ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಕಿರುನಗೆ’ ಚಿತ್ರದ ಟೈಟಲ್‌ ರಿಲೀಸ್‌ ಮಾಡಿದ ಡಾ. ರಾಜ್‌ಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು; ಚಿತ್ರತಂಡಕ್ಕೆ ಸಿಕ್ತು ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ

ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರ ‘ಕಿರುನಗೆ’ ಶೀರ್ಷಿಕೆಯನ್ನು ವರನಟ ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜು ಅವರು ಅದ್ಧೂರಿಯಾಗಿ ಅನಾವರಣಗೊಳಿಸಿದ್ದಾರೆ. ವಿಜಯ್ ರಾಜ್ ಮತ್ತು ಖುಷ್ಬು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಹೆತ್ತವರ ಸಂತೋಷಕ್ಕಾಗಿ ಮಕ್ಕಳು ಮಾಡುವ ಪ್ರೇಮ ತ್ಯಾಗದ ಕಥೆ ಹೊಂದಿದೆಯಂತೆ.

'ಕಿರುನಗೆ' ಟೈಟಲ್ ರಿಲೀಸ್; ತಂದೆ-ತಾಯಿಗಾಗಿ ಪ್ರೀತಿ ತ್ಯಾಗ ಮಾಡೋ ಹೊಸ ಕಥೆ

-

Avinash GR
Avinash GR Jun 1, 2026 6:39 PM

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ. ಅವರು ನಿರ್ಮಿಸಿ, ಅಶೋಕ್ ಕಡಬ ನಿರ್ದೇಶಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಅನಾವರಣಗೊಂಡಿದೆ. ಈ ಚಿತ್ರಕ್ಕೆ ‘ಕಿರುನಗೆ’ ಎಂದು ಹೆಸರಿಡಲಾಗಿದ್ದು, ವರನಟ ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್. ಎ. ಗೋವಿಂದರಾಜು ಅವರು ಚಿತ್ರದ ಟೈಟಲ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ವಿಭಿನ್ನ ಪ್ರೇಮಕಥೆಯ ‘ಕಿರುನಗೆʼ

‘ಕಿರುನಗೆʼ ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಅಶೋಕ್ ಕಡಬ, "ಇದು ನನ್ನ ನಿರ್ದೇಶನದ 6ನೇ ಚಿತ್ರ. ಇದೊಂದು ಪಕ್ಕಾ ಲವ್ ಜಾನರ್ ಸಿನಿಮಾವಾಗಿದ್ದರೂ, ತಂದೆ-ತಾಯಿಯ ಸಂತೋಷಕ್ಕಾಗಿ ಮಕ್ಕಳೇ ತಮ್ಮ ಪ್ರೀತಿಯನ್ನು ತ್ಯಾಗ ಮಾಡುವ ವಿಭಿನ್ನ ಕಥಾಹಂದರ ಇಲ್ಲಿದೆ. ವಿಶೇಷವೆಂದರೆ ಚಿತ್ರದ ಮೊದಲರ್ಧ ಭಾಗ ಸಂಪೂರ್ಣವಾಗಿ ಮದುವೆ ಮನೆಯಲ್ಲೇ ಸಾಗುತ್ತದೆ. ಬೆಂಗಳೂರು, ಉಡುಪಿ, ವಿಜಾಪುರ, ಮುಂಬೈ ಹಾಗೂ ಗೋವಾದ ಸುಂದರ ತಾಣಗಳಲ್ಲಿ ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ" ಎಂದರು.

Shanmukha Govindraj: ಅಣ್ಣಾವ್ರ ಹೆಸರು ಹೇಳಿಕೊಂಡು ಸಿನಿಮಾಕ್ಕೆ ಬರಬೇಡಿ... ಷಣ್ಮುಖ ಗೋವಿಂದ ರಾಜ್‌ಗೆ ನೆಟ್ಟಿಗರ ಟೀಕೆ!

ಹೀರೋ ಆದ ವಿಜಯ್ ರಾಜ್‌

ಕಿರುತೆರೆಯಲ್ಲಿ ನಟಿಸಿ ಗಮನ ಸೆಳೆದಿರುವ ವಿಜಯ್ ರಾಜ್ ಈ ಚಿತ್ರದ ಮೂಲಕ ನಾಯಕನಾಗಿ ಹಿರಿತೆರೆಗೆ ಪದಾರ್ಪಣೆ ಮಾಡುತ್ತಿದ್ದು, ಇವರಿಗೆ ಜೋಡಿಯಾಗಿ ಖುಷ್ಬು ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಶ್ರೀಶ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟಿ ಶ್ರುತಿ, ಬಾಲಿವುಡ್ ನಟ ಅನುಪಮ್ ಖೇರ್ ಸಹೋದರ ರಾಜು ಖೇರ್, ನಟಿ ಸಂಗೀತ, ಮೂಗು ಸುರೇಶ್, ಸುಧಾ ಬೆಳವಾಡಿ ಹಾಗೂ ಮಂಜುನಾಥ್ ಹೆಗ್ಡೆ ಮುಂತಾದ ಅನುಭವಿ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ಡಾ.ರಾಜಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅಭಿನಯದ ʼನಿಂಬಿಯಾ ಬನಾದ ಮ್ಯಾಗʼ ಚಿತ್ರದ ಟ್ರೇಲರ್ ಬಿಡುಗಡೆ

ಇದು ಮಹಿಳಾ ಪ್ರಧಾನ ಚಿತ್ರವಲ್ಲ

ಚಿತ್ರಕ್ಕೆ ಕಥೆ ಬರೆದು ಬಂಡವಾಳ ಹೂಡಿರುವ ನಿರ್ಮಾಪಕಿ ಲತಾಶ್ರೀ ಡಿ.ಸಿ ಮಾತನಾಡಿ, "ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಶೀರ್ವಾದ ಹಾಗೂ ನನ್ನ ತಂದೆ, ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಸಹಕಾರದಿಂದ ಈ ಸಿನಿಮಾ ಮೂಡಿಬಂದಿದೆ. ಇದು ಕೇವಲ ಮಹಿಳಾ ಪ್ರಧಾನ ಚಿತ್ರವಲ್ಲ, ಬದಲಿಗೆ ಪ್ರತಿಯೊಬ್ಬ ಪ್ರೇಕ್ಷಕನಿಗೂ ಇಷ್ಟವಾಗುವ ಸಕಲ ಮನೋರಂಜನೆಯ ಅಂಶಗಳು ಇದರಲ್ಲಿದೆ" ಎಂದು ಹೇಳುತ್ತಾರೆ.

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಬಳಿ ಕೆಲಸ ಮಾಡಿದ ಅನುಭವವಿರುವ ಸುಕೃತ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ನಾಗಾರ್ಜುನ ಶರ್ಮ ಹಾಡುಗಳನ್ನು ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಅವರ ಛಾಯಾಗ್ರಹಣ ‘ಕಿರುನಗೆ’ ಚಿತ್ರಕ್ಕಿದೆ. ಶೀಘ್ರದಲ್ಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರ ಮುಂದೆ ಬರಲಿವೆ. ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ನಟ ಷಣ್ಮುಖ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.