ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನ ವಾಯು ಪ್ರದೇಶಕ್ಕೆ ಏರ್‌ ಇಂಡಿಯಾ ವಿಮಾನ ಎಂಟ್ರಿ; ತನಿಖೆ ಕೈಗೆತ್ತಿಕೊಂಡ ಕೇಂದ್ರ

Pakistan Airspace: ಏರ್‌ ಇಂಡಿಯಾ ವಿಮಾನ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿ ಸ್ವಲ್ಪ ಹೊತ್ತು ಅಲ್ಲೇ ಇದ್ದ ಘಟನೆ ಜೂನ್‌ 22ರಂದು ನಡೆದಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದೆಹಲಿಯಿಂದ ಪಂಜಾಬ್‌ನ ಅಮೃತಸರಕ್ಕೆ ಹೊರಟಿದ್ದ ಏರ್‌ ಇಂಡಿಯಾ AI479 ವಿಮಾನವು ಪಾಕಿಸ್ತಾನ ವಾಯು ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.

ಪಾಕಿಸ್ತಾನ ವಾಯು ಪ್ರದೇಶಕ್ಕೆ ಎಂಟ್ರಿ ಕೊಟ್ಟ  ಏರ್‌ ಇಂಡಿಯಾ ವಿಮಾನ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jun 24, 2026 6:09 PM

ದೆಹಲಿ, ಜೂ. 24: ಜೂನ್‌ 22ರಂದು ಏರ್‌ ಇಂಡಿಯಾ ವಿಮಾನ (Air India Flight) ಪಾಕಿಸ್ತಾನದ ವಾಯು ಪ್ರದೇಶವನ್ನು (Pakistan Airspace) ಪ್ರವೇಶಿಸಿ ಸ್ವಲ್ಪ ಹೊತ್ತು ಅಲ್ಲೇ ಇದ್ದು ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ದೆಹಲಿಯಿಂದ ಪಂಜಾಬ್‌ನ ಅಮೃತಸರಕ್ಕೆ ಹೊರಟಿದ್ದ ವಿಮಾನ ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಪ್ರವೇಶಿಸಿದ್ದು ಏಕೆ ಎನ್ನುವ ಬಗ್ಗೆ ಪ್ರಶ್ನೆ ಕಾಡುತ್ತಿದ್ದು, ಉತ್ತರ ಕಂಡುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಏರ್‌ ಇಂಡಿಯಾ ಮಾಹಿತಿ ನೀಡಿದೆ.

AI479 ವಿಮಾನವು ಜೂನ್‌ 22ರಂದು ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದೆ ಎಂದು ಏರ್ ಇಂಡಿಯಾ ಹೇಳಿಕೆಯೊಂದರಲ್ಲಿ ತಿಳಿಸಿದೆ. "ಜೂನ್ 22ರಂದು ದೆಹಲಿಯಿಂದ ಅಮೃತಸರಕ್ಕೆ ಹೊರಟ AI479 ವಿಮಾನ ಕೊಂಚ ಹೊತ್ತು ಪಾಕಿಸ್ತಾನದ ವಾಯು ಪ್ರದೇಶದಲ್ಲಿತ್ತು. ಬಳಿಕ ಸುರಕ್ಷಿತವಾಗಿ ಭಾರತದಲ್ಲಿ ಲ್ಯಾಂಡ್‌ ಆಗಿದೆʼʼ ಎಂದು ಏರ್‌ ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನ ವಾಯು ಪ್ರದೇಶ ಪ್ರವೇಶಿಸಿದ್ದ ಏರ್‌ ಇಂಡಿಯಾ ವಿಮಾನ:



ಘಟನೆಯನ್ನು ಸಂಬಂಧಿತ ನಿಯಂತ್ರಕ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಆಂತರಿಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. "ಘಟನೆಯನ್ನು ನಿಯಂತ್ರಕ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಆಂತರಿಕವಾಗಿ ತನಿಖೆ ನಡೆಸಲಾಗುತ್ತಿದೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಮೊದಲ ಆದ್ಯತೆ" ಎಂದು ಅದಿಕಾರಿಗಳು ಪುನರುಚ್ಚರಿಸಿದ್ದಾರೆ. ವಾಯು ಪ್ರದೇಶ ಉಲ್ಲಂಘನೆಗೆ ಕಾರಣವಾದ ಸಂದರ್ಭಗಳ ಕುರಿತು ಏರ್ ಇಂಡಿಯಾ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಇರಾನ್ ವಾಯು ಪ್ರದೇಶದೊಳಗೆ ನಿರ್ಬಂಧ; ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗುವ ಹಲವು ವಿಮಾನ ಸಂಚಾರ ರದ್ದು

ಪ್ರಾಥಮಿಕ ಮಾಹಿತಿ ಪ್ರಕಾರ, ಆರಂಭದಲ್ಲಿ 13 DME (ದೂರ ಮಾಪನ ಉಪಕರಣ) ಹಿಡಿದಿಟ್ಟುಕೊಳ್ಳಲು ವಿಮಾನಕ್ಕೆ ವಾಯು ಸಂಚಾರ ನಿಯಂತ್ರಣ (ATC) ಸಂಸ್ಥೆಯ ಕಡೆಯಿಂದ ಸೂಚನೆ ನೀಡಲಾಗಿತ್ತು. ಆದಾಗ್ಯೂ, ವಿಮಾನ ಎಡಕ್ಕೆ ತಿರುವು ಪಡೆದು ಅಂತಾರಾಷ್ಟ್ರೀಯ ಗಡಿಯನ್ನು (IB) ದಾಟಿತು. ಇದರ ಪರಿಣಾಮವಾಗಿ ಪಾಕಿಸ್ತಾನಿ ವಾಯು ಪ್ರದೇಶಕ್ಕೆ ಪ್ರವೇಶಿಸಿತು. ಆಪರೇಷನ್‌ ಸಿಂದೂರ್‌ ಮೂಲಕ ಭಾರತ ದಿಟ್ಟವಾಗಿ ತಿರುಗೇಟು ನೀಡಿದ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ಮುಚ್ಚಿದೆ. ಆರಂಭದಲ್ಲಿ 2025ರ ಏಪ್ರಿಲ್‌ 23ರಲ್ಲಿ ಪಾಕಿಸ್ತಾನ ಭಾರತದ ನಾಗರಿಕ ಮತ್ತು ಮಿಲಿಟರಿ ವಿಮಾನಗಳ ಪ್ರವೇಶ ನಿರ್ಬಂಧಿಸಿತು. ಬಳಿಕ ಹಂತ ಹಂತವಾಗಿ ನಿರ್ಬಂಧವನ್ನು ಮುಂದೂಡುತ್ತಲೇ ಬಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಬೆವರಿಳಿಸಿದ ಭಾರತ; ಅಸಂಬದ್ಧ ಹೇಳಿಕೆಗೆ ತರಾಟೆ

ದೆಹಲಿಯಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ತನ್ನ ನಿಗದಿತ ಮಾರ್ಗದಿಂದ ವಿಮುಖವಾಗಿ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪಾಕಿಸ್ತಾನದ ಅದಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ ಬಳಿಕ ಏರ್‌ ಇಂಡಿಯಾ ಭಾರತಕ್ಕೆ ಹಿಂದಿರುಗಿತು. ಅಮೃತಸರ ಏರ್‌ಪೋರ್ಟ್‌ ಪಾಕಿಸ್ತಾನದ ಗಡಿ ಭಾಗದಲ್ಲಿರುವುದರಿಂದ ಈ ಗೊಂದಲ ಉಂಟಾಗಿರುವ ಸಾಧ್ಯತೆ ಇದೆ. ಭಾರತ-ಪಾಕಿಸ್ತಾನ ಮಧ್ಯೆ ಸಂಬಂಧ ಹಳಸಿರುವ ಮಧ್ಯೆ ಈ ಘಟನೆ ನಡೆದಿದ್ದು, ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ಇತ್ತ ವಿಮಾನವನ್ನು ಸಮಗ್ರ ತಪಾಸಣೆಗೆ ಒಳಪಡಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.