ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranbir Kapoor: ನವೆಂಬರ್‌ 5ಕ್ಕೆ ‘ರಾಮಾಯಣ: ಭಾಗ 1’ ವಿಶ್ವಾದ್ಯಂತ ರಿಲೀಸ್‌: ದಸರಾ ಹಬ್ಬದಂದೇ ಅಡ್ವಾನ್ಸ್‌ ಬುಕ್ಕಿಂಗ್‌ ಆರಂಭ!

Ramayana Part 1: ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ: ಭಾಗ 1’ ಚಿತ್ರವು ನವೆಂಬರ್ 5ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ದಸರಾ ಹಬ್ಬದಂದು ಮುಂಗಡ ಟಿಕೆಟ್ ಬುಕ್ಕಿಂಗ್‌ ಆರಂಭವಾಗಲಿದೆ. ನಮಿತ್ ಮಲ್ಹೋತ್ರಾ, ಡಿಎನ್‌ಇಜಿ ಮತ್ತು ಯಶ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾವನ್ನು ನಿತೇಶ್‌ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ನ.5ಕ್ಕೆ ʻರಾಮಾಯಣ: ಭಾಗ 1ʼ ರಿಲೀಸ್‌; ದಸರಾ ಹಬ್ಬದಂದೇ ಟಿಕೆಟ್‌ ಬುಕ್ಕಿಂಗ್‌

-

Avinash GR
Avinash GR Oct 11, 2026 9:35 PM

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಎಂದೇ ಬಿಂಬಿತವಾಗಿರುವ ‘ರಾಮಾಯಣ’ದ ಮೊದಲ ಭಾಗದ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದ ಮೊದಲ ಭಾಗವು ಇದೇ ನವೆಂಬರ್ 5ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ನವರಾತ್ರಿಯ ಮೊದಲ ದಿನದ ಶುಭ ಸಂದರ್ಭದಲ್ಲಿ ಚಿತ್ರತಂಡ ಪ್ರಮುಖ ಪಾತ್ರಗಳನ್ನೊಳಗೊಂಡ ಭವ್ಯ ಪೋಸ್ಟರ್ ಅನಾವರಣಗೊಳಿಸಿದ್ದು, ಮುಂಬರುವ ವಿಜಯದಶಮಿ ಹಬ್ಬದಂದು ಚಿತ್ರದ ಅಡ್ವಾನ್ಸ್ ಟಿಕೆಟ್‌ ಬುಕ್ಕಿಂಗ್‌ಗೆ ಚಾಲನೆ ಸಿಗಲಿದೆ ಎಂದು ಘೋಷಿಸಿದೆ.

ಶ್ರೀರಾಮನಾಗಿ ರಣಬೀರ್, ರಾವಣನಾಗಿ ಯಶ್ ದರ್ಶನ

"ಇದು ರಾಮನ ಯುಗದ ಆರಂಭ" ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ಅವರು ಶಾಂತ ಹಾಗೂ ಗಂಭೀರ ಮುಖಭಾವದ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತಾದೇವಿಯಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಂಗೊಳಿಸಿದ್ದಾರೆ. ಇವರೆಲ್ಲರ ಹಿನ್ನೆಲೆಯಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಅವರು ರಾವಣನಾಗಿ ಆಕರ್ಷಕ ಹಾಗೂ ರೌದ್ರಾವತಾರದ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಸಿನಿಪ್ರಿಯರ ನಿರೀಕ್ಷೆಯನ್ನು ಗಗನಕ್ಕೇರಿಸಿದೆ. ಪಾತ್ರಗಳ ವೇಷಭೂಷಣ, ಸೆಟ್‌ ವಿನ್ಯಾಸ ಹಾಗೂ ದೃಶ್ಯ ವೈಭವವು ಚಿತ್ರದ ಬೃಹತ್ ಕ್ಯಾನ್ವಾಸ್‌ಗೆ ಸಾಕ್ಷಿಯಾಗಿವೆ.

ತಾಂತ್ರಿಕವಾಗಿ ಶ್ರೀಮಂತಿಕೆ ಹೊಂದಿರುವ ಸಿನಿಮಾ

ವಿಶ್ವದ್ಯಾಂತ ಕೋಟ್ಯಂತರ ಜನರ ಭಾವನೆ, ನಂಬಿಕೆಯಾಗಿರುವ ರಾಮಾಯಣವನ್ನು ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಕಟ್ಟಿಕೊಡಲಾಗುತ್ತಿದೆ. ರಣಬೀರ್, ಸಾಯಿ ಪಲ್ಲವಿ, ಯಶ್ ಮತ್ತು ರವಿ ದುಬೆ ಅವರೊಂದಿಗೆ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಅವರು ಹನುಮಂತನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ramayana: ರಾಮಾಯಣ ಸಿನಿಮಾದ ದೃಶ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಕೇಶ್ ಖನ್ನಾ

ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ಹಾಲಿವುಡ್‌ನಲ್ಲಿ 8 ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಪ್ರಸಿದ್ಧ ವಿಎಫ್‌ಎಕ್ಸ್ ಸಂಸ್ಥೆ ‘ಡಿಎನ್‌ಇಜಿ’ ಹಾಗೂ ಯಶ್ ಅವರ ಒಡೆತನದ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸುತ್ತಿವೆ. ಮೊದಲ ಭಾಗ ನವೆಂಬರ್ 5ರಂದು ಬಂದರೆ, ಎರಡನೇ ಭಾಗವು 2027ರ ದೀಪಾವಳಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

ಐದು ಭಾಷೆಗಳಲ್ಲಿ ರಿಲೀಸ್

‘ರಾಮಾಯಣ: ಭಾಗ 1’ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಸಾಧಾರಣ ಚಿತ್ರಮಂದಿರಗಳಷ್ಟೇ ಅಲ್ಲದೆ, ಐಮ್ಯಾಕ್ಸ್ (IMAX) ಸೇರಿದಂತೆ ವಿವಿಧ ಪ್ರೀಮಿಯಂ ಫಾರ್ಮ್ಯಾಟ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಭಾರತದ ಹೊರಗಿನ ಜಾಗತಿಕ ಮಾರುಕಟ್ಟೆಯಲ್ಲಿ ವಿತರಣೆಯ ಹೊಣೆಯನ್ನು ಜಾಗತಿಕ ದಿಗ್ಗಜ ಸಂಸ್ಥೆ ‘ಸೋನಿ ಪಿಕ್ಚರ್ಸ್’ ವಹಿಸಿಕೊಂಡಿದ್ದರೆ, ಹಿಂದಿ ವಲಯದಲ್ಲಿ ‘ಧರ್ಮಾ ಪ್ರೊಡಕ್ಷನ್ಸ್’ ವಿತರಣೆ ಮಾಡಲಿದೆ. ದಸರಾ ಹಬ್ಬದ ಶುಭದಿನದಂದೇ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗುತ್ತಿರುವುದರಿಂದ, ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.