ʻಧುರಂಧರ್ 2ʼ ಚಿತ್ರಕ್ಕಿಂತ ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ ʻಟಾಕ್ಸಿಕ್ʼ ಒಂದು ಹೆಜ್ಜೆ ಮುಂದು; ಯಾಕೆ ಗೊತ್ತಾ?
Toxic vs Dhurandhar 2: ಮಾರ್ಚ್ 19ರಂದು ಟಾಕ್ಸಿಕ್ ಮತ್ತು ಧುರಂಧರ್ 2 ಒಟ್ಟಿಗೆ ತೆರೆಗೆ ಬರುತ್ತಿವೆ. ಆದರೆ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕಿಂತ ಯಶ್ ಅವರ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಐಎಂಡಿಬಿ ರೇಟಿಂಗ್, ಆಡಿಯೋ ಹಕ್ಕುಗಳ ದಾಖಲೆ ಹಾಗೂ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಟಾಕ್ಸಿಕ್ ಸಿನಿಮಾ ಮುಂದಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾವು ಮಾರ್ಚ್ 19ರಂದು ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಕನ್ನಡ, ಇಂಗ್ಲಿಷ್, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ತೆರೆಕಾಣುತ್ತಿದೆ. ಅಂದಹಾಗೆ, ಮಾರ್ಚ್ 19ರಂದೇ ರಣವೀರ್ ಸಿಂಗ್ ನಟನೆಯ ʻಧುರಂಧರ್ 2ʼ ಚಿತ್ರ ಕೂಡ ರಿಲೀಸ್ ಆಗುತ್ತಿರುವುದರಿಂದ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ವಾರ್ ಆಗಲಿದೆ. ಇನ್ನು, ʻಧುರಂಧರ್ 2ʼ ಚಿತ್ರಕ್ಕಿಂತ ʻಟಾಕ್ಸಿಕ್ʼ ಒಂದು ಹೆಜ್ಜೆ ಮುಂದೆ ಅನ್ನೋದಕ್ಕೆ ಒಂದಷ್ಟು ಸಾಕ್ಷಿಗಳು ಸಿಕ್ಕಿವೆ.
ಐಎಂಡಿಬಿಯಲ್ಲಿ ಟಾಕ್ಸಿಕ್ ಮುಂದೆ
ಐಎಂಡಿಬಿ ವೆಬ್ ಸೈಟ್ ಪ್ರಕಾರ, ಭಾರತದಲ್ಲಿ ಸದ್ಯ ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ ಸಿನಿಮಾ ಟಾಕ್ಸಿಕ್ ಆಗಿದೆ. ಶೇ.30ರಷ್ಟು ಮಂದಿ ಟಾಕ್ಸಿಕ್‌ಗಾಗಿ ಕಾದಿದ್ದಾರೆ. ಆದರೆ ಧುರಂಧರ್ 2 ಚಿತ್ರವನ್ನು ನೋಡಲು ಕಾಯುತ್ತಿರುವವರ ಸಂಖ್ಯೆ ಶೇ.10 ಆಗಿದೆ. ಟಾಕ್ಸಿಕ್‌ಗಿಂತ ಮೂರು ಪಟ್ಟು ಕಮ್ಮಿ.
Toxic Movie Teaser: `ಟಾಕ್ಸಿಕ್' ಟೀಸರ್ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್ ಫುಲ್ ಟೆನ್ಷನ್!
ಟಾಕ್ಸಿಕ್‌ಗೆ ಸಿಗಲಿವೆ ಹೆಚ್ಚು ಸ್ಕ್ರೀನ್‌ಗಳು
ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾವು ಭಾರತದ ಸುಮಾರು 4300 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಆದರೆ ಟಾಕ್ಸಿಕ್‌ಗೆ ಸುಮಾರು 5500 ಸ್ಕ್ರೀನ್‌ಗಳು ಫಿಕ್ಸ್ ಆಗಿವೆ ಎಂಬ ಮಾಹಿತಿ ಇದೆ. ಇದು ಮೊದಲ ದಿನದ ಗಳಿಕೆ ಮೇಲೂ ಪರಿಣಾಮ ಬೀರಲಿದೆ. ಸದ್ಯ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರಗಳ ಪ್ರಕಾರ, ಧುರಂಧರ್ 2 ಸಿನಿಮಾ ಮೊದಲ ದಿನ ಅಂದಾಜು 80 ಕೋಟಿ ರೂ. ಬಾಚಿಕೊಳ್ಳುವ ನಿರೀಕ್ಷೆ ಇದ್ದು, ಟಾಕ್ಸಿಕ್ ಚಿತ್ರವು 250 ಕೋಟಿ ರೂ. ಮೇಲೆ ಗಳಿಕೆ ಮಾಡುವ ಸಾಧ್ಯತೆಗಳು ಜಾಸ್ತಿ ಇವೆ ಎಂಬ ಟಾಕ್ ಇದೆ. ಇದೆಲ್ಲದಕ್ಕೂ ಮಾರ್ಚ್ 19ರಂದು ಉತ್ತರ ಸಿಗಲಿದೆ.
ಆಡಿಯೋ ಹಕ್ಕುಗಳ ಮಾರಾಟದಲ್ಲೂ ದಾಖಲೆ
ಯಶ್ ಮತ್ತು ಗೀತು ಮೋಹನ್ ದಾಸ್ ಕಾಂಬಿನೇಷನ್‌ನ 'ಟಾಕ್ಸಿಕ್' ಚಿತ್ರದ ಸಂಗೀತ ಹಕ್ಕುಗಳನ್ನು ಜೀ ಮ್ಯೂಸಿಕ್ ಕಂಪನಿ ಬರೋಬ್ಬರಿ 42 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆಯಂತೆ. ಇದು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರವೊಂದಕ್ಕೆ ಸಿಕ್ಕಿರುವ ಅತ್ಯಂತ ದೊಡ್ಡ ಮೊತ್ತದ ಡೀಲ್ ಎನ್ನಲಾಗಿದೆ. ಇನ್ನೊಂದೆಡೆ, ಭಾರಿ ನಿರೀಕ್ಷೆ ಮೂಡಿಸಿರುವ 'ಧುರಂಧರ್ 2' ಚಿತ್ರದ ಸಂಗೀತ ಹಕ್ಕುಗಳನ್ನು ಟಿ-ಸಿರೀಸ್ ಸಂಸ್ಥೆ 27 ಕೋಟಿ ರೂ.ಗಳನ್ನು ನೀಡಿ ಖರೀದಿಸಿದೆಯಂತೆ. ಈ ಮೂಲಕ ಆಡಿಯೋ ರೈಟ್ಸ್ ವಿಚಾರದಲ್ಲೂ ಟಾಕ್ಸಿಕ್ ಸಿನಿಮಾ ದೊಡ್ಡ ಹವಾ ಕ್ರಿಯೆಟ್ ಮಾಡಿದೆ, ಇಲ್ಲಿಯೂ ಧುರಂಧರ್ 2 ಸಿನಿಮಾವನ್ನು ಬೀಟ್ ಮಾಡಿದೆ.