ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ʻಬಿಗ್ ಬಾಸ್ʼ ಕನ್ನಡದಿಂದ ಆಫರ್; ಆದರೆ ಈ ಶೋಗೆ ʻನಾನು ಹೋಗಲ್ಲʼ ಎಂದಿದ್ದೇಕೆ?
ಕನ್ನಡ ಕಿರುತೆರೆಯ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ ಸೀಸನ್ 13' ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್ ಆಗಲಿದ್ದು, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರಿಗೆ ಬಿಗ್ ಬಾಸ್ ಕಾಸ್ಟಿಂಗ್ ತಂಡದಿಂದ ಬಂದಿದ್ದ ಆಹ್ವಾನವನ್ನು ಅವರು ನಿರಾಕರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೋ ಪ್ರತಿನಿಧಿ ಜೊತೆಗಿನ ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಅವರು ಹಂಚಿಕೊಂಡಿದ್ದಾರೆ.
-
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ಸೆಪ್ಟೆಂಬರ್ ಮೊದಲ ವಾರದಿಂದ ಆರಂಭವಾಗಲಿದೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಹೆಚ್ಚಾಗಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರಿಗೆ ಬಿಗ್ ಬಾಸ್ ತಂಡದಿಂದ ಆಹ್ವಾನ ಬಂದಿದೆ.
ಈ ಕುರಿತು ಖುದ್ದು ಅಬ್ದುಲ್ ರಜಾಕ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ತಂಡದ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದ ಸಂಭಾಷಣೆ ಆ ಆಡಿಯೋದಲ್ಲಿದೆ.
ಆ ಆಡಿಯೋ ಕ್ಲಿಪ್‌ನಲ್ಲಿ ಏನಿದೆ?
ಬಿಗ್ ಬಾಸ್ ಕನ್ನಡದ ಕಾಸ್ಟಿಂಗ್ ಡೈರೆಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, "ಬಿಗ್ ಬಾಸ್ ಎಂಬುದು 100 ದಿನಗಳ ರಿಯಾಲಿಟಿ ಶೋ. ಇದರಲ್ಲಿ ಸುಮಾರು 18 ರಿಂದ 20 ಜನ ಸಾಧಕರು, ನಟರು ಹಾಗೂ ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಾನು ನಿಮ್ಮನ್ನು ಹಲವು ವರ್ಷಗಳಿಂದ ಗಮನಿಸುತ್ತಿದ್ದೇನೆ. ನಿಮ್ಮ ಮಾತಿನಲ್ಲಿ ಅದ್ಭುತ ಆತ್ಮವಿಶ್ವಾಸ, ಸ್ಪಷ್ಟತೆ ಮತ್ತು ಕಲ್ಪನೆಯಿದೆ. ಇಂತಹ ವ್ಯಕ್ತಿತ್ವ ಮನೆಯಲ್ಲಿದ್ದರೆ, ಜನರ ಜೊತೆ ಬೆರೆಯುವ ನಿಮ್ಮ ರೀತಿ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ. ಶೋಗೆ ನೀವು ಉತ್ತಮ ಕೊಡುಗೆ ನೀಡಬಲ್ಲಿರಿ" ಎಂದು ಅಬ್ದುಲ್ ರಜಾಕ್‌ಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ರಜಾಕ್, "ನಾನು ಬಂದರೆ ನಿಮ್ಮ ಶೋಗೆ ಒಳ್ಳೆಯದಾಗುತ್ತದೆ ಎಂದು ಅನಿಸುತ್ತದೆಯೇ? ಮುಂದಿನ ಪ್ರಕ್ರಿಯೆ ಹೇಗೆ?" ಎಂದೆಲ್ಲಾ ವಿಚಾರಿಸಿದ್ದಾರೆ. ಆಗ ಮತ್ತಷ್ಟು ವಿವರ ನೀಡಿದ ಪ್ರತಿನಿಧಿ, "ಟಿವಿ ಅಥವಾ ಸಂದರ್ಶನಗಳಲ್ಲಿ ನಿಮ್ಮನ್ನು ನೋಡಿರುವುದಕ್ಕಿಂತ ಹೆಚ್ಚಾಗಿ, ಒಬ್ಬ ವ್ಯಕ್ತಿಯಾಗಿ ನಿಮ್ಮ ಬಾಲ್ಯ, ಜರ್ನಿ ಮತ್ತು ಮನೆಯಲ್ಲಿ ನೀವು ಹೇಗಿರುತ್ತೀರಾ ಎಂಬ ನೈಜ ವ್ಯಕ್ತಿತ್ವವನ್ನು ಜನರಿಗೆ ತಲುಪಿಸುವುದು ಈ ಶೋದ ಉದ್ದೇಶ. ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಬಾರಿ ಅತ್ಯಂತ ಅದ್ದೂರಿಯಾಗಿ ಬಿಗ್ ಬಾಸ್ ಲಾಂಚ್ ಆಗಲಿದೆ. ಮುಂದಿನ ಚರ್ಚೆಗಾಗಿ ನಾಳೆ ಅಥವಾ ಸೋಮವಾರ ಭೇಟಿಯಾಗೋಣ" ಎಂದಿದ್ದಾರೆ. ಇದಕ್ಕೆ ಭೇಟಿಯಾಗಲು ಅಬ್ದುಲ್ ರಜಾಕ್ ಕೂಡ ಒಪ್ಪಿಗೆ ಸೂಚಿಸಿದ್ದರು.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಆಫರ್ ನಿರಾಕರಿಸಿದ ಅಬ್ದುಲ್ ರಜಾಕ್
ಬಿಗ್ ಬಾಸ್ ತಂಡದಿಂದ ಬಂದ ಅವಕಾಶವನ್ನು ನಿರಾಕರಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಅಬ್ದುಲ್ ರಜಾಕ್, "ಬಿಗ್ ಬಾಸ್ ಕನ್ನಡ ತಂಡಕ್ಕೆ ನನ್ನ ಹೃತ್ತೂರ್ವಕ ಧನ್ಯವಾದಗಳು. ಈ ದೊಡ್ಡ ವೇದಿಕೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಸದಾ ಋಣಿ. ಆದರೆ ಅನಿವಾರ್ಯ ಕಾರಣಗಳಿಂದ ಈ ಆವೃತ್ತಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಪ್ರೀತಿ ಮತ್ತು ಬೆಂಬಲಕ್ಕೆ ನನ್ನ ನಮಸ್ಕಾರಗಳು" ಎಂದು ಆಡಿಯೋ ಕ್ಲಿಪ್ ಜೊತೆಗೆ ಬರೆದುಕೊಂಡಿದ್ದಾರೆ.
ಅಬ್ದುಲ್ ರಜಾಕ್ ಹಂಚಿಕೊಂಡಿರುವ ವಿಡಿಯೋ
ಈ ಬಾರಿ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ 6 ಭಾಷೆಗಳ ಆವೃತ್ತಿಗಳು ಒಟ್ಟಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಸೆಪ್ಟೆಂಬರ್ ಮೊದಲ ವಾರದಿಂದ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬಾಂಗ್ಲಾ ಭಾಷೆಗಳ ಹೊಸ ಸೀಸನ್‌ಗಳು 'ಜಿಯೋಹಾಟ್‌ಸ್ಟಾರ್' ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿವೆ.