ʼʼಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಕದಲುವುದಿಲ್ಲ; ಪ್ರತಿಭಟನೆ ವಿಸ್ತರಣೆಗೆ ಪೊಲೀಸರ ಅನುಮತಿ ಸಿಕ್ಕಿಲ್ಲʼʼ: ಸಿಜೆಪಿ ಹೇಳಿದ್ದೇನು?
Abhijeet Dipke: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿಯಲಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಮುಖ್ಯಸ್ಥ ಅಭಿಜೀತ್ ದಿಪ್ಕೆ ಹೇಳಿದ್ದಾರೆ. ಪ್ರತಿಭಟನೆಯ ಅವಧಿ ವಿಸ್ತರಣೆಗೆ ನೀಡಿದ ಮನವಿಗೆ ದೆಹಲಿ ಪೊಲೀಸರು ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಹೋರಾಟ ತೀವ್ರಗೊಳ್ಳಲಿದೆ ಎಂದಿದ್ದಾರೆ.
ಅಭಿಜಿತ್ ದಿಪ್ಕೆ -
ನವದೆಹಲಿ, ಜೂ. 21: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಅವಧಿ ವಿಸ್ತರಿಸುವಂತೆ ವಿಸ್ತರಿಸುವಂತೆ ಮನವಿ ಸಲ್ಲಿಸಲು ಮಾಡುತ್ತಿರುವ ಫೋನ್ ಕರೆಗಳಿಗೆ ದೆಹಲಿ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಮುಖ್ಯಸ್ಥ ಅಭಿಜೀತ್ ದಿಪ್ಕೆ (Abhijeet Dipke) ಆರೋಪಿಸಿದ್ದಾರೆ.
ದೇಶಾದ್ಯಂತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳು ಮತ್ತು ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿರುವ ಎರಡನೇ ಬೃಹತ್ ಪ್ರತಿಭಟನೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿರುವ ನೂರಾರು ವಿದ್ಯಾರ್ಥಿಗಳು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡಿದರು. ನ್ಯಾಯ ಸಿಗುವವರೆಗೂ ಇಲ್ಲಿಯೇ ಕುಳಿತು ಧರಣಿ ಮುಂದುವರಿಸಲು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಹೀಗಾಗಿ ಪ್ರತಿಭಟನೆಯ ಅವಧಿಯನ್ನು ವಿಸ್ತರಿಸಲು ಅನುಮತಿ ನೀಡಬೇಕೆಂದು ಅವರು ದೆಹಲಿ ಪೊಲೀಸರಲ್ಲಿ ವಿನಂತಿಸಿದ್ದಾರೆ.
ಅಭಿಜಿತ್ ದಿಪ್ಕೆ ಮಾತು:
Police is about to arrest me. I appeal to you to not stop this peaceful protest nationwide even if I am arrested! pic.twitter.com/P7ljEJkCzP
— Abhijeet Dipke (@abhijeet_dipke) June 20, 2026
"ನಮ್ಮ ಪ್ರತಿಭಟನೆಯು ಸಂಪೂರ್ಣವಾಗಿ ಶಾಂತಿಯುತವಾಗಿದೆ. ನಾವು ಕೇವಲ ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಮುಗ್ಧ ವಿದ್ಯಾರ್ಥಿಗಳು. ಮಾತುಕತೆಯ ಹಾದಿ ಯಾವಾಗಲೂ ಮುಕ್ತವಾಗಿದೆ. ಆದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವುದೇ ನಮ್ಮ ಏಕೈಕ ಮತ್ತು ಪ್ರಮುಖ ಷರತ್ತು" ಎಂದು ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕೆಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಪೊಲೀಸರು ಈ ಶಾಂತಿಯುತ ಹೋರಾಟಗಾರರನ್ನು ಬಂಧಿಸಲು ಮುಂದಾದರೆ, ತಾವು ಸ್ವತಃ ಮೊದಲಿಗರಾಗಿ ಬಂಧನಕ್ಕೊಳಗಾಗಲು ಸಿದ್ಧರಿರುವುದಾಗಿ ದಿಪ್ಕೆ ಸವಾಲು ಹಾಕಿದ್ದಾರೆ.
ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆಗೆ ಕೊಲೆ ಬೆದರಿಕೆ
ಇತ್ತೀಚೆಗೆ ಜೈಪುರದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯ ಹೊರತಾಗಿಯೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ದೃಢವಾಗಿ ಹೇಳಿದ್ದಾರೆ. ದೇಶದ ಭವಿಷ್ಯದೊಂದಿಗೆ ಆಟವಾಡುತ್ತಿರುವ ಪರೀಕ್ಷಾ ಮಾಫಿಯಾವನ್ನು ಕೊನೆಗಾಣಿಸುವುದು ಮತ್ತು ವಿದ್ಯಾರ್ಥಿಗಳ ಹಿತರಕ್ಷಣೆ ಮಾಡುವುದೇ ತಮ್ಮ ಪ್ರಮುಖ ಉದ್ದೇಶ. ಪರೀಕ್ಷಾ ವ್ಯವಸ್ಥೆಯ ಅಕ್ರಮಗಳ ವಿರುದ್ಧದ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಜಂತರ್ ಮಂತರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡುವಂತೆ ಅವರು ಬೆಂಬಲಿಗರಿಗೆ ಕರೆ ನೀಡಿದ್ದಾರೆ.