21 ವರ್ಷಗಳಾದರೂ ಕಮ್ಮಿ ಆಗಿಲ್ಲ ʻಜೋಗಿʼ ಸಿನಿಮಾ ಹವಾ; ಪ್ರೇಮ್‌ಗೆ ಈಗಲೂ ಬರ್ತಿದೆ ಬಾಲಿವುಡ್‌ನಿಂದ ಆಫರ್!
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಜೋಗಿ' ಸಿನಿಮಾ ಬಿಡುಗಡೆಯಾಗಿ 21 ವರ್ಷಗಳಾದರೂ ಅದರ ಮೋಡಿ ಕಡಿಮೆಯಾಗಿಲ್ಲ. ಈ ಚಿತ್ರವನ್ನು ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ನಾಯಕತ್ವದಲ್ಲಿ ರಿಮೇಕ್ ಮಾಡಲು ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯದ್ವಾಲಾ ಮುಂದಾಗಿದ್ದರು. ಆದರೆ ನಿರ್ದೇಶಕ ಪ್ರೇಮ್ ಅವರು ಈ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದ್ದರು. ಕಾರಣವೇನು?
-
ಶಿವರಾಜ್‌ಕುಮಾರ್ ನಟನೆಯ ʻಜೋಗಿʼ ಸಿನಿಮಾದ ಹೆಸರು ಕೇಳಿದೊಡನೆ ಈಗಲೂ ಸಿನಿಪ್ರಿಯರು ಥ್ರಿಲ್ ಆಗುತ್ತಾರೆ. 2005ರ ಆಗಸ್ಟ್ 19ರಂದು ತೆರೆಕಂಡಿದ್ದ ಈ ಸಿನಿಮಾವು ಈಗಲೂ ಕನ್ನಡಿಗ ಮೋಸ್ಟ್ ಫೆವರೇಟ್. ಅಂದಹಾಗೆ, ಈ ಚಿತ್ರ ತೆರೆಕಂಡು 21 ವರ್ಷಗಳು ಕಳೆದರೂ, ಅದರ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಸದ್ಯ ಇದರ ನಿರ್ದೇಶಕ ಪ್ರೇಮ್ ಒಂದು ಒಂದು ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ.
ಅದೇನೆಂದರೆ, ಈಗಲೂ ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವಂತೆ ಆಫರ್ ಬರುತ್ತಲೇ ಇದೆಯಂತೆ. 2005ರ ಸಮಯದಲ್ಲೇ ಜೋಗಿಯನ್ನು ಬಾಲಿವುಡ್‌ಗೆ ರಿಮೇಕ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದು ಆಗಿರಲಿಲ್ಲ. ಆದರೆ ಈಗ ಮತ್ತೊಮ್ಮೆ ಆ ಬಗ್ಗೆ ಮಾತುಕತೆ ನಡೆದಿದೆ. ಆದರೆ ಪ್ರೇಮ್ ಮಾತ್ರ ರಿಮೇಕ್ ಮಾಡಲು ಹಿಂದೇಟು ಹಾಕಿದ್ದಾರೆ. ಈಚೆಗೆ ಸಂದರ್ಶನವೊಂದರಲ್ಲಿ ಈ ಕುರಿತು ಪ್ರೇಮ್ ಮಾತನಾಡಿದ್ದಾರೆ.
ಜೋಗಿ ಮೇಲೆ ಸಲ್ಮಾನ್ ಖಾನ್ ಕಣ್ಣು
"ಬಾಲಿವುಡ್‌ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯದ್ವಾಲಾ ಅವರು ನನ್ನನ್ನು ಕರೆದು ಸಿನಿಮಾ ಮಾಡುವಂತೆ ಕೇಳಿದ್ದರು. ಸಲ್ಮಾನ್ ಖಾನ್ ಅವರು 'ಜೋಗಿ' ಚಿತ್ರವನ್ನು ರೀಮೇಕ್ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ, ನೀವೇ ಅದನ್ನು ನಿರ್ದೇಶಿಸಬೇಕು ಎಂಬುದು ಅವರ ಇಚ್ಛೆಯಾಗಿತ್ತು" ಎಂದು ಜೋಗಿ ಪ್ರೇಮ್ ತಿಳಿಸಿದ್ದಾರೆ.
Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್
ರೀಮೇಕ್ ಮಾಡುವುದು ಅಸಾಧ್ಯ
"ಜೋಗಿ ಸಿನಿಮಾ ಬಿಡುಗಡೆಯಾಗಿ ಈಗಲೇ ಎರಡು ದಶಕಗಳು ಕಳೆದಿವೆ. ಅಂದಿನ ಕಾಲಘಟ್ಟಕ್ಕೆ ಆ ಕಥೆ ಸೂಕ್ತವಾಗಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಅದನ್ನು ಮತ್ತೆ ರೀಮೇಕ್ ಮಾಡುವುದು ಅಸಾಧ್ಯದ ಮಾತು. ಇದೇ ಕಾರಣಕ್ಕೆ ನಾನು ಆ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ್ದೇನೆ" ಎಂದು ಪ್ರೇಮ್ ಹೇಳಿದ್ದಾರೆ. ಸಲ್ಮಾನ್ ಖಾನ್ ತಂಡದಿಂದ ಪ್ರೇಮ್ ಅವರಿಗೆ ಈ ಹಿಂದೆಯೇ ಬೇಡಿಕೆ ಬಂದಿತ್ತು ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಪ್ರೇಮ್ ಅವರೇ ಈ ವಿಷಯವನ್ನು ಬಹಿರಂಗಪಡಿಸುವ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಪದೇ ಪದೇ ಒತ್ತಾಯ ಬರುತ್ತಿದ್ದರೂ, ಪ್ರೇಮ್ ಮಾತ್ರ ತಮ್ಮ ಕ್ಲಾಸಿಕ್ ಸಿನಿಮಾವನ್ನು ರೀಮೇಕ್ ಮಾಡುವ ಸಾಹಸಕ್ಕೆ ಕೈಹಾಕದಿರಲು ನಿರ್ಧರಿಸಿರುವುದು ವಿಶೇಷ.
ತೆಲುಗು ಮತ್ತು ತಮಿಳಿಗೆ ರಿಮೇಕ್
ಅಂದಹಾಗೆ, ಅಂದೇ ತೆಲುಗು ಮತ್ತು ತಮಿಳಿಗೆ ರಿಮೇಕ್ ಮಾಡಲಾಗಿತ್ತು. ತೆಲುಗಿನಲ್ಲಿ ನಟ ಪ್ರಭಾಸ್ ಅವರು ʻಯೋಗಿʼ ಹೆಸರಿನಲ್ಲಿ ರಿಮೇಕ್ ಮಾಡಿದರೆ, ತಮಿಳಿನಲ್ಲಿ ನಟ ಧನುಷ್ ಅವರು ʻಪರಟ್ಟೈ ಎಂಗಿರ ಅಳಗು ಸುಂದರಂʼ ಎಂದು ರಿಮೇಕ್ ಮಾಡಿದ್ದರು. ಈ ಎರಡೂ ರಿಮೇಕ್‌ಗಳನ್ನು ನಿರ್ದೇಶನ ಮಾಡುವಂತೆ ಪ್ರೇಮ್ ಅವರಿಗೆ ಅಂದು ಕೂಡ ಆಫರ್ ಬಂದಿತ್ತು. ಆದರೆ ಪ್ರೇಮ್ ಆಗಲೂ ನಯವಾಗಿಯೇ ತಿರಸ್ಕರಿಸಿದ್ದರು.
ಅದರಲ್ಲೂ ತಮಿಳಿಗೆ ಈ ಸಿನಿಮಾ ರಿಮೇಕ್ ಆಗಿದ್ದೇ ರಜನಿಕಾಂತ್ ಅವರಿಂದಾಗಿ. ಜೋಗಿ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದ ರಜನಿಕಾಂತ್, ಅದನ್ನು ಧನುಷ್ ನಾಯಕತ್ವದಲ್ಲಿ ರಿಮೇಕ್ ಮಾಡಬೇಕು ಎಂದು ನಿರ್ಧರಿಸಿ, ಪ್ರೇಮ್‌ಗೆ ನಿರ್ದೇಶನ ಮಾಡುವಂತೆ ಆಫರ್ ನೀಡಿದ್ದರು. ಆದರೆ ಪ್ರೇಮ್ ನಿರಾಕರಿಸಿದ್ದರು. ಕೊನೆಗೆ ಆ ಸಿನಿಮಾವನ್ನು ಸುರೇಶ್ ಕೃಷ್ಣ ಡೈರೆಕ್ಷನ್ ಮಾಡಿದ್ದರು. ಆದರೆ ಬಾಕ್ಸ್ ಅಫೀಸ್‌ನಲ್ಲಿ ಆ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ.