ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahesh Babu: ರಕ್ತಸಿಕ್ತ ಮೈ, ಕೊರಳಲ್ಲಿ ತ್ರಿಶೂಲದ ಹಾರ; ಮಹೇಶ್‌ ಬಾಬು-ರಾಜಮೌಳಿ ಚಿತ್ರದ ಫಸ್ಟ್‌ ಲುಕ್‌ ಔಟ್‌

SSMB29: ಸದ್ಯ ಚಿತ್ರಪ್ರೇಮಿಗಳ ಕುತೂಹಲ ಕೆರಳಿಸುವ ಚಿತ್ರಗಳಲ್ಲಿ ʼಎಸ್‌ಎಸ್‌ಎಂಬಿ29ʼ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಭಾರತೀಯ ಚಿತ್ರರಂಗದ ಲೆಜೆಂಡ್‌ಗಳಾದ ಎಸ್‌ಎಸ್‌. ರಾಜಮೌಳಿ ಮತ್ತು ಮಹೇಶ್‌ ಬಾಬು ಮೊದಲ ಬಾರಿ ಒಂದಾಗುತ್ತಿರುವುದು ಇದಕ್ಕೆ ಕಾರಣ. ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಸಿನಿಮಾತಂಡ ಇದೀಗ ಫಸ್ಟ್‌ಲುಕ್‌ ರಿಲೀಸ್‌ ಮಾಡಿದೆ.

ಮಹೇಶ್‌ ಬಾಬು-ರಾಜಮೌಳಿ ಚಿತ್ರದ ಫಸ್ಟ್‌ ಲುಕ್‌ ಔಟ್‌

Ramesh B Ramesh B Aug 9, 2025 9:37 PM

ಹೈದರಾಬಾದ್‌: ಕೆಲವೊಂದು ದಿಗ್ಗಜರ ಕಾಂಬಿನೇಷನ್‌ನ ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕೂತಿರುತ್ತಾರೆ. ʼಎಸ್‌ಎಸ್‌ಎಂಬಿ29ʼ (SSMB29) ಅಂತಹದ್ದೊಂದು ಡ್ರೀಮ್‌ ಪ್ರಾಜೆಕ್ಟ್‌. ತೆಲುಗಿನ ಚಿತ್ರ ಮಾಂತ್ರಿಕ, ಸೋಲಿಲ್ಲದ ಸರದಾರ ಎಸ್‌.ಎಸ್‌.ರಾಜಮೌಳಿ (SS Rajamouli) ಮತ್ತು ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು (Mahesh Babu) ಮೊದಲ ಬಾರಿ ಒಂದಾಗುತ್ತಿರುವ ಚಿತ್ರ ಇದಾಗಿದ್ದು, ತಾತ್ಕಾಲಿಕವಾಗಿ ʼಎಸ್‌ಎಸ್‌ಎಂಬಿ29ʼ ಎಂದು ಹೆಸರಿಡಲಾಗಿದೆ. ಸದ್ಯ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಇದುವರೆಗೆ ಚಿತ್ರ ನಿರ್ಮಾಪಕರು ಹೆಚ್ಚಿನ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆಗಸ್ಟ್‌ 9ರಂದು ಮಹೇಶ್‌ ಬಾಬು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರ ನಿರೀಕ್ಷೆ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಡೆಯಿಂದ ಇದೀಗ ಪ್ರೇಕ್ಷಕರಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ರಿಲೀಸ್‌ ಆಗಿರುವ ಪೋಸ್ಟರ್‌ ನೋಡಿ ಮಹೇಶ್‌ ಬಾಬು ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲಿ ಏನಿದೆ?

ಮಹೇಶ್‌ ಬಾಬು ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಈ ಫಸ್ಟ್‌ ಲುಕ್‌ ಇದೀಗ ಗಮನ ಸೆಳೆಯುತ್ತಿದೆ. ಪ್ಯಾನ್‌ ವರ್ಲ್ಡ್‌ ಚಿತ್ರವಾಗಿ ಇದು ಮೂಡಿ ಬರಲಿದ್ದು, ಅದರ ಸೂಚನೆ ಇದೀಗ ಹೊರ ಬಂದಿರುವ ಪೋಸ್ಟರ್‌ ಮೂಲಕವೇ ಸಿಕ್ಕಿದೆ. ಪೋಸ್ಟರ್‌ನಲ್ಲಿ ಮಹೇಶ್‌ ಬಾಬು ಮುಖವನ್ನು ತೋರಿಸಿಲ್ಲ. ಇದರಿಂದ ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆ ಉಂಟಾಗಿದ್ದರೂ ಕೂತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಮಹೇಶ್‌ ಬಾಬು ಅವರ ಎದೆ ಭಾಗವನ್ನಷ್ಟೇ ತೋರಿಸಲಾಗಿದೆ. ಕುತ್ತಿಗೆ ಭಾಗದಿಂದ ರಕ್ತ ಒಸರುತ್ತಿದ್ದು, ಕತ್ತಿನಲ್ಲಿ ಹಾರವಿದ್ದು, ಇದರಲ್ಲಿ ತ್ರಿಶೂಲ, ಡಮರು ಮತ್ತು ನಂದಿಯ ವಿಗ್ರಹವನ್ನೊಳಗೊಂಡ ಪದಕವಿದೆ. ಇದು ಶಕ್ತಿ, ಸಂಪ್ರದಾಯ ಮತ್ತು ಆಧ್ಯಾತ್ಮವನ್ನು ಪ್ರತಿಫಲಿಸಿದೆ.

ಈ ಸುದ್ದಿಯನ್ನೂ ಓದಿ: SSMB 29: ಮಹೇಶ್‌ ಬಾಬು-ರಾಜಮೌಳಿ ಕಾಂಬಿನೇಷನ್‌ ಚಿತ್ರಕ್ಕೆ ಮಾಲಿವುಡ್‌ ಸೂಪರ್‌ ಸ್ಟಾರ್‌ ಎಂಟ್ರಿ

ʼʼ#GlobeTrotter ಎಂದು ಬರೆದು ಫಸ್ಟ್‌ ರಿವೀಲ್‌ ಇನ್‌ ನವೆಂಬರ್‌ʼʼ ತಿಳಿಸಲಾಗಿದೆ. ಬಹುಶಃ ನವೆಂಬರ್‌ನಲ್ಲಿ ಚಿತ್ರದ ಟೈಟಲ್‌ ಅನೌನ್ಸ್‌ ಆಗಬಹುದು. ಪೋಸ್ಟರ್‌ ಜತೆಗೆ ರಾಜಮೌಳಿ ಮಹೇಶ್‌ ಅಭಿಮಾನಿಗಳಿಗೆ ದೊಡ್ಡ ಸಂದೇಶವೊಂದನ್ನೂ ನೀಡಿದ್ದಾರೆ. ʼʼದೇಶದ, ಜಗತ್ತಿನ ಚಿತ್ರಪ್ರೇಮಿಗಳು ವಿಶೇಷವಾಗಿ ಮಹೇಶ್‌ ಬಾಬು ಅಭಿಮಾನಿಗಳಿಗೆ. ನಾವು ಸಿನಿಮಾ ಆರಂಭಿಸಿದಾಗಿನಿಂದಲೂ ನೀವು ನೀಡುತ್ತಿರುವ ಪ್ರೀತಿಗೆ ಅಭಾರಿಯಾಗಿದ್ದೇವೆ. ಚಿತ್ರ ಕಥೆ ನೀವು ಊಹಿಸಿಕೊಳ್ಳುವುದಕ್ಕಿಂತಲೂ ವಿಸ್ತಾರವಾಗಿದೆ. ಒಂದು ಸುದ್ದಿಗೋಷ್ಠಿ ನಡೆಸಿ ಅದನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ನಾವೀಗ ಇದರ ಆಳ, ನಾವು ಸೃಷ್ಟಿಸಿರುವ ಜಗತ್ತನ್ನು ನಿಮಗೆ ಪರಿಚಯ ಮಾಡಿಸಲು ಬೇಕಾದ ಸಿದ್ಧತೆಯಲ್ಲಿದ್ದೇವೆ. ನವೆಂಬರ್‌ನಲ್ಲಿ ನಾವು ಇದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇವೆ. ನಿಮ್ಮ ಊಹೆಕೂ ನಿಲುಕದ ಜಗತ್ತು ಅನಾವರಣಗೊಳ್ಳಲಿದೆʼʼ ಎಂದು ಬರೆದುಕೊಂಡು ಕುತೂಹಲವನ್ನು ಹೆಚ್ಚಿಸಿದ್ದಾರೆ.

ಈಗಾಗಲೇ ಕೆಲವು ಹಂತದ ಚಿತ್ರೀಕರಣ ಹೈದರಾಬಾದ್‌, ಒಡಿಶಾ ಮತ್ತು ವಿದೇಶದಲ್ಲಿ ನಡೆದಿದೆ. ಇದು ಕಾಡಿನಲ್ಲಿ ನಡೆಯುವ ಸಾಹಸಭರಿತ ಕಥೆಯನ್ನು ಒಳಗೊಂಡಿದೆಯಂತೆ. ಆ್ಯಕ್ಷನ್‌ ಪ್ಯಾಕ್ಡ್‌ ಸಿನಿಮಾ ಇದಾಗಿರಲಿದ್ದು, ನಾಯಕಿಯಾಗಿ ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮುಖ್ಯ ಪಾತ್ರಗಳಲ್ಲಿ ಆರ್‌. ಮಾಧವನ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

1,000 ಕೋಟಿ ರೂ. ಬಜೆಟ್‌?

ಈ ಚಿತ್ರ ಬರೋಬ್ಬರಿ 900-1,000 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಇದು 2 ಭಾಗಗಳಲ್ಲಿ ತೆರೆಗೆ ಬರಲಿದ್ದು, ಮುಂದಿನ ವರ್ಷದ ತನಕ ಶೂಟಿಂಗ್‌ ನಡೆಯಲಿದೆ. ಮೊದಲ ಭಾಗ 2027ರಲ್ಲಿ ಮತ್ತು 2ನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆ. ಅಧಿಕೃತ ಘೋಷಣೆಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ.