ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼಸು ಫ್ರಮ್‌ ಸೋʼ ಹಾದಿಯಲ್ಲಿ ʼಕಾಂತಾರ: ಚಾಪ್ಟರ್‌ 1ʼ?; ರಿಲೀಸ್‌ಗೆ ದಿನಗಣನೆ ಆರಂಭವಾಗಿದ್ದರೂ ಪ್ರಚಾರಕ್ಕಿಳಿದಿಲ್ಲ ಚಿತ್ರತಂಡ

Hombale Films: ಸದ್ಯ ಭಾರಿ ಕುತೂಹಲ ಕೆರಳಿಸಿರುವ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನ ಉಳಿದಿದೆ. ಇದು ವಿವಿಧ ಭಾಷೆಗಳಲ್ಲಿ ಅಕ್ಟೋಬರ್‌ 2ರಂದು ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರತಂಡ ಇನ್ನೂ ಪ್ರಚಾರ ಆರಂಭಿಸದೇ ಇರುವುದು ಅನುಮಾನ ಹುಟ್ಟು ಹಾಕಿದೆ.

ಇನ್ನೂ ಪ್ರಚಾರಕ್ಕಿಳಿದಿಲ್ಲ ʼಕಾಂತಾರ: ಚಾಪ್ಟರ್‌ 1ʼ ಚಿತ್ರತಂಡ

-

Ramesh B Ramesh B Sep 12, 2025 5:21 PM

ಬೆಂಗಳೂರು: ಇತ್ತೀಚೆಗೆ ತೆರೆಕಂಡ ಸ್ಯಾಂಡಲ್‌ವುಡ್‌ ʼಸು ಫ್ರಮ್‌ ಸೋʼ (Su From So) ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದೆ. 5.5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಸುಮಾರು 120 ಕೋಟಿ ರೂ. ದೋಚಿಕೊಂಡಿದೆ. ಜೆ.ಪಿ. ತುಮಿನಾಡ್‌ ನಿರ್ದೇಶನದ ಈ ಚಿತ್ರದಲ್ಲಿ ಬಹುತೇಕ ಕರಾವಳಿ ಮೂಲಕದ ಪ್ರತಿಭೆಗಳೇ ಬಣ್ಣ ಹಚ್ಚಿದ್ದಾರೆ. ಯಾವುದೇ ಅಬ್ಬರದ ಪ್ರಚಾರವಿಲ್ಲದೆ ತೆರೆಗೆ ಬಂದಿದ್ದ ಈ ಸಿನಿಮಾ ತನ್ನ ಕಂಟೆಂಟ್‌, ಬಾಯಿ ಮಾತಿನ ಪಬ್ಲಿಸಿಟಿಯಿಂದಲೇ ಗೆಲುವಿನ ನಗೆ ಬೀರಿದೆ. ಸದ್ಯ ಜಾಗತಿಕವಾಗಿ ಗಮನ ಸೆಳೆದಿರುವ 'ಕಾಂತಾರ: ಚಾಪ್ಟರ್‌ 1' (Kantara: Chapter 1) ಚಿತ್ರತಂಡವೂ ಇದೇ ಹಾದಿಯಲ್ಲಿ ಸಾಗುತಿದೆಯೇ ಎನ್ನುವ ಅನುಮಾನ ಮೂಡಿದೆ. ಇದಕ್ಕೂ ಕಾರಣವಿದೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ 'ಕಾಂತಾರ: ಚಾಪ್ಟರ್‌ 1' ಸಿನಿಮಾವನ್ನು ರಿಲೀಸ್‌ ಮಾಡುವುದಾಗಿ ಈಗಾಗಲೇ ಹೊಂಬಾಳೆ ಫಿಲ್ಮ್ಸ್‌ (Hombale Films) ಘೋಷಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿದೆ. ಆದರೆ ಇನ್ನೂ ಪ್ರಚಾರಕ್ಕೆ ಇಳಿಯದಿರುವುದು ಅನುಮಾನ ಹುಟ್ಟು ಹಾಕಿದೆ.

ʼಕಾಂತಾರ: ಚಾಪ್ಟರ್‌ 1ʼ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ. ಅದಾಗ್ಯೂ ಚಿತ್ರತಂಡ ಪ್ರಮೋಷನ್‌ ಚಟುವಟಿಕೆ ಇನ್ನೂ ಆರಂಭಿಸಿಲ್ಲ. ಸಾಮಾನ್ಯವಾಗಿ ಸ್ಟಾರ್‌ಗಳ, ಬಿಗ್‌ ಬಜೆಟ್‌ ಚಿತ್ರಗಳ ಪ್ರಚಾರವನ್ನು ಮುಂಚಿತವಾಗಿಯೇ ಆರಂಭಿಸಲಾಗುತ್ತದೆ. ವಿವಿಧ ನಗರಗಳಿಗೆ ಭೇಟಿ ಕೊಟ್ಟು ಗಮನ ಸೆಳೆಯಲಾಗುತ್ತದೆ. ಆದರೆ ʼಕಾಂತಾರʼ ಚಿತ್ರತಂಡ ಇನ್ನೂ ಸಕ್ರಿಯ ಪ್ರಚಾರಕ್ಕೆ ಇಳಿದಿಲ್ಲ.

'ಕಾಂತಾರ: ಚಾಪ್ಟರ್‌ 1' ಸಿನಿಮಾದ ಮೇಕಿಂಗ್‌ ವಿಡಿಯೊ:



ಇತ್ತೀಚೆಗೆ ಮೇಕಿಂಗ್‌ ವಿಡಿಯೊವನ್ನು ರಿಲೀಸ್‌ ಮಾಡಲಾಗಿತ್ತು. ಜತೆಗೆ ಅಲ್ಲೊಂದು ಇಲ್ಲೊಂದು ಪೋಸ್ಟರ್‌ ಹಂಚಿಕೊಂಡಿರುವುದು ಬಿಟ್ಟರೆ ಸಿನಿಮಾತಂಡ ಬೇರೆ ಯಾವ ರೀತಿಯಲ್ಲೂ ಪ್ರಚಾರ ನಡೆಸುತ್ತಿಲ್ಲ. ರಿಲೀಸ್‌ಗೆ ಇನ್ನು 20 ದಿನಕ್ಕಿಂತ ಕಡಿಮೆ ಸಮಯಾವಕಾಶವಿದ್ದು, ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.

ಈ ಸುದ್ದಿಯನ್ನೂ ಓದಿ: Kantara: Chapter 1: 'ಕಾಂತಾರ ಚಾಪ್ಟರ್‌ 1' ಚಿತ್ರದ ಬಿಡುಗಡೆಗೆ ದಿನಗಣನೆ; ರಿಷಬ್‌ ಶೆಟ್ಟಿ ಜತೆಗೆ ಪ್ರಭಾಸ್‌ ಎಂಟ್ರಿ: ಫ್ಯಾನ್ಸ್‌ಗೆ ಡಬಲ್‌ ಧಮಾಕ

ಟ್ರೈಲರ್‌ ಯಾವಾಗ?

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಈ ಚಿತ್ರ 2022ರ ʼಕಾಂತಾರʼದ ಪ್ರೀಕ್ವೆಲ್‌. ʼಕಾಂತಾರʼ ಚಿತ್ರದ ಕಥೆ ನಡೆಯುವುದಕ್ಕಿಂತ ಮೊದಲು ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಇದೇ ಕಾರಣಕ್ಕೆ ಭಾರಿ ಕುತೂಹಲ ಕೆರಳಿಸಿದೆ. ಅಲ್ಲದೆ ಚಿತ್ರತಂಡ ಹಂಚಿಕೊಂಡ ಮೇಕಿಂಗ್‌ ವಿಡಿಯೊ ಕೂಡ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕದಂಬರ ಕಾಲದಲ್ಲಿ ನಡೆಯುವ ಕಥೆ ಇದರಲ್ಲಿದ್ದು, ಕರಾವಳಿಯ ಜಾನಪದ ನಂಬಿಕೆಯ ಕಥಾನಕವನ್ನು ಅದ್ಧೂರಿಯಾಗಿ ತೆರೆ ಮೇಲೆ ತರಲಿದೆ. ʼಕಾಂತಾರʼದ ಮೂಲಕ ತುಳುನಾಡಿನ ವಿಶಿಷ್ಟ ಸಂಸ್ಕೃತಿ ಭೂತಾರಾಧನೆಯನ್ನು ಜಗತ್ತಿನೆದುರು ತೆರೆದಿಟ್ಟ ರಿಷಬ್‌ ಈ ಬಾರಿ ಯಾವ ರೀತಿಯ ಮ್ಯಾಜಿಕ್‌ ಮಾಡಲಿದ್ದಾರೆ ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಇದೇ ಕಾರಣಕ್ಕೆ ಟ್ರೈಲರ್‌ಗಾಗಿ ಹಲವರು ಕಾಯುತ್ತಿದ್ದಾರೆ. ಸೆಪ್ಟೆಂಬರ್‌ 20ರಂದು ಟ್ರೈಲರ್‌ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್‌ ಮತ್ತು ಬೆಂಗಾಳಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸುಮಾರು 30 ದೇಶಗಲಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ನಾಯಕಿಯಾಗಿ ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್‌ ನಟಿಸಿದ್ದಾರೆ.

ʼಸು ಫ್ರಮ್‌ ಸೋʼ ಚಿತ್ರದ ಮಾದರಿ ಫಾಲೋ ಮಾಡುತ್ತ?

ʼಸು ಫ್ರಮ್‌ ಸೋʼ ಚಿತ್ರ ಸೆಟ್ಟೇರಿದಾಗಿನಿಂದ ಯಾವುದೇ ಪ್ರಚಾರವಿಲ್ಲದೆ ಸೈಲಂಟಾಗಿ ಚಿತ್ರೀಕರಣ ಮುಗಿಸಿತ್ತು. ರಿಲೀಸ್‌ಗೆ ಮುನ್ನ ಪೇಯ್ಡ್‌ ಪ್ರೀಮಿಯರ್‌ ಆಯೋಜಿಸಿದ್ದು ಬಿಟ್ಟರೆ ಹೆಚ್ಚಿನ ಪ್ರಚಾರ ಕೈಗೊಂಡಿರಲಿಲ್ಲ. ಅದಾಗ್ಯೂ ಗಟ್ಟಿ ಕಥೆ, ಉತ್ತಮ ಚಿತ್ರಕಥೆಯ ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆದು ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿದೆ. ಇದೇ ತಂತ್ರವನ್ನು ʼಕಾಂತಾರ: ಚಾಪ್ಟರ್‌ 1ʼ ಚಿತ್ರತಂಡವೂ ಅನುಸರಿಸಲಿದ್ಯಾ ಎನ್ನುವ ಅನುಮಾನ ಸೋಶಿಯಲ್‌ ಮೀಡಿಯಾದಲ್ಲಿ ಹಲವರು ವ್ಯಕ್ತಪಡಿಸುತ್ತಿದ್ದಾರೆ.