಗೆ ಮುಜುಗರ ತರುವಂತಹ ಯಾವುದೇ ಪಾತ್ರ ಅಥವಾ ದೃಶ್ಯಗಳಲ್ಲಿ ನಟಿಸಲು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಪ್ರತಿಯೊಬ್ಬ ಕಲಾವಿದನಿಗೂ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ತಮ್ಮದೇ ಆದ ಮಿತಿಗಳಿರುತ್ತವೆ. ಯಾವುದೇ ಪಾತ್ರ ಅಥವಾ ಹಾಡಿನಲ್ಲಿ ನಟಿಸುವಾಗ ನನಗೆ ಆತ್ಮತೃಪ್ತಿ ಇಲ್ಲದಿದ್ದರೆ, ಅದರಲ್ಲಿ ನೂರಕ್ಕೆ ನೂರರಷ್ಟು ಉತ್ತಮ ಅಭಿನಯ ನೀಡಲು ಸಾಧ್ಯವಿಲ್ಲ. ಅರೆಮನಸ್ಸಿನಿಂದ ಯಾವುದೇ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ನಾನು ಇಷ್ಟಪಡುವುದಿಲ್ಲ. ಹಾಗಾಗಿಯೇ ಸಿನಿಮಾ ಒಪ್ಪಿಕೊಳ್ಳುವ ಮುನ್ನವೇ ನನ್ನ ಮಿತಿಗಳನ್ನು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಮೊದಲೇ ಸ್ಪಷ್ಟವಾಗಿ ವಿವರಿಸುತ್ತೇನೆ" ಎಂದು ಹೇಳಿದ್ದಾರೆ.

‌KGF ಶ್ರೀನಿಧಿ ಶೆಟ್ಟಿ ಬಳಿಕ ಕನ್ನಡ ಮತ್ತೋರ್ವ `ಸ್ಟಾರ್‌' ನಟಿ ಜೊತೆಗೆ ಕೈಜೋಡಿಸಿದ ತೆಲುಗು ನಟ ನಾನಿ; ಯಾವ ಸಿನಿಮಾ?

ಇನ್ನು‌, ಶ್ರೀನಿಧಿ ಶೆಟ್ಟಿ ಅವರ ಸಿನಿಪಯಣದ ವಿಚಾರಕ್ಕೆ ಬಂದರೆ, 2025ರಲ್ಲಿ ತೆಲುಗು ನಟ ನಾನಿ ಅಭಿನಯದ 'ಹಿಟ್ 3' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ತೆಲುಗಿನ ನಟ ವೆಂಕಟೇಶ್, ನಟಿ ನಿವೇತಾ ಪೇತುರಾಜ್ ಹಾಗೂ ನಾರಾ ರೋಹಿತ್ ಪ್ರಮುಖ ತಾರಾಗಣದಲ್ಲಿರುವ 'ಆದರ್ಶ ಕುಟುಂಬಂ ಹೌಸ್ ನಂ 47 - ಎಕೆ 47' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.