ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಜೈಲರ್ 2ʼ ಬೆನ್ನಲ್ಲೇ ಮತ್ತೊಂದು ತಮಿಳು ಚಿತ್ರ ಒಪ್ಪಿಕೊಂಡ ಶಿವಣ್ಣ; ʻಟೂರಿಸ್ಟ್‌ ಫ್ಯಾಮಿಲಿʼ ಡೈರೆಕ್ಟರ್‌ ಜೊತೆ ʻಹ್ಯಾಟ್ರಿಕ್‌ ಹೀರೋʼ ಹೊಸ ಸಿನಿಮಾ

ʻಹ್ಯಾಟ್ರಿಕ್‌ ಹೀರೋʼ ಶಿವರಾಜ್‌ಕುಮಾರ್ ಅವರು ಜೈಲರ್, ಕ್ಯಾಪ್ಟನ್ ಮಿಲ್ಲರ್ ಹಾಗೂ ಜೈಲರ್ 2 ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ತಮ್ಮ 4ನೇ ತಮಿಳು ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಟೂರಿಸ್ಟ್‌ ಫ್ಯಾಮಿಲಿ ಖ್ಯಾತಿಯ ನಿರ್ದೇಶಕ ಅಭಿಷನ್ ಜೀವೀಂತ್, ಯೋಗಲಕ್ಷ್ಮೀ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜ್‌ಕುಮಾರ್ ನಟನೆಯ 4ನೇ ತಮಿಳು ಚಿತ್ರಕ್ಕೆ ಅದ್ದೂರಿ ಮುಹೂರ್ತ

-

Avinash GR
Avinash GR Jun 1, 2026 4:58 PM

‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ-ನಿರ್ದೇಶಕ ಅಭಿಷನ್ ಜೀವೀಂತ್ ಅವರೊಂದಿಗೆ ಹೊಸ ತಮಿಳು ಚಿತ್ರವೊಂದರಲ್ಲಿ ನಟಿಸಲು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್ ಸಜ್ಜಾಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವು ‘ಡ್ರಾಮಾ ಕಂಪನಿ’ ನಿರ್ಮಾಣ ಸಂಸ್ಥೆಯ ಮೊದಲ ಪ್ರಯತ್ನವಾಗಿದ್ದು, ಈ ಚಿತ್ರದ ಮೂಲಕ ಗೌತಮ್ ಶಿವರಾಮನ್ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಸೋಮವಾರ ನಡೆದ ಮುಹೂರ್ತ

ಚೆನ್ನೈನಲ್ಲಿ ಸೋಮವಾರ (ಜೂನ್ 1 ) ಈ ಸಿನಿಮಾಕ್ಕೆ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸದ್ಯ ಚೆನ್ನೈ ನಗರದಲ್ಲೇ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂಬರುವ ವಾರಗಳಲ್ಲಿ ಚಿತ್ರದ ಶೀರ್ಷಿಕೆ ಮತ್ತು ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಅಂದಹಾಗೆ, ಶಿವರಾಜ್‌ಕುಮಾರ್‌ಗೆ ಇದು 4ನೇ ತಮಿಳು ಚಿತ್ರವಾಗಿದೆ. ಜೈಲರ್‌, ಕ್ಯಾಪ್ಟನ್‌ ಮಿಲ್ಲರ್‌, ಜೈಲರ್‌ 2 ಬಳಿಕ ಈಗ ಈ ಹೊಸ ಸಿನಿಮಾವನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ.

ಕ್ಯಾನ್ಸರ್‌ ಕಾರಣದಿಂದ ʻಪೆದ್ದಿʼ ಸಿನಿಮಾವನ್ನು ಕೈಬಿಟ್ಟಿದ್ದ ಶಿವರಾಜ್‌ಕುಮಾರ್;‌ ಅಂದು ನಿರ್ದೇಶಕರು ಹೇಳಿದ್ದೇನು ಗೊತ್ತಾ?

ಕುತೂಹಲ ಮೂಡಿಸಿದ ಕಾಂಬಿನೇಷನ್‌

ಅಭಿಷನ್ ಜೀವೀಂತ್ ಅವರು ಇತ್ತೀಚೆಗೆ ತಮ್ಮ ಮುಂದಿನ ಚಿತ್ರವು ಕನ್ನಡ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರೊಂದಿಗೆ ಇರಲಿದೆ ಎಂದು ಘೋಷಿಸಿದ್ದರು. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದ್ದರೂ, ಈ ಕಾಂಬಿನೇಷನ್ ಅಂತೂ ಸಿನಿ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ನಿರ್ಮಾಪಕ ಬಾಲಮುರುಗನ್ ನೇತೃತ್ವದ ‘ಡ್ರಾಮಾ ಕಂಪನಿ’ ಸಂಸ್ಥೆಯು ಈ ಚಿತ್ರವನ್ನು ತನ್ನ ಮೊದಲ ಹೆಮ್ಮೆಯ ನಿರ್ಮಾಣ ಎಂದು ಘೋಷಿಸಿದ್ದು, ಇದೊಂದು ದೊಡ್ಡ ಮಟ್ಟದ ಚಿತ್ರವಾಗಲಿದೆ ಎಂದು ಬಣ್ಣಿಸಿದೆ. ಶಿವರಾಜ್‌ಕುಮಾರ್ ಮತ್ತು ಅಭಿಷನ್ ಜೀವೀಂತ್ ಅವರೊಂದಿಗೆ ಶಿವಾನಿ ನಾಗರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಟೂರಿಸ್ಟ್‌ ಫ್ಯಾಮಿಲಿ ಖ್ಯಾತಿಯ ಯೋಗಲಕ್ಷ್ಮಿ, ಗಾನಾ ವಿನೋದ್, ಸಂಗೀತ ಮಾಧವನ್ ಮತ್ತು ಬೆಂಜಮಿನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ತಮಿಳು ಸಿನಿಮಾದ ಮುಹೂರ್ತದಲ್ಲಿ ಶಿವಣ್ಣ



ಚಿತ್ರರಂಗದ ಗಣ್ಯರಿಂದ ಹಾರೈಕೆ

ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ತಮಿಳು ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ. ಸೌಂದರ್ಯ ರಜನಿಕಾಂತ್, ಕಲೈಪುಲಿ ಎಸ್. ಧಾನು, ಸಿ. ಪ್ರೇಮ್‌ಕುಮಾರ್, ಮಣಿಕಂಠನ್, ಕೆನ್ ಕರುಣಾಸ್, ಆರ್.ಟಿ. ರಾಜಾ, ಆವುಡೈಯಪ್ಪನ್, ರಿಷಿಕಾಂತ್, ಪ್ರಭು ರಾಮ್ ವ್ಯಾಸ್, ಮದನ್ ಮತ್ತು ಕರುಪ್ಪಯ್ಯ ಸಿ. ರಾಮ್ ಆಗಮಿಸಿದ್ದರು.

ಈ ಚಿತ್ರಕ್ಕೆ ಲಿಯೋನ್ ಜೇಮ್ಸ್ ಸಂಗೀತ ನಿರ್ದೇಶಕರಾಗಿ, ಪ್ರಗತೀಶ್ ಪ್ರಭು ಛಾಯಾಗ್ರಾಹಕರಾಗಿ, ಸುರೇಶ್ ಸಂಕಲನಕಾರರಾಗಿ ಮತ್ತು ಸ್ವಾತಿ ರಾಮಕೃಷ್ಣನ್ ವಸ್ತ್ರವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಹೂರ್ತದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆಯು, "ಒಂದು ಹೊಸ ಕನಸು ಶುರುವಾಗಿದೆ. ಹೊಸ ಪಯಣ ಅನಾವರಣಗೊಳ್ಳುತ್ತಿದೆ" ಎಂದು ಬರೆದುಕೊಂಡಿದೆ.