ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Swayambhu Movie: ‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

Swayambhu Movie: ಸಣ್ಣ ಗ್ಯಾಪ್‌ನ ನಂತರ ಟಾಲಿವುಡ್‌ ನಲ್ಲಿ ಮರಳಿ ಹವಾ ಕ್ರಿಯೇಟ್ ಮಾಡಿರುವ ನಭಾ ನಟೇಶ್, ‘ನಾಗಬಂಧಂ’ ಸಕ್ಸಸ್ ಬೆನ್ನಲ್ಲೇ ‘ಸ್ವಯಂಭು’ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಸಾಲು ಸಾಲು ಹೊಸ ಬಿಗ್ ಆಫರ್‌ಗಳು ಕೂಡ ನಭಾ ಅವರನ್ನು ಹುಡುಕಿಕೊಂಡು ಬರುತ್ತಿವೆ.

‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

ನಟಿ ನಭಾ ನಟೇಶ್ -

Yashaswi Devadiga
Yashaswi Devadiga Jul 10, 2026 7:32 PM

ಕನ್ನಡತಿ, ಪಟಾಕಿ ಪೋರಿ ನಭಾ ನಟೇಶ್ (Nabha Natesh) ಸದ್ಯ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ಭರ್ಜರಿ ಸೌಂಡು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ನಾಗಬಂಧಂ’ (nagabandham Movie) ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದ್ದು, ನಭಾ ಅವರ ಅಭಿನಯ ಮತ್ತು ನೃತ್ಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಹಾಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮೇಲ್ನೋಟಕ್ಕೆ ಇದೊಂದು ಸಂಪೂರ್ಣ ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾ ಎಂದು ಅನಿಸಿದರೂ, ಕಮರ್ಷಿಯಲ್ (Comericial) ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಮನರಂಜನಾತ್ಮಕ ಅಂಶಗಳೂ ಈ ಚಿತ್ರದಲ್ಲಿವೆ.

ಬ್ರೇಕ್‌ನ ನಂತರ ಕಮ್‌ಬ್ಯಾಕ್ ಮಾಡಿದ ನಟಿ

ವರ್ಷಗಳ ಹಿಂದೆ ನಭಾ ನಟೇಶ್ ಅವರಿಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಅವರ ಎಡ ಭುಜದ ಮೂಳೆ ಮುರಿದು ಗಂಭೀರವಾದ ಪೆಟ್ಟಾಗಿತ್ತು. ಇದಕ್ಕಾಗಿ ಅವರು ಪದೇ ಪದೇ ಸರಣಿ ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಬೇಕಾಯಿತು. ಗಾಯದ ತೀವ್ರತೆಯಿಂದಾಗಿ ಸುದೀರ್ಘ ಕಾಲ ಚೇತರಿಸಿಕೊಳ್ಳುತ್ತಿದ್ದ ಅವರು, ಅನಿವಾರ್ಯವಾಗಿ ಚಿತ್ರರಂಗದಿಂದ ಕೆಲವು ಕಾಲ ಸಂಪೂರ್ಣ ದೂರ ಉಳಿದಿದ್ದರು. ಇದೀಗ ಎಲ್ಲ ನೋವುಗಳನ್ನು ಮೆಟ್ಟಿ ನಿಂತು ‘ನಾಗಬಂಧಂ’ ಮೂಲಕ ಭರ್ಜರಿ ಸಕ್ಸಸ್‌ ಜೊತೆಗೆ ಕಮ್‌ಬ್ಯಾಕ್ ಮಾಡಿರುವ ನಭಾಗೆ, ಪ್ರೇಕ್ಷಕರು ನೀಡಿದ ಅಭೂತಪೂರ್ವ ಬೆಂಬಲ ಮತ್ತು ಪ್ರೀತಿ ಅಪಾರ ಖುಷಿ ತಂದಿದೆ.

ನಿಖಿಲ್ ಸಿದ್ಧಾರ್ಥ್ ಜೊತೆ ‘ಸ್ವಯಂಭು’ ಚಿತ್ರದಲ್ಲಿ ರಾಣಿ ಲುಕ್

‘ಕಾರ್ತಿಕೇಯ’, ‘ಕಾರ್ತಿಕೇಯ-2’ ಹಾಗೂ ‘ಸ್ಪೈ’ ನಂತಹ ಹಿಟ್ ಚಿತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ಮುಂದಿನ ಚಿತ್ರ ‘ಸ್ವಯಂಭು’ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈ ಪಿರಿಯಾಡಿಕಲ್ ಹೈ-ಬಜೆಟ್ ಸಿನಿಮಾದಲ್ಲಿ ನಭಾ ನಟೇಶ್ ಸುಂದರ ವಲ್ಲಿ ಎಂಬ ವಿಶಿಷ್ಟ ಹಾಗೂ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಭರತ್ ಕೃಷ್ಣಮಾಚಾರಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದು, ಬಾಹುಬಲಿ ಆರ್ ಆರ್ ಆರ್ ಖ್ಯಾತಿಯ ಸೆಂತಿಲ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗುತ್ತಿದೆ.

ಒಟ್ಟಾರೆಯಾಗಿ, ಸಣ್ಣ ಗ್ಯಾಪ್‌ನ ನಂತರ ಟಾಲಿವುಡ್‌ ನಲ್ಲಿ ಮರಳಿ ಹವಾ ಕ್ರಿಯೇಟ್ ಮಾಡಿರುವ ನಭಾ ನಟೇಶ್, ‘ನಾಗಬಂಧಂ’ ಸಕ್ಸಸ್ ಬೆನ್ನಲ್ಲೇ ‘ಸ್ವಯಂಭು’ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಸಾಲು ಸಾಲು ಹೊಸ ಬಿಗ್ ಆಫರ್‌ಗಳು ಕೂಡ ನಭಾ ಅವರನ್ನು ಹುಡುಕಿಕೊಂಡು ಬರುತ್ತಿವೆ.