ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Renukaswamy Case: ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅರ್ಜಿ; ಅ.14ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್!

Renukaswamy Murder Case: ಆರೋಪಿ ಪ್ರದೋಷ್ ಅವರ ಮಾಫಿ ಸಾಕ್ಷಿಯನ್ನ ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಿದೆ. ನಿಯಮಬಾಹಿರವಾಗಿ ಮಾಫಿ ಸಾಕ್ಷಿ ಮಾಡಲಾಗಿದೆ ಎಂದು ವಾದಿಸಲಾಯಿತು. ಇದೇ ವೇಳೆ ಕಲಾಪದ ವಿಡಿಯೋ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಸಾಮಾಜಿಕ ಜಾಲತಾಣಗಳಿಗೆ ಕಟ್ಟುನಿಟ್ಟಿನ ನೋಟಿಸ್ ನೀಡಿ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ!

-

Avinash GR
Avinash GR Oct 7, 2026 4:16 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ತೀವ್ರಗೊಂಡಿದ್ದು, ಮಹತ್ವದ ಬೆಳವಣಿಗೆಯೊಂದರಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಿದೆ.

ಪ್ರಕರಣದ 14ನೇ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅಕ್ಟೋಬರ್ 7ರಂದು ನಡೆಸಿತು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ

ವಿಜಯಲಕ್ಷ್ಮಿ ದರ್ಶನ್ ಪರವಾಗಿ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿ, "ಪ್ರಕರಣದಲ್ಲಿ 59ನೇ ಸಿವಿಲ್ ಕೋರ್ಟ್ ನೀಡಿರುವ ಆದೇಶವು ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳಿಗೆ ವಿರುದ್ಧವಾಗಿದೆ. ಪ್ರದೋಷ್‌ನನ್ನು ಮಾಫಿ ಸಾಕ್ಷಿ ಮಾಡುವ ಮುನ್ನ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಯಾವುದೇ ಹೇಳಿಕೆ ದಾಖಲಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ, ಸಹ ಆರೋಪಿಗಳಿಗೆ ಯಾವುದೇ ಮಾಹಿತಿ ನೀಡದೆ, ಅವರನ್ನು ಸಂಪೂರ್ಣವಾಗಿ ಕತ್ತಲಲ್ಲಿಟ್ಟು ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಲಾಗಿದೆ" ಎಂದು ಪೀಠದ ಗಮನಕ್ಕೆ ತಂದರು.

ನ್ಯಾಯಾಧೀಶರ ಪ್ರಶ್ನೆ ಏನು?

ವಾದ ಆಲಿಸಿದ ಪೀಠವು, "ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಏಕೆ ಪರಿಗಣಿಸಬಾರದು? ಆತ ಕೋರ್ಟ್ ಮುಂದೆ ಏನು ಹೇಳುತ್ತಾನೆ ಎಂಬುದು ನಮಗೆ ಮೊದಲೇ ತಿಳಿಯಲು ಹೇಗೆ ಸಾಧ್ಯ? ಸ್ವತಃ ಪ್ರದೋಷ್ ಪರ ವಕೀಲರೇ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿದೆ ಅಲ್ಲವೇ?" ಎಂದು ಪ್ರಶ್ನಿಸಿತು.

ಅಕ್ಟೋಬರ್ 14ಕ್ಕೆ ಮುಂದೂಡಿಕೆ

ಇದಕ್ಕೆ ಉತ್ತರಿಸಿದ ವಕೀಲ ನಾಗಮುತ್ತು, "ಸಹ ಆರೋಪಿಗೆ ಆತ ಏನು ಹೇಳಿಕೆ ನೀಡಲು ಹೊರಟಿದ್ದಾನೆ ಎಂಬುದು ಸ್ಪಷ್ಟವಾಗಿ ತಿಳಿಯಬೇಕಾದ ಅಗತ್ಯವಿದೆ" ಎಂದು ಪ್ರತಿಪಾದಿಸಿ, ಈ ಹಿಂದೆ ನಡೆದ ಫಾಸ್ಕಲ್ ಫರ್ನಾಂಡೀಸ್ ಹಾಗೂ ಅಶೋಕ್ ಕುಮಾರ್ ಅಗರ್ವಾಲ್ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿದರು. ವಕೀಲರು ಪ್ರಸ್ತಾಪಿಸಿದ ಈ ಹಳೆಯ ತೀರ್ಪುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವಷ್ಟೇ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.

ಸಾಮಾಜಿಕ ಜಾಲತಾಣಗಳಿಗೆ ಕೋರ್ಟ್ ಚಾಟಿ

ಇನ್ನೊಂದೆಡೆ, ಪ್ರಕರಣದ ವಿಚಾರಣೆ ವೇಳೆ ಪ್ರದೋಷ್ ಸಾಕ್ಷಿ ಹೇಳಿಕೆ ನೀಡಿದ್ದ ದೃಶ್ಯಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರೀ ವೈರಲ್ ಆಗಿದ್ದವು. ದರ್ಶನ್ ಹಾಗೂ ಇತರೆ ಆರೋಪಿಗಳು ಹಾಜರಿದ್ದ ಕಲಾಪದ ವಿಡಿಯೋಗಳು ಹರಿದಾಡಿದ್ದನ್ನು ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

Rachita Ram: ಅಭಿಮಾನಿಗಳ ಜೊತೆ ಬರ್ತ್‌ಡೇ ಸೆಲಬ್ರೇಷನ್‌; ದರ್ಶನ್‌ ನೆನೆದ ರಚಿತಾ ರಾಮ್‌

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಪೊಲೀಸರು ನೋಟಿಸ್ ನೀಡಿ ವಿಡಿಯೋ ಡಿಲೀಟ್ ಮಾಡಿಸುತ್ತಿದ್ದರು. ಆದರೆ, ಈ ಬಾರಿ ಸ್ವತಃ ನ್ಯಾಯಾಲಯವೇ ನೇರವಾಗಿ ಮಧ್ಯಪ್ರವೇಶಿಸಿ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಲಯದ ವಿಚಾರಣೆಯ ದೃಶ್ಯ, ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಮರುಪ್ರಸಾರ ಮಾಡುವುದಾಗಲಿ ಅಥವಾ ಹಂಚಿಕೊಳ್ಳುವುದಾಗಲಿ ಮಾಡಬಾರದು ಎಂದು ನ್ಯಾಯಾಲಯ ಖಡಕ್ ಆದೇಶ ನೀಡಿದೆ. ವಿಚಾರಣೆಯ ಗೌಪ್ಯತೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ನಿಯಮಗಳನ್ನು ಉಲ್ಲಂಘಿಸಿ, ಕೋರ್ಟ್ ಕಲಾಪಗಳನ್ನು ರೆಕಾರ್ಡ್ ಮಾಡಿ ಹಂಚಿಕೊಂಡರೆ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.