ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

16 ವರ್ಷದ ಹಿಂದಿನ ಕೇಸ್‌ನಲ್ಲಿ ನಟಿ ತಮನ್ನಾಗೆ ಹಿನ್ನಡೆ; ಪವರ್ ಸೋಪ್ ವಿರುದ್ಧದ ಕೇಸ್‌ ವಜಾ ಮಾಡಿದ ಮದ್ರಾಸ್ ಹೈಕೋರ್ಟ್

16 ವರ್ಷಗಳ ಹಳೆಯ ಕಾನೂನು ಹೋರಾಟದಲ್ಲಿ ನಟಿ ತಮನ್ನಾ ಭಾಟಿಯಾ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಪವರ್ ಸೋಪ್ಸ್ ಕಂಪನಿಯು ಒಪ್ಪಂದದ ಅವಧಿ ಮುಗಿದ ನಂತರವೂ ತನ್ನ ಫೋಟೋಗಳನ್ನು ಅನಧಿಕೃತವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿ ತಮನ್ನಾ 1 ಕೋಟಿ ರೂ. ಪರಿಹಾರ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ನಟಿ ತಮನ್ನಾಗೆ ಮದ್ರಾಸ್ ಹೈಕೋರ್ಟ್ ಶಾಕ್: ಪವರ್ ಸೋಪ್ಸ್ ವಿರುದ್ಧದ ಕೇಸ್ ವಜಾ

-

Avinash GR
Avinash GR Apr 16, 2026 8:25 PM

ನಟಿ ತಮನ್ನಾ ಭಾಟಿಯಾ ಅವರಿಗೆ ಮದ್ರಾಸ್‌ ಹೈಕೋರ್ಟ್‌ ಶಾಕ್‌ ನೀಡಿದೆ. ಒಪ್ಪಂದದ ಅವಧಿ ಮುಗಿದ ನಂತರವೂ ತನ್ನ ಫೋಟೋಗಳನ್ನು ಅನಧಿಕೃತವಾಗಿ 'ಪವರ್ ಸೋಪ್ಸ್' ಕಂಪನಿ ಬಳಸಿಕೊಂಡಿದೆ, ಆದ್ದರಿಂದ 1 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ತಮನ್ನಾ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ಗುರುವಾರ (ಏಪ್ರಿಲ್ 16) ಅದನ್ನು ವಜಾಗೊಳಿಸಿದೆ.

ಈ ಮೂಲಕ 2017ರಲ್ಲಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿ ಪಿ. ವೇಲು ಮುರುಗನ್ ಮತ್ತು ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕವಾಡಿ ಅವರಿದ್ದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಒಪ್ಪಂದದ ಅವಧಿ ಮುಗಿದ ನಂತರವೂ ಪವರ್‌ ಸೋಪ್ಸ್ ಕಂಪನಿಯು ತನ್ನ ಉತ್ಪನ್ನಗಳ ಮೇಲೆ ತನ್ನ ಫೋಟೋಗಳನ್ನು ಬಳಸಿದೆ ಎಂಬುದನ್ನು ಸಾಬೀತುಪಡಿಸಲು ತಮನ್ನಾ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.‌

Star Fashion 2026: ಬಣ್ಣ ಬಣ್ಣದ ಪೋಲ್ಕಾ ಡಾಟ್ಸ್ ಸೀರೆ ಕ್ರೇಝ್‌ ಹುಟ್ಟುಹಾಕಿದ ತಮನ್ನಾ!

ಏನಿದು ಕೇಸ್‌?

ನಟಿ ತಮನ್ನಾ ಅವರು 2008ರ ಅಕ್ಟೋಬರ್ 7ರಂದು ಪವರ್ ಸೋಪ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಕಂಪನಿಯು ತಯಾರಿಸುವ ಸೋಪುಗಳ ಕವರ್‌ಗಳ ಮೇಲೆ ತನ್ನ ಭಾವಚಿತ್ರಗಳನ್ನು ಬಳಸಲು ಒಂದು ವರ್ಷದ ಅವಧಿಗೆ (ಅಕ್ಟೋಬರ್ 6, 2009 ರವರೆಗೆ) ಒಪ್ಪಿಗೆ ನೀಡಿದ್ದರು.

"ಒಂದು ವರ್ಷದ ಅವಧಿಯ ನಂತರ ಒಪ್ಪಂದವನ್ನು ನವೀಕರಿಸಲಾಗಿರಲಿಲ್ಲ. ಆದರೂ ಕಂಪನಿಯು ತನ್ನ ಅನುಮತಿಯಿಲ್ಲದೆ ಭಾವಚಿತ್ರಗಳನ್ನು ಬಳಸುವುದನ್ನು ಮುಂದುವರಿಸಿದೆ, ಇದರಿಂದ ತನಗೆ 1 ಕೋಟಿ ರೂಪಾಯಿ ನಷ್ಟವಾಗಿದೆ" ಎಂದು ತಮನ್ನಾ ವಾದಿಸಿದ್ದರು.

"ತಾವು ಇತರ ಸೋಪ್ ಬ್ರ್ಯಾಂಡ್‌ಗಳೊಂದಿಗೆ ಮಾತುಕತೆ ನಡೆಸುವಾಗ ‌ಪವರ್ ಸೋಪ್ಸ್‌ನ ನಡೆ ನನಗೆ ತೊಂದರೆ ಮಾಡಿತು. ಆರ್ಥಿಕ ನಷ್ಟ ಅನುಭವಿಸಬೇಕಾಯಿತು. ಒಪ್ಪಂದವು 2009ರಲ್ಲಿ ಮುಗಿದಿದ್ದರೂ, ಕಂಪನಿಯು 2010-2011ರ ಅವಧಿಯಲ್ಲೂ ಸೋಪ್ ಕವರ್‌ಗಳು, ಜಾಹೀರಾತುಗಳು ಮತ್ತು ಆನ್‌ಲೈನ್‌ನಲ್ಲಿ ತನ್ನ ಚಿತ್ರಗಳನ್ನು ಬಳಸುವುದನ್ನು ಮುಂದುವರಿಸಿತ್ತು" ಎಂದು ತಮನ್ನಾ ಮನವಿಯಲ್ಲಿ ತಿಳಿಸಿದ್ದರು. ಹಾಗೆಯೇ, 1 ಕೋಟಿ ರೂಪಾಯಿ ಪರಿಹಾರ ಜೊತೆಗೆ ಕಂಪನಿಯು ತಮ್ಮ ಫೋಟೋಗಳನ್ನು ಎಂದಿಗೂ ಬಳಸಬಾರದು ಎಂದು ಶಾಶ್ವತ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

Tamanna as Ambassador: ನಮ್ಮವ್ರನ್ನಾ ಬಿಟ್ಟು ತಮನ್ನಾ ಆಯ್ಕೆ ಮಾಡಿದ್ದೇಕೆ ?

ಸಾಕ್ಷ್ಯಧಾರಗಳ ಕೊರತೆ

ನಟಿ ತಮನ್ನಾ ಅವರ ವಾದವನ್ನು ಬೆಂಬಲಿಸಲು ಸರಿಯಾದ ಪುರಾವೆಗಳು ಸಲ್ಲಿಸಲಾಗಿಲ್ಲ ಎಂದು ಈ ಹಿಂದೆ ಏಕಸದಸ್ಯ ಪೀಠವು ಹೇಳಿತ್ತು. ಪವರ್ ಸೋಪ್ ಕಂಪನಿಗೂ ಈ ದುರ್ಬಳಕೆಗೂ ನೇರ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ತಮನ್ನಾ ವಿಫಲರಾಗಿದ್ದಾರೆ ಮತ್ತು ಅವರಿಗೆ ಯಾವುದೇ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಏಕಸದಸ್ಯ ಪೀಠವು ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಸರಿಯಾದ ಪುರಾವೆಗಳಿಲ್ಲದ ಕಾರಣ ಮೊಕದ್ದಮೆಯನ್ನು ವಜಾ ಮಾಡಲಾಗಿತ್ತು. ಇದೀಗ ವಿಭಾಗೀಯ ಪೀಠವು ಅದೇ ತೀರ್ಪನ್ನು ಎತ್ತಿಹಿಡಿದಿದೆ.