ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ಮಾತಿಗೆ 40 ಲಕ್ಷ ರೂ. ಕಳುಹಿಸಿಕೊಟ್ಟಿದ್ದ ನಟ ರಾಮ್‌ ಚರಣ್;‌ ಚಿರು ಪುತ್ರನ ಉದಾರತೆಯನ್ನು ಕೊಂಡಾಡಿದ ಡ್ಯಾನ್ಸ್‌ ಮಾಸ್ಟರ್‌

Ram Charan Birthday: ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರ ಜನ್ಮದಿನದಂದು (ಮಾ.27) ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ರಾಮ್‌ ಚರಣ್‌ ಅವರ ಉದಾರತೆಯನ್ನು ಕೊಂಡಾಡಿದ್ದಾರೆ.

ʻಕಡಿಮೆಯಾದ್ರೆ ಹೇಳಿ ಹಣ ಕೊಡ್ತೀನಿʼ; ರಾಮ್ ಚರಣ್ ಉದಾರತೆಗೆ ಇಲ್ಲಿದೆ ಸಾಕ್ಷಿ

-

Avinash GR
Avinash GR Mar 27, 2026 7:16 PM

ʻಮೆಗಾ ಸ್ಟಾರ್‌ʼ ಚಿರಂಜೀವಿ ಅವರ ಪುತ್ರ, ʻಮೆಗಾ ಪವರ್ ಸ್ಟಾರ್‌ʼ ರಾಮ್ ಚರಣ್‌ ಅವರು ಇಂದು (ಮಾ.27) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇದೇ ವೇಳೆ ಅವರ ಪೆದ್ದಿ ಚಿತ್ರದ ಟೀಸರ್‌ ಕೂಡ ರಿಲೀಸ್‌ ಆಗಿದೆ. ಈ ನಡುವೆ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ರಾಮ್‌ ಚರಣ್‌ ಅವರ ಉದಾರತೆಗೆ ಒಂದು ಉದಾಹರಣೆಯನ್ನು ನೀಡಿದ್ದಾರೆ ಮತ್ತು ರಾಮ್ ಚರಣ್‌ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಜಾನಿ ಮಾಸ್ಟರ್‌ ಹೇಳಿದ್ದೇನು?

"ರಾಮ್‌ ಚರಣ್ ಅವರು ನಮ್ಮ ಚಿತ್ರರಂಗಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಅದೃಷ್ಟ ಎನ್ನಬಹುದು. ಅವರು ಕೇವಲ ನಟನಾಗಿ ಮಾತ್ರವಲ್ಲ, ಅವರನ್ನು ನಂಬಿದ ಪ್ರತಿಯೊಬ್ಬರಿಗೂ ಆಸರೆಯಾಗಿದ್ದಾರೆ. ಕಳೆದ ಬಾರಿ ಇದೇ ವೇದಿಕೆಯ ಮೇಲೆ ನಮ್ಮ ಡ್ಯಾನ್ಸರ್‌ಗಳಿಗೆ ಆರೋಗ್ಯ ವಿಮೆ ಮಾಡಿಸಿಕೊಡುವುದಾಗಿ ರಾಮ್ ಚರಣ್ ಅವರು ಮಾತು ಕೊಟ್ಟಿದ್ದರು. ಡ್ಯಾನ್ಸರ್‌ಗಳ ಕಷ್ಟ ಏನೆಂಬುದು ಅವರಿಗೆ ಚೆನ್ನಾಗಿ ಗೊತ್ತು.‌ ಹಾಗಾಗಿಯೇ, ಕೊಟ್ಟ ಮಾತಿನಂತೆ ತಕ್ಷಣವೇ ನಮ್ಮ ಡ್ಯಾನ್ಸರ್ಸ್ ಯೂನಿಯನ್‌ಗೆ 40 ಲಕ್ಷ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದರು. ಈ 40 ಲಕ್ಷ ರೂ. ಇದು ಕೇವಲ ಹಣವಲ್ಲ, ಸುಮಾರು 500 ರಿಂದ 600 ಕುಟುಂಬಗಳ ಆರೋಗ್ಯದ ಭರವಸೆ" ಎಂದು ಜಾನಿ ಮಾಸ್ಟರ್ ಭಾವುಕರಾಗಿದ್ದಾರೆ.

Ram Charan: ʻಟ್ರೈಲರ್ ರಿಲೀಸ್‌ ಮಾಡಿ...ಇಲ್ಲದಿದ್ದರೆ ಆತ್ಮಹತ್ಯೆ ಮಾಡ್ಕೊತೀನಿʼ- ನಟ ರಾಮ್ ಚರಣ್‌ ಅಭಿಮಾನಿಯ ಹುಚ್ಚಾಟ

ಕಡಿಮೆಯಾದರೆ ಹೇಳಿ ಕೊಡ್ತಿನಿ

"ಈ ಕಾಲದಲ್ಲಿ ಯಾರಾದರೂ ತಮ್ಮ ಜೇಬಿನಿಂದ 40 ರೂ. ತೆಗೆದು ಕೊಡುವುದಕ್ಕೂ ನೂರು ಸಲ ಯೋಚಿಸುತ್ತಾರೆ. ಅಂಥದ್ದರಲ್ಲಿ ಒಂದು ಮಾತು ಕೇಳಿದ್ದಕ್ಕೆ, ತಕ್ಷಣವೇ ರಾಮ್ ಚರಣ್ 40 ಲಕ್ಷ ರೂ. ನೀಡಿದ್ದಾರೆ. 'ಕಡಿಮೆಯಾದರೆ ಹೇಳಿ, ನಾನು ಕೊಡುತ್ತೇನೆ' ಎಂಬ ಭರವಸೆ ಮಾತುಗಳು ಅವರಿಂದ ಬಂದವು. 'ನಾನು ಯಾವಾಗಲೂ ಡ್ಯಾನ್ಸರ್‌ಗಳ ಜೊತೆಗಿರುತ್ತೇನೆ. ನನ್ನ ಹಿಂದೆ ಅವರು ತುಂಬಾ ಕಷ್ಟಪಡುತ್ತಾರೆ. ನಾನು ಒಮ್ಮೆ ಡ್ಯಾನ್ಸ್ ಮಾಡಿದರೆ, ಅವರು ನೂರು ಬಾರಿ ಡ್ಯಾನ್ಸ್ ಮಾಡಿ ನನ್ನನ್ನು ಪ್ರೋತ್ಸಾಹಿಸುತ್ತಾರೆ' ಎಂದು ರಾಮ್‌ ಚರಣ್ ಅಣ್ಣ ಹೇಳಿದ್ದರು. ಇದಕ್ಕಾಗಿ ಇಡೀ ನೃತ್ಯ ಕಲಾವಿದರ ಒಕ್ಕೂಟ ಅವರಿಗೆ ಚಿರಋಣಿಯಾಗಿದೆ" ಎಂದು ಜಾನಿ ಮಾಸ್ಟರ್‌ ಹೇಳಿದ್ದಾರೆ.

ರಾಮ್‌ ಚರಣ್‌ ಪೋಷಕರಿಗೆ ಧನ್ಯವಾದಗಳು

"ರಾಮ್ ಚರಣ್ ಅಂತಹ ಒಬ್ಬ ಅದ್ಭುತ ನಟ ಮತ್ತು ಒಳ್ಳೆಯ ವ್ಯಕ್ತಿಯನ್ನು ನಮಗಾಗಿ ನೀಡಿದ್ದಕ್ಕೆ ಚಿರಂಜೀವಿ ಮತ್ತು ಸುರೇಖಾ ದಂಪತಿಗೆ ದೊಡ್ಡ ಧನ್ಯವಾದಗಳು. ಚಿರಂಜೀವಿ ಸರ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಡ್ಯಾನ್ಸ್ ಎಂದರೆ ಅದು ಚಿರಂಜೀವಿ. ಪ್ರತಿಯೊಬ್ಬ ಡ್ಯಾನ್ಸರ್ ಅವರಿಂದಲೇ ಸ್ಫೂರ್ತಿ ಪಡೆದವರು. ನನ್ನ ಪ್ರತಿಭೆಯನ್ನು ಗುರುತಿಸಿ 'ರಚ್ಚ' ಸಿನಿಮಾದಲ್ಲಿ ರಾಮ್ ಚರಣ್ ಅವಕಾಶ ನೀಡಿದರು. ಅಲ್ಲಿಂದ ನಾನು ಹಿಂದೆ ತಿರುಗಿ ನೋಡಿಲ್ಲ. ಇಂದು ನಾನು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ರಾಮ್ ಚರಣ್ ಅವರೇ ಕಾರಣ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅವರು ಸದಾ ಮುಂದಿರುತ್ತಾರೆ" ಎಂದು ಜಾನಿ ಮಾಸ್ಟರ್ ಹೇಳಿದ್ದಾರೆ.