Actor Rajinikanth: ʼಕೂಲಿʼ ಬಿಡುಗಡೆ ಹೊತ್ತಲ್ಲೇ ವಿವಾದ ಹುಟ್ಟುಹಾಕಿದ್ರಾ ರಜನಿಕಾಂತ್? ವೇದಿಕೆ ಮೇಲೆ ಆಮೀರ್ ಖಾನ್, ಮಲಯಾಳಂ ನಟನಿಗೆ ತಲೈವಾ ಅವಮಾನ?
Coolie Movie: ಈ ವರ್ಷದ ಬಹುನಿರೀಕ್ಷಿತ ಕೂಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರಜನಿಕಾಂತ್ ನಟನೆಯ 171ನೇ ಸಿನಿಮಾ ಇದಾಗಿದ್ದು, ಈಗಾಗಲೇ ಕ್ರೇಝ್ ಆರಂಭವಾಗಿದೆ. ಈ ಮಧ್ಯೆ ಆಡಿಯೊ ಲಾಂಚ್ ವೇಲೆ ರಜನಿಕಾಂತ್ ತಮ್ಮ ಸಹನಟರಾದ ಆಮೀರ್ ಖಾನ್ ಮತ್ತು ಸೌಬಿನ್ ಶಾಹಿರ್‌ನನ್ನು ಅವಮಾನಿದ್ದಾರೆ ಎನ್ನುವ ವಿವಾದ ಹುಟ್ಟಿಕೊಂಡಿದೆ.


ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Actor Rajinikanth) ನಟನೆಯ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಕೂಲಿ' (Coolie) ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 14ರಂದು ಸಿನಿಮಾ ತೆರೆ ಕಾಣಲಿದ್ದು, ತಮಿಳುನಾಡು ಮಾತ್ರವಲ್ಲ ವಿಶ್ವದೆಲ್ಲೆಡೆ ಇರುವ ಅವರ ಅಭಿಮಾನಿಗಳು ಇದಕ್ಕಾಗಿ ಕಾದು ಕುಳಿತಿದ್ದಾರೆ. ಬಿಡುಗಡೆ ಹೊತ್ತಿನಲ್ಲೇ ಇದೀಗ ರಜನಿಕಾಂತ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮ್ಮ ಸಹನಟರನ್ನು ಹೊಗಳುವ ಭರದಲ್ಲಿ ಆಮೀರ್ ಖಾನ್ (Aamir Khan) ಮತ್ತು ಸೌಬಿನ್ ಶಾಹಿರ್ (Soubin Shahir) ಅವರ ಬಾಡಿ ಶೇಮಿಂಗ್ ಮಾಡಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ. ರಜನಿಕಾಂತ್ ವೇದಿಕೆ ಮೇಲೆಯೇ ಆಮೀರ್ ಖಾನ್ ಅವರನ್ನು ಕುಳ್ಳ ಎಂದಿದ್ದು, ಸೌಬಿನ್‌ನನ್ನು ಬೋಳತಲೆಯ ವ್ಯಕ್ತಿ ಎಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ವಾದ ನಡೆಯುತ್ತಿದೆ.
ಇತ್ತೀಚೆಗೆ ಆಯೋಜಿಸಿದ್ದ ʼಕೂಲಿʼ ಸಿನಿಮಾದ ಆಡಿಯೊ ಲಾಂಚ್ ವೇಳೆ ಈ ಘಟನೆ ನಡೆದಿದೆ. ರಜನಿಕಾಂತ್ ತಮ್ಮ ಸಹನಟರನ್ನು ಬೇಕೆಂತಲೇ ಅವಮಾನಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರಕ್ಕೆ ಅವರು ಟ್ರೋಲ್‌ಗೆ ಗುರಿಯಾಗಿದ್ದಾರೆ.
Don't know why no one is even talking about this one 🤷🏻♂️
— 𝘛𝘰𝘮𝘺 (@tomy_ignatious) August 11, 2025
Just look how he Apprecaiated Soubin for his performance ❤️
When cast was announced even us also just doubted soubin, the same kinda thought would have came in his mind too.#Rajnikanth | #Coolie
What Bro...Why Brooo🙏🏻 pic.twitter.com/HMqFmhVVlR
ಈ ಸುದ್ದಿಯನ್ನೂ ಓದಿ: Coolie Movie: ರಿಲೀಸ್‌ಗೂ ಮುನ್ನ ರಜನಿಕಾಂತ್ ನಟನೆಯ ಕೂಲಿಗೆ ಭರ್ಜರಿ ಕಲೆಕ್ಷನ್!
ರಜನಿಕಾಂತ್ ಹೇಳಿದ್ದೇನು?
"ನಿರ್ದೇಶಕ ಲೋಕೇಶ್ ಕನಕರಾಜ್ ಬಂದು 'ಕೂಲಿ' ಸಿನಿಮಾ ಕಥೆ ಹೇಳಿದರು. ಇಷ್ಟವಾಗಿ ಒಪ್ಪಿಕೊಂಡೆ. ಮುಖ್ಯವಾದ ಪಾತ್ರಕ್ಕೆ ಸೌಬಿನ್ ಶಾಹಿರ್ ನಟಿಸಿದರೆ ಚೆನ್ನಾಗಿರುತ್ತದೆ ಎಂದರು. ಆಗ ನನಗೆ ಸೌಬಿನ್ ಯಾರೆಂದು ಗೊತ್ತಿರಲಿಲ್ಲ. ಈ ಬಗ್ಗೆ ಲೋಕೇಶ್ ಬಳಿ ಪ್ರಶ್ನಿಸಿದೆ. ಅದಕ್ಕೆ ಅವರು 'ಮಂಜುಮೇಲ್ ಬಾಯ್ಸ್' ಚಿತ್ರದಲ್ಲಿ ನಟಿಸಿದ್ದಾರೆ ಎಂದರು. ಜತೆಗೆ ಫೋಟೊ ತೋರಿಸಿದರು. ಅದನ್ನು ನೋಡಿ ಏನಿದು ಬೋಳುತಲೆ, ಇವ್ರು ಆ ಪಾತ್ರಕ್ಕೆ ಸೂಕ್ತವೇ? ಎಂದು ಅನುಮಾನ ವ್ಯಕ್ತಪಡಿಸಿದೆ. ಆದರೆ ಬಳಿಕ ನನಗಿದ್ದ ಅನುಮಾನಕ್ಕೆಲ್ಲ ಉತ್ತರ ಸಿಕ್ಕಿತುʼʼ ಎಂದು ತಿಳಿಸಿದರು.
ಮುಂದುವರಿದು, ʼʼಲೋಕೇಶ್ ನನ್ನ ಬಳಿ 3ನೇ ದಿನ ಚಿತ್ರೀಕರಣಕ್ಕೆ ಹಾಜರಾಗುವಂತೆ ಸೂಚಿಸಿದರು. ಮೊದಲೆರಡು ದಿನ ಅವರು ಸೌಬಿನ್ ನಟನೆಯ ಭಾಗದ ಶೂಟಿಂಗ್ ನಡೆಸಿದ್ದರು. ಕೊನೆಗೆ ನಾನು ತೆರಳಿದಾಗ ಸೌಬಿನ್ ನಟಿಸಿದ್ದ ಭಾಗವನ್ನು ತೋರಿಸಿದರು. ಅವರೆಂತಹ ಅದ್ಭುತ ಕಲಾವಿದ ಎನ್ನುವುದು ಆಗ ತಿಳಿಯಿತುʼʼ ಎಂದು ರಜನಿಕಾಂತ್ ಹೇಳಿದರು.
ಇನ್ನು ಆಮೀರ್ ಖಾನ್ ಅವರನ್ನು ಹೊಗಳುವ ಭರದಲ್ಲಿಯೂ ಎಡವಟ್ಟು ಮಾಡಿಕೊಂಡಿದ್ದಾರೆ. "ಆಮೀರ್ ಖಾನ್ ಕೂಡ ಕಮಲ್ ಹಾಸನ್ ರೀತಿ ಅದ್ಭುತ ನಟ. ಬಾಲಿವುಡ್‌ನಲ್ಲಿ ಒಂದುಕಡೆ ಶಾರುಖ್ ಖಾನ್ ಹಾಗೂ ಮತ್ತೊಂದು ಕಡೆ ಸಲ್ಮಾನ್ ಖಾನ್ ನಡುವೆ ಆಮೀರ್ ಖಾನ್ ಕುಳ್ಳಗಿದ್ದಾರೆ. ಆದರೂ ಇದೀಗ ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ನನ್ನ ದೊಡ್ಡ ಸೆಲ್ಯೂಟ್" ಎಂದು ರಜನಿಕಾಂತ್ ತಿಳಿಸಿದರು.
ಆಮೀರ್ ಖಾನ್ ಮತ್ತು ಸೌಬಿನ್ ಅವರನ್ನು ರಜನಿಕಾಂತ್ ಹೊಗಳಿದ್ದರೂ ಇದಕ್ಕಾಗಿ ಬಳಸಿದ ಒಂದೇ ಒಂದು ಪದ ಸದ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಮೀರ್ ಖಾನ್‌ನಂತಹ ಸೂಪರ್ ಸ್ಟಾರ್ ಮತ್ತು ಸೌಬಿನ್‌ನಂತಹ ಪ್ರತಿಭಾವಂತ ನಟನನ್ನು ತಲೈವಾ ಅವಮಾನಿಸಿದ್ದಾರೆ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರದ ಬಿಡುಗಡೆ ಹೊಸ್ತಿಲಲ್ಲಿ ರಜನಿಕಾಂತ್ ಅನಗತ್ಯ ವಿವಾದ ಮೇಲೆ ಎಳೆದುಕೊಂಡಿದ್ದಕ್ಕೆ ಅವರ ಅಭಿಮಾನಿಗಳು ಬೇಸರಿಸಿಕೊಂಡಿದ್ದಂತು ಸುಳ್ಳಲ್ಲ.
ಬಹುತಾರಾಗಣದ ʼಕೂಲಿʼ ಚಿತ್ರದಲ್ಲಿ ರಜನಿಕಾಂತ್, ಆಮೀರ್ ಖಾನ್, ಸೌಬಿನ್ ಜತೆಗೆ ಕನ್ನಡದ ಉಪೇಂದ್ರ, ರಚಿತಾ ರಾಮ್, ಶ್ರುತಿ ಹಾಸನ್, ನಾಗಾರ್ಜುನ, ಸತ್ಯರಾಜ್ ಮತ್ತಿತರರು ನಟಿಸಿದ್ದಾರೆ.