54 ವರ್ಷದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಜೊತೆ ಮದುವೆಯಾದ ʻಟಗರು ಸರೋಜʼ ಖ್ಯಾತಿಯ ನಟಿ ತ್ರಿವೇಣಿ ರಾವ್
'ಟಗರು' ಸಿನಿಮಾ ಖ್ಯಾತಿಯ ಕನ್ನಡ ನಟಿ ತ್ರಿವೇಣಿ ರಾವ್ ಅವರು ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಜೂನ್ 19ರಂದು ವಿವಾಹವಾಗಿದ್ದಾರೆ. 2025ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ 54 ವರ್ಷದ ಬಿಪ್ಲಬ್, ಈಗ ಎರಡನೇ ಮದುವೆಯಾಗಿದ್ದಾರೆ.
-
ದುನಿಯಾ ಸೂರಿ ನಿರ್ದೇಶನದ ʻಟಗರುʼ ಸಿನಿಮಾದಲ್ಲಿ ಕಾನ್‌ಸ್ಟೆಬಲ್ ಸರೋಜಾ ಪಾತ್ರದಲ್ಲಿ ನಟಿಸಿದ್ದ ತ್ರಿವೇಣಿ ರಾವ್, ಇದೀಗ ಭಾರಿ ಸುದ್ದಿಯಾಗಿದ್ದಾರೆ. ಕಾರಣ, ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಪತಿ ಯಾರು ಗೊತ್ತಾ? ತ್ರಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್. ಹೌದು, 54 ವರ್ಷದ ಬಿಪ್ಲಬ್ ಕುಮಾರ್ ಜೊತೆ ತ್ರಿವೇಣಿ ರಾವ್ ಅವರ ಮದುವೆಯು ಜೂನ್ 19ರಂದು ವಿವಾಹವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಪ್ಲಬ್‌ಗೆ ಇದು ಎರಡನೇ ಮದುವೆ
ಸದ್ಯ ಮದುವೆ ಎಲ್ಲಿ ನಡೆಯಿತು? ಇಬ್ಬರ ನಡುವೆ ಭೇಟಿ ಆಗಿದ್ದೇಗೆ ಎಂಬೆಲ್ಲಾ ವಿಚಾರಗಳು ಗೌಪ್ಯವಾಗಿವೆ. ಜೂನ್ 24 ರಂದು ಅಗರ್ತಲಾದ ಪಂಚತಾರಾ ಹೋಟೆಲ್‌ನಲ್ಲಿ ಬಿಪ್ಲಬ್ ಮತ್ತು ತ್ರಿವೇಣಿ ಜೋಡಿಯ ಮದುವೆ ಆರತಕ್ಷತೆಯನ್ನು ಏರ್ಪಡಿಸಲಾಗಿದೆ. ಅಂದು ಈ ಮದುವೆ ಕುರಿತು ಹೆಚ್ಚಿನ ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ. ಅಂದಹಾಗೆ, ಬಿಪ್ಲಬ್ ಕುಮಾರ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಈ ಹಿಂದೆ ಅವರು ನೀತಿ ದೇಬ್ ಅವರೊಂದಿಗೆ ಬಿಪ್ಲಬ್ ಮದುವೆ ಆಗಿದ್ದರು. 2001ರಲ್ಲಿ ಮದುವೆಯಾದ ಈ ಜೋಡಿ 25 ವರ್ಷಗಳ ನಂತರ, ಅಂದರೆ, 2025ರ ಸೆಪ್ಟೆಂಬರ್‌ನಲ್ಲಿ ವಿಚ್ಛೇದನದ ಮೂಲಕವಾಗಿತ್ತು.
'ಟಗರು ಪಲ್ಯ' ಡೈರೆಕ್ಟರ್ ಜೊತೆ ಹೊಸ ಸಿನಿಮಾಕ್ಕಾಗಿ ಕೈಜೋಡಿಸಿದ 'ಪುಟ್ಟಕ್ಕನ ಮಕ್ಕಳು' ನಟ ಧನುಷ್
ಡಿವೋರ್ಸ್ ಬಳಿಕ ಎರಡನೇ ಮದುವೆ
ಇದೀಗ ಡಿವೋರ್ಸ್ ಆಗಿ ಕೆಲವೇ ತಿಂಗಳಲ್ಲಿ ಸ್ಯಾಂಡಲ್‌ವುಡ್ ಮೂಲದ ನಟಿ ತ್ರಿವೇಣಿ ರಾವ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ, ಡಿವೋರ್ಸ್ ಪಡೆದ ಬಳಿಕ ಒಂಟಿಯಾಗಿದ್ದ ಬಿಪ್ಲಬ್, ರಾಜಕೀಯ ಚಟುವಟಿಕೆಗಳಲ್ಲೇ ಹೆಚ್ಚು ಬ್ಯುಸಿಯಾಗಿದ್ದರು. ಆದರೆ, ಅವರ ಕುಟುಂಬಸ್ಥರು, ಅದರಲ್ಲೂ ಮುಖ್ಯವಾಗಿ ಅವರ ತಾಯಿ, ಮತ್ತೆ ಮದುವೆ ಆಗುವಂತೆ ಬಿಪ್ಲಬ್‌ಗೆ ಪದೇ ಪದೇ ಸಲಹೆ ನೀಡುತ್ತಿದ್ದರು ಎನ್ನಲಾಗಿದೆ. ತಾಯಿಯ ಆಸೆಯನ್ನು ಗೌರವಿಸಿ, ಬಿಪ್ಲಬ್ ದೇಬ್ ಎರಡನೇ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಜಿಮ್ ಟ್ರೈನರ್‌ನಿಂದ ಸಿಎಂ ಗಾದಿಯವರೆಗೆ..
ತ್ರಿಪುರಾದ ರಾಜಕೀಯದಲ್ಲಿ ಪರಿಚಿತ ಮುಖವಾಗಿರುವ ಬಿಪ್ಲಬ್ ದೇಬ್ ಅವರು ತಮ್ಮ ಬದುಕಿನ ಹೆಚ್ಚು ಸಮಯವನ್ನು ದೆಹಲಿಯಲ್ಲಿ ಕಳೆದಿದ್ದಾರೆ. ರಾಜಕೀಯ ಪ್ರವೇಶಿಸುವ ಮುನ್ನ ಅವರು ದೆಹಲಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಸಮಯದಲ್ಲಿ ಅವರಿಗೆ ನೀತಿ ದೇಬ್ ಅವರ ಪರಿಚಯವಾಗಿತ್ತು. ನಂತರ ಅದು ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಅದಾದ ಬಳಿಕ ಬಿಪ್ಲಬ್ ದೇಬ್ ಅವರು ಬಿಜೆಪಿಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಾರಂಭಿಸಿದರು. 2016ರಲ್ಲಿ ಅವರನ್ನು ತ್ರಿಪುರಾ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಿಪ್ಲಬ್ ನೇತೃತ್ವದಲ್ಲೇ 2018ರಲ್ಲಿ ತ್ರಿಪುರಾದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು ಮತ್ತು ಬಿಪ್ಲಬ್ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡರು.
ಆದರೆ, 5 ವರ್ಷಗಳ ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನವೇ, 2022ರಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸುವ ಮೂಲಕ ಬಿಪ್ಲಬ್ ಸಂಸದರಾದರು.
ಟಗರು ಸಿನಿಮಾ ನಟಿ ತ್ರಿವೇಣಿ ರಾವ್ ಮದುವೆ ಸುದ್ದಿ
Former Tripura Chief Minister Biplab Kumar Deb Marries Again, Grand Reception in Agartala Expected to Draw Political Heavyweights#BiplabKumarDeb #TripuraPolitics #TripuraNews #Agartala #BreakingNews #PoliticalNews #TripuraInfo #WeddingReception #VIPGuestshttps://t.co/OKMkVKFJmL pic.twitter.com/tacnglpJqg
— Tripurainfo (@tripurainfo) June 22, 2026
ಇನ್ನು, 2018ರಲ್ಲಿ ತೆರೆಕಂಡ ಟಗರು ಸಿನಿಮಾದ ಮೂಲಕ ಫೇಮಸ್ ಆದ ತ್ರಿವೇಣಿ, ಬಳಿಕ ಯುವರತ್ನ, ಬಾಬು ಮಾರ್ಲೆ, ರಾಜಾ ಮಾರ್ತಾಂಡ, ಅಲ್ಲೆ ಡ್ರಾ ಅಲ್ಲೆ ಬಹುಮಾನ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಪರಭಾಷೆಯಲ್ಲೂ ಅವರು ಮಿಂಚಿದ್ದಾರೆ. ಇದೀಗ ಮಾಜಿ ಸಿಎಂ ಜೊತೆ ಮದುವೆಯಾಗಿ ಸುದ್ದಿಯಲ್ಲಿದ್ದಾರೆ. ಮೂಲಗಳ ಪ್ರಕಾರ, ಬಿಪ್ಲಬ್ ದೇಬ್ ತಮ್ಮ ಪತ್ನಿಯೊಂದಿಗೆ ಉದಯಪುರದ ತ್ರಿಪುರ ಸುಂದರಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆಯಲಿದ್ದಾರೆ. ನಂತರ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.