ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Megha Shetty: ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ; ಸ್ಯಾಂಡಲ್‌ವುಡ್‌ ಜೊತೆ ಜೊತೆಯಲಿ ಕಾಲಿವುಡ್‌ನಲ್ಲೂ ಅಭಿನಯ

Megha Shetty: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಜೊತೆ ಜೊತೆಯಲಿʼ ಧಾರಾವಾಹಿಯ ಅನು ಸಿರಿಮನೆಯಾಗಿ ಪ್ರೇಕ್ಷಕರ ಗಮನ ಸೆಳೆದು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮೇಘಾ ಶೆಟ್ಟಿ ಸದ್ಯ ತಮಿಳು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಭರತ್‌ಗೆ ಅವರು ನಾಯಕಿಯಾಗಲಿದ್ದು, ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ (ಇನ್‌ಸ್ಟಾಗ್ರಾಂ ಚಿತ್ರ).

Ramesh B Ramesh B Mar 11, 2025 4:59 PM

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಜೊತೆ ಜೊತೆಯಲಿʼ (Jothe Jotheyali) ಧಾರಾವಾಹಿಯ ಅನು ಸಿರಿಮನೆಯಾಗಿ ಪ್ರೇಕ್ಷಕರ ಗಮನ ಸೆಳೆದ ಮೇಘಾ ಶೆಟ್ಟಿ (Megha Shetty) ಸದ್ಯ ಕಿರುತೆರೆಯಿಂದ ಬೆಳ್ಳಿತೆರೆಗೆ ಶಿಫ್ಟ್‌ ಆಗಿದ್ದಾರೆ. ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿಯರಲ್ಲಿ ಒಬ್ಬರೆಸಿಕೊಂಡಿರುವ ಅವರು ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌, ಡಾರ್ಲಿಂಗ್‌ ಕೃಷ್ಣ, ಧನ್ವೀರ್‌ ಮುಂತಾದ ನಟರಿಗೆ ಜೋಡಿಯಾಗಿ ಕಾಣಿಸಿಕೊಂಡ ಅವರು ಇದೀಗ ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಹೌದು, ಕನ್ನಡ ಜತೆಗೆ ತಮಿಳು, ತೆಲುಗು, ಮಲಯಾಳಂ ಹೀಗೆ ಬಹುಭಾಷೆಗಳನ್ನು ಬಲ್ಲ ಮೇಘಾ ಕಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸಹಜಾಭಿನಯ, ಮುದ್ದಾದ ನಗು, ಚೆಲುವಿನಿದಂಲೇ ಪ್ರೇಕ್ಷಕರ ಗಮನ ಸೆಳೆದ ಮೇಘಾ ಈಗಾಗಲೇ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟೀವ್‌ ಆಗಿರುವ ಅವರು ಆಗಾಗ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹೊಸ ತಮಿಳು ಚಿತ್ರದ ಅಪ್‌ಡೇಟ್‌ ಬಗ್ಗೆ ಮಾಹಿತಿ ನೀಡಿದ್ದಾರೆ.

ಭರತ್‌ ನಾಯಕ

ಮೇಘಾ ಶೆಟ್ಟಿ ಅಭಿನಯಿಸುತ್ತಿರುವ ತಮಿಳು ಚಿತ್ರಕ್ಕೆ ʼಕಾಲೈಯಾನ್‌ʼ ಎಂದು ಹೆಸರಿಡಲಾಗಿದೆ. ಕಾಲಿವುಡ್‌ನ ಜನಪ್ರಿಯ ನಟ ಭರತ್‌ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಸತ್ಯರಾಜ್‌, ಶಶಿಕುಮಾರ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಹೊಸ ಪ್ರತಿಭೆ ಎಂ.ಗುರು ನಿರ್ದೇಶಕರಾಗಿ ಕಾಲಿವುಡ್‌ಗೆ ಪರಿಚಿತರಾಗುತ್ತಿದ್ದಾರೆ.

ಮೇಘಾ ಹೇಳಿದ್ದೇನು?

ಹೊಸ ಚಿತ್ರದ ಬಗ್ಗೆ ಮಾತನಾಡಿದ ಮೇಘಾ ಶೆಟ್ಟಿ, ʼʼನನಗೆ ಲಭಿಸಿದ ದೊಡ್ಡ ಅವಕಾಶವಿದು. ಕಾಲಿವುಡ್‌ನ ಜನಪ್ರಿಯ ನಟರಾದ ಸತ್ಯರಾಜ್‌, ಶಶಿಕುಮಾರ್‌, ಭರತ್‌ ಅವರೊಂದಿಗೆ ಅಭಿನಯಿಸುವ ಅದೃಷ್ಟ ಸಿಕ್ಕಿದೆ. ಇದರಲ್ಲಿ ಶಕ್ತಿಯುತ ಪಾತ್ರ ಇದೆ. ಜತೆಗೆ ಇಡೀ ತಂಡ ಅದ್ಭುತವಾಗಿದೆ. ನನ್ನ ಹಾಗೇ ನಿರ್ದೇಶಕರಿಗೂ ಇದು ಮೊದಲ ಚಿತ್ರ. ಹೀಗಾಗಿ ಈ ಸಿನಿಮಾ ತುಂಬ ವಿಶೇಷ ಎನಿಸಿಕೊಂಡಿದೆ. ಗ್ರಾಮೀಣ ಪ್ರದೇಶದ ಹಿನ್ನೆಲೆ ಹೊಂದಿರುವ ಅದ್ಭುತ ಕಥೆಯನ್ನು ಇದು ಹೊಂದಿದೆʼʼ ಎಂದಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿರುವ ಮೇಘಾ ಅಳೆದೂ ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 2022ರಲ್ಲಿ ತೆರೆಕಂಡ ʼತ್ರಿಬಲ್‌ ರೈಡಿಂಗ್‌ʼ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ಗೆ ನಾಯಕಿಯಾಗಿ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಮಹೇಶ್‌ ಗೌಡ ನಿರ್ದೇಶನದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಲು ವಿಫಲವಾಗಿದ್ದರೂ ಮೇಘಾ ಪಾತ್ರ ಗಮನ ಸೆಳೆದಿತ್ತು. ಅದಾದ ಬಳಿಕ ಡಾಲಿಂಗ್‌ ಕೃಷ್ಣ ಜತೆ ನಟಿಸಿದ್ದʼ ದಿಲ್‌ಪಸಂದ್‌ʼ ತೆರೆಕಂಡಿತ್ತು. 2023ರಲ್ಲಿ ಜಯತೀರ್ಥ ನಿರ್ದೇಶನದಲ್ಲಿ ಬಿಡುಗಡೆಯಾದ ʼಕೈವಾʼ ಸಿನಿಮಾದಲ್ಲಿ ಧನ್ವೀರ್‌-ಮೇಘಾ ಶೆಟ್ಟಿ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಸದ್ಯ ಮೇಘಾ ಶೆಟ್ಟಿ ಕನ್ನಡ-ಮರಾಠಿಯಲ್ಲಿ ತಯಾರಾಗುತ್ತಿರುವ ʼಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆʼ, ʼಚೀತಾʼ ಮತ್ತು ʼಗ್ರಾಮಾಯಣʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ತಮಿಳು ಚಿತ್ರವನ್ನೂ ಒಪ್ಪಿಕೊಂಡಿದ್ದು, ಕನ್ನಡ ನಟಿಗೆ ಯಾವ ರೀತಿ ಅಲ್ಲಿ ಸ್ವಾಗತ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.