ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಪ್ರಜ್ವಲ್‌ ಸಜ್ಜನ ವ್ಯಕ್ತಿ, ಯಾವುದೇ ವಿವಾದಗಳಿಗೆ ತಲೆ ಹಾಕಿದವರಲ್ಲʼ; ʻಡೈನಾಮಿಕ್‌ ಪ್ರಿನ್ಸ್‌ʼ ಬೆಂಬಲಕ್ಕೆ ನಿಂತ ಮೇಘನಾ ರಾಜ್ ಸರ್ಜಾ

ನಟ ಪ್ರಜ್ವಲ್ ದೇವರಾಜ್ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ನೆಗೆಟಿವ್ ಕಾಮೆಂಟ್‌ ಹಾಗೂ ಅಪಪ್ರಚಾರದ ವಿರುದ್ಧ ಅವರ ಗೆಳತಿ, ನಟಿ ಮೇಘನಾ ರಾಜ್ ಸರ್ಜಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ಅವರ ಸಜ್ಜನಿಕೆ ಹಾಗೂ ಚಿತ್ರರಂಗದ ಮೇಲಿರುವ ಅವರ ಶ್ರದ್ಧೆಯನ್ನು ಶ್ಲಾಘಿಸಿರುವ ಮೇಘನಾ, ಮುಂಬರುವ 'ಕರಾವಳಿ' ಸಿನಿಮಾ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಲಿದೆ ಎಂದು ಹೇಳಿದ್ದಾರೆ.

ʻಅಪಪ್ರಚಾರಕ್ಕೆ ಕಿವಿಗೊಡಬೇಡಿʼ; ಪ್ರಜ್ವಲ್‌ ಫ್ಯಾನ್ಸ್‌ಗೆ ನಟಿ ಮೇಘನಾ ಮನವಿ

-

Avinash GR
Avinash GR Jul 10, 2026 6:27 PM

ಸ್ಯಾಂಡಲ್‌ವುಡ್‌ನ ನಟಿ ಮೇಘನಾ ರಾಜ್ ಸರ್ಜಾ ಅವರು ತಮ್ಮ ಗೆಳೆಯ, ನಟ ಪ್ರಜ್ವಲ್ ದೇವರಾಜ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಕರಾವಳಿ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ದೇವರಾಜ್ ಬಗ್ಗೆ ಕೇಳಿಬರುತ್ತಿರುವ ಕೆಲವು ನೆಗೆಟಿವ್ ಮಾತುಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮೇಘನಾ ಅವರು, ಎಲ್ಲರ ಸಪೋರ್ಟ್‌ ಪ್ರಜ್ವಲ್‌ಗೆ ಬೇಕು ಎಂದು ಹೇಳಿದ್ದಾರೆ. ಪ್ರಜ್ವಲ್ ಅವರ ವ್ಯಕ್ತಿತ್ವ ಹಾಗೂ 'ಕರಾವಳಿ' ಸಿನಿಮಾ ಕುರಿತು ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ.

ಪ್ರಜ್ವಲ್ ದೇವರಾಜ್ ಒಬ್ಬ ಸಜ್ಜನ ವ್ಯಕ್ತಿ

"ನನಗೆ 4-5 ವರ್ಷದ ವಯಸ್ಸಿದ್ದಾಗಿನಿಂದಲೂ ಪ್ರಜ್ವಲ್ ಗೊತ್ತು. ಅಂದಿನಿಂದ ಇಂದಿನವರೆಗೂ ಅವರು ಅತ್ಯಂತ ಸಜ್ಜನ ಮತ್ತು ಮೃದು ಸ್ವಭಾವದ ವ್ಯಕ್ತಿಯಾಗಿಯೇ ಉಳಿದಿದ್ದಾರೆ. ವೃತ್ತಿಜೀವನದಲ್ಲಿ ಅವರು ಎಂದಿಗೂ ಯಾವುದೇ ವಿವಾದಗಳಿಗೆ ತಲೆ ಹಾಕಿದವರಲ್ಲ ಅಥವಾ ಅನಗತ್ಯ ಕಿರಿಕ್‌ಗಳನ್ನು ಮಾಡಿಕೊಂಡವರಲ್ಲ. ಯಾರಿಗೆ ಸಹಾಯ ಬೇಕಿದ್ದರೂ ಸದಾ ಸಿದ್ಧರಿರುತ್ತಾರೆ" ಎಂದು ಮೇಘನಾ ರಾಜ್ ಹೇಳಿದ್ದಾರೆ.

ಪ್ರಜ್ವಲ್‌ಗೆ ಸಿನಿಮಾ ಮೇಲೆ ಶ್ರದ್ಧೆ ಇದೆ

ಪ್ರಜ್ವಲ್ ದೇವರಾಜ್ ಅವರೊಂದಿಗೆ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ಮೇಘನಾ ರಾಜ್, ಅವರ ಕೆಲಸದ ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ. "ಒಂದು ದೊಡ್ಡ ಚಿತ್ರರಂಗದ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದರೂ ಪ್ರಜ್ವಲ್ ಸಿನಿಮಾ ರಂಗದ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದಾರೆ. ಸ್ವತಃ ನಿರ್ಮಾಪಕರೂ ಆಗಿರುವ ಅವರಿಗೆ ಸಿನಿಮಾದ ಮೇಲಿರುವ ಡೆಡಿಕೇಷನ್ ಮತ್ತು ಕಮಿಟ್‌ಮೆಂಟ್ ಅದ್ಭುತವಾದದ್ದು. ಪ್ರಜ್ವಲ್‌ನ ಕೆಲವರು ಇವಾಗ ನೋಡಿರಬಹುದು, ಆದರೆ ಅವರನ್ನ ಪರ್ಸನಲಿ, ಪ್ರೊಫೆಷನಲಿ ಬಹಳಷ್ಟು ವರ್ಷಗಳಿಂದ ನಾವು ನೋಡ್ತಾ ಬಂದಿದ್ದೀವಿ. ಇಷ್ಟು ವರ್ಷಗಳ ಅವರ ಕೆರಿಯರ್‌ನಲ್ಲಿ ಇಲ್ಲದ ಕಪ್ಪು ಚುಕ್ಕೆ ಈಗ ಯಾಕೆ ಬರಬೇಕು ಅನ್ನೋ ಒಂದು ಪ್ರಶ್ನೆ ನಮಗೆಲ್ಲರಿಗೂ ಕಾಡುತ್ತೆ. ಇಂತಹ ಮಾತುಗಳಿಂದ ನನಗೆ ತೀವ್ರ ಬೇಸರವಾಗಿದೆ" ಎಂದು ಮೇಘನಾ ರಾಜ್‌ ತಿಳಿಸಿದ್ದಾರೆ.

Karavali: ಮಲಯಾಳಂ - ತಮಿಳಿನಲ್ಲಿ ಮಿಂಚಿದ ಮೇಲೆ ಕನ್ನಡಕ್ಕೆ ಮರಳಿದ ಸುಶ್ಮಿತಾ ಭಟ್; ಇದಕ್ಕೆ ರಾಜ್‌ ಬಿ ಶೆಟ್ಟಿಯೇ ಕಾರಣ!

'ಕರಾವಳಿ' ಪ್ರಜ್ವಲ್‌ಗೆ ವೃತ್ತಿ ಬದುಕಿಗೆ ತಿರುವು ನೀಡಲಿದೆ

ಪ್ರಜ್ವಲ್ ನಟನೆಯ ಮುಂಬರುವ 'ಕರಾವಳಿ' ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಮೇಘನಾ, "ಈ ಸಿನಿಮಾದ ಕಥೆ ಕೇಳುವಾಗ ನಾನು ಮತ್ತು ಪನ್ನಗ ಭರಣ ಜೊತೆಯಲ್ಲೇ ಇದ್ದೆವು. ಕಥೆ ಕೇಳಿದ ತಕ್ಷಣ ಪ್ರಜ್ವಲ್ ಫೋನ್ ಮಾಡಿ, ಇದೊಂದು ಅದ್ಭುತ ಹಾಗೂ ವಿಭಿನ್ನವಾದ ಕಥೆ, ತನ್ನ ವೃತ್ತಿಜೀವನಕ್ಕೆ ಹೊಸ ತಿರುವು ಕೊಡುವಂತಹ ಪಾತ್ರ ಎಂದು ಅತ್ಯಂತ ಎಕ್ಸೈಟ್ ಆಗಿ ಹೇಳಿದ್ದರು. ಅಂದು ಅವರಿಗಿದ್ದ ಅದೇ ಪ್ರೀತಿ, ಅಭಿಮಾನ ಇಂದಿಗೂ ಆ ಚಿತ್ರದ ಮೇಲಿದೆ" ಎಂದು ನೆನಪಿಸಿಕೊಂಡಿದ್ದಾರೆ.

"ಅವರ ಒಬ್ಬ ಆಪ್ತ ಸ್ನೇಹಿತೆಯಾಗಿ ನಾನು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದು ಇಷ್ಟೇ, ಪ್ರಜ್ವಲ್ ದೇವರಾಜ್ ಅವರ ವ್ಯಕ್ತಿತ್ವ ಹಾಗೂ ಸಿನೀ ಜರ್ನಿಯನ್ನು ನೀವೆಲ್ಲರೂ ಕಣ್ಣಾರೆ ನೋಡಿದ್ದೀರಾ. ಎಷ್ಟೋ ಜನ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರ ಒಳ್ಳೆಯ ಗುಣವನ್ನು ಅರಿತಿದ್ದೀರಾ. ಆದ್ದರಿಂದ ಅವರ ಬಗ್ಗೆ ಯಾರು ಏನೇ ಅಪಪ್ರಚಾರ ಮಾಡಿದರೂ, ಯಾರ ಮಾತಿಗೂ ಕಿವಿಗೊಡದೆ ಅವರ ಮೇಲಿರುವ ನಿಮ್ಮ ನಂಬಿಕೆಯನ್ನು ಹಾಗೇ ಉಳಿಸಿಕೊಳ್ಳಿ" ಎಂದು ಮೇಘನಾ ಹೇಳಿದ್ದಾರೆ.

ಅಭಿಮಾನಿಗಳಲ್ಲಿ ಮೇಘನಾ ರಾಜ್ ಮನವಿ

ಕನ್ನಡ ಕಲಾಭಿಮಾನಿಗಳು, ಪ್ರಜ್ವಲ್ ದೇವರಾಜ್ ಹಾಗೂ ನಟ ದೇವರಾಜ್ ಅವರ ಅಭಿಮಾನಿಗಳು ಇಷ್ಟು ವರ್ಷಗಳ ಕಾಲ ಪ್ರಜ್ವಲ್‌ಗೆ ಹೇಗೆ ಬೇಷರತ್ ಬೆಂಬಲ ನೀಡಿದ್ದಾರೋ, ಅದೇ ರೀತಿ ಮುಂದೆಯೂ ಅವರ ಮೇಲಿನ ನಂಬಿಕೆಯನ್ನು ಮುಂದುವರಿಸಬೇಕು ಎಂದು ಮೇಘನಾ ರಾಜ್ ವಿನಂತಿಸಿದ್ದಾರೆ. ಕೊನೆಯದಾಗಿ, "ಪ್ರಜ್ವಲ್, ನಾವೆಲ್ಲರೂ ಸದಾ ನಿಮ್ಮ ಜೊತೆ ಇರುತ್ತೇವೆ. ನಿಮ್ಮ ಹೊಸ ಸಿನಿಮಾ 'ಕರಾವಳಿ'ಗೆ ಆಲ್ ದಿ ವೆರಿ ಬೆಸ್ಟ್" ಎಂದು ಹಾರೈಸಿದ್ದಾರೆ.