ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮಾತಾಡಿದ್ರು ಕಷ್ಟ, ಮಾತನಾಡದಿದ್ರು ಕಷ್ಟʼ; ಟ್ರೋಲ್‌ಗಳ ಬಗ್ಗೆ ಇಷ್ಟೊಂದು ಸೀರಿಯಸ್‌ ಆಗಿಬಿಟ್ರಾ ‌ʻತಲೈವಾʼ ರಜನಿಕಾಂತ್?

ತಮಿಳುನಾಡು ಚುನಾವಣೆ ಹಾಗೂ ಮುಖ್ಯಮಂತ್ರಿ ವಿಜಯ್ ಜನ್ಮದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಅನಗತ್ಯ ಟ್ರೋಲ್‌ಗಳ ವಿರುದ್ಧ ಸೂಪರ್‌ಸ್ಟಾರ್ ರಜನಿಕಾಂತ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಹೊಸ ಚಿತ್ರ ‘ಧರ್ಮನ್’ ಲಾಂಚ್ ವೇಳೆ ಮಾತನಾಡಿದ ಅವರು, ಎಲ್ಲರಿಂದಲೂ ಪ್ರಶಂಸೆ ಬಯಸುವುದು ಮೂರ್ಖತನ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸುಖಾಸುಮ್ಮನೆ ಟ್ರೋಲ್‌ ಮಾಡುವವರಿಗೆ ಮಾತಿನೇಟು ನೀಡಿದ ʻತಲೈವಾʼ ರಜನಿಕಾಂತ್!

-

Avinash GR
Avinash GR Jun 24, 2026 3:34 PM

‘ಸೂಪರ್ ಸ್ಟಾರ್’ ರಜನಿಕಾಂತ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ಚುನಾವಣೆ ಮತ್ತು ಅದರ ಫಲಿತಾಂಶದ ವೇಳೆಯಂತೂ ಟ್ರೋಲರ್‌ಗಳು ಅನವಶ್ಯಕವಾಗಿ ರಜನಿ ಹೆಸರನ್ನು ಎಳೆದು ತಂದು ಟ್ರೋಲ್ ಮಾಡಿದ್ದರು. ಪದೇಪದೇ ಸೋಶಿಯಲ್ ಮೀಡಿಯಾ ಮೀಮ್ಸ್ ಮತ್ತು ಟೀಕೆಗಳಿಗೆ ಗುರಿಯಾಗುತ್ತಿದ್ದ ‘ತಲೈವಾ’, ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ಎಲ್ಲರೂ ಪ್ರಶಂಸಿಸಬೇಕು ಎಂದು ನಿರೀಕ್ಷಿಸುವುದು ಮೂರ್ಖತನ!

ತಮ್ಮ ಹೊಸ ಚಿತ್ರ ‘ಧರ್ಮನ್’ ಲಾಂಚ್ ವೇಳೆ ಇತ್ತೀಚಿನ ತಿಂಗಳುಗಳಲ್ಲಿ ನಡೆಯುತ್ತಿರುವ ಟ್ರೋಲ್ ಹಾಗೂ ಸೋಶಿಯಲ್ ಮೀಡಿಯಾ ಚರ್ಚೆಗಳ ಕುರಿತು ರಜನಿಕಾಂತ್ ಮುಕ್ತವಾಗಿ ಮಾತನಾಡಿದ್ದಾರೆ. ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸದೆಯೇ ಟ್ರೋಲರ್‌ಗಳಿಗೆ ಸೂಕ್ತವಾಗಿ ಉತ್ತರಿಸಿದ ರಜನಿಕಾಂತ್, "ನಾವು ಮೌನವಾಗಿದ್ದರೆ, ಏಕೆ ಮಾತನಾಡುತ್ತಿಲ್ಲ ಎಂದು ಜನರು ಕೇಳುತ್ತಾರೆ. ನಾವು ಮಾತನಾಡಲು ಪ್ರಾರಂಭಿಸಿದರೆ, ಮಾತನ್ನು ಮುಂದುವರಿಸಲು ಹೇಳುತ್ತಾರೆ. ನಾವು ಮಾತನಾಡುವುದನ್ನು ಮುಂದುವರಿಸಿದರೆ, ಮೌನವಾಗಿರಬೇಕಿತ್ತು ಎನ್ನುತ್ತಾರೆ. ನಮ್ಮನ್ನು ಇಷ್ಟಪಡದವರು ನಾವು ಏನೇ ಮಾಡಿದರೂ ಇಷ್ಟಪಡುವುದಿಲ್ಲ, ಆದರೆ ನಮ್ಮನ್ನು ಪ್ರಶಂಸಿಸುವವರು ನಮ್ಮನ್ನು ಬೆಂಬಲಿಸುತ್ತಲೇ ಇರುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಎಲ್ಲರೂ ನಮ್ಮನ್ನು ಹೊಗಳಬೇಕೆಂದು ನಿರೀಕ್ಷಿಸುವುದು ಮೂರ್ಖತನ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Thalaivar 173: ತಲೈವಾ-173 ಸಿನಿಮಾಗಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್

ಸಿಎಂ ವಿಜಯ್ ಜನ್ಮದಿನಕ್ಕೆ ಶುಭ ಹಾರೈಕೆ

ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗಿನ ಬಾಂಧವ್ಯದ ಕುರಿತಾದ ಪ್ರಶ್ನೆಗಳಿಗೂ ರಜನಿಕಾಂತ್ ಉತ್ತರಿಸಿದ್ದಾರೆ. ಇತ್ತೀಚೆಗೆ (ಜೂನ್ 22) ಸಿಎಂ ವಿಜಯ್ ತಮ್ಮ 52ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಕಮಲ್ ಹಾಸನ್ ಸೇರಿದಂತೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಸಾರ್ವಜನಿಕವಾಗಿ ಶುಭ ಕೋರಿದ್ದರು. ಆದರೆ ರಜನಿಕಾಂತ್ ಸಾರ್ವಜನಿಕವಾಗಿ ಶುಭ ಕೋರದಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟೀಕಿಸಿದ್ದರು.

ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, "ನಾವಿಬ್ಬರೂ ಖಾಸಗಿಯಾಗಿ ಮಾತನಾಡಿದ್ದೇವೆ" ಎಂದು ಹೇಳುವ ಮೂಲಕ ಅನಗತ್ಯ ಚರ್ಚೆಗಳಿಗೆ ರಜನಿಕಾಂತ್ ತೆರೆ ಎಳೆದಿದ್ದಾರೆ. ಈ ವರ್ಷದ ಆರಂಭದಲ್ಲಿ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಮತ್ತು ಅವರ ಟಿವಿಕೆ (TVK) ಪಕ್ಷವು ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಾಗ ಮೊದಲು ಶುಭ ಕೋರಿದವರಲ್ಲಿ ರಜನಿಕಾಂತ್ ಒಬ್ಬರಾಗಿದ್ದರು ಎಂಬುದು ಗಮನಾರ್ಹ.

Coolie-War 2 First Reactions: ಬಾಕ್ಸ್‌ ಆಫೀಸ್‌ನಲ್ಲಿ ರಜನಿಕಾಂತ್‌-ಹೃತಿಕ್‌, ಜೂ. ಎನ್‌ಟಿಆರ್‌ ಬಿಗ್‌ ಫೈಟ್‌; ಪ್ರೇಕ್ಷಕರ ಒಲವು ಯಾರ ಕಡೆಗೆ?

'ಧರ್ಮನ್' ಚಿತ್ರದಲ್ಲಿ ರಜನಿ "ಡೆಡ್ಲಿ ಡಾಕ್ಟರ್"!

ಇದೇ ಸಂದರ್ಭದಲ್ಲಿ ರಜನಿಕಾಂತ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ಧರ್ಮನ್’ ಅಧಿಕೃತವಾಗಿ ಲಾಂಚ್ ಆಗಿದೆ. ಅಶ್ವತ್ ಮಾರಿಮುತ್ತು ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ಅವರು ತಮ್ಮ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್' ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ "ಡೆಡ್ಲಿ ಡಾಕ್ಟರ್" ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಹಿರಿಯ ನಟಿ ಸಿಮ್ರಾನ್, ರಾಶಿ ಖನ್ನಾ ಮತ್ತು ಕಾಮಿಡಿ ಕಿಂಗ್ ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಗಣವೇ ಇರಲಿದೆ.