Shehbaz Sharif: ಮೋದಿ ನಡೆಯನ್ನೇ ಅನುಕರಿಸಿದ ಪಾಕ್ ಪ್ರಧಾನಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್; ಸೇನಾ ನೆಲೆಗೆ ಭೇಟಿ
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಬುಧವಾರ (ಮೇ 14) ಪಾಕಿಸ್ತಾನದ ಸಿಯಾಲ್‌ಕೋಟ್ ಮತ್ತು ಪಸ್ರೂರ್‌ನಲ್ಲಿರುವ ವಾಯುನೆಲೆಗಳಿಗೆ ಬೇಟಿ ನೀಡಿದರು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಂಜಾಬ್‌ನ ಆದಂಪುರ ವಾಯು ನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದ 1 ದಿನದ ನಂತರ I ಬೆಳವಣಿಗೆ ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ.

ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತರುವ ಸಂಘರ್ಷಕ್ಕೆ ಸದ್ಯ ಬ್ರೇಕ್ ಬಿದ್ದಿದ್ದು, ಯುದ್ಧದ ಭೀತಿ ದೂರವಾಗಿದೆ. ಮಂಗಳವಾರ (ಮೇ 13) ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಪಂಜಾಬ್‌ನ ಆದಂಪುರ ವಾಯು ನೆಲೆಗೆ (Adampur Air Base) ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದ 1 ದಿನದ ನಂತರ ಇದೀಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಕೂಡ ಅದೇ ನಡೆಯನ್ನು ಅನುಕರಿಸಿದ್ದಾರೆ. ಶೆಹಬಾಜ್ ಶರೀಫ್ ಬುಧವಾರ ಪಾಕಿಸ್ತಾನದ ಸಿಯಾಲ್‌ಕೋಟ್ ಮತ್ತು ಪಸ್ರೂರ್‌ನಲ್ಲಿರುವ ವಾಯುನೆಲೆಗಳಿಗೆ ಬೇಟಿ ನೀಡಿದರು.
ಭಾರತ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯಿಂದ ನಲುಗಿ ಹೋಗಿದ್ದ ಪಾಕಿಸ್ತಾನ ಭಯೋತ್ಪಾದಕರ ಪರವಾಗಿ ಮಧ್ಯ ಪ್ರವೇಶಿಸಿತ್ತು. ಅದಾದ ಬಳಿಕ ಭಾರತ-ಪಾಕ್ ನಡುವೆ ಸಂಘರ್ಷ ತೀವ್ರಗೊಂಡಿತ್ತು. ಈ ವೇಳೆ ಭಾರತ ನಡೆಸಿದ ದಾಳಿಯಲ್ಲಿ ಪಸ್ರೂರ್ ಮತ್ತು ಸಿಯಾಲ್‌ಕೋಟ್ ಎರಡೂ ವಾಯುನೆಲೆಗಳಿಗೆ ತೀವ್ರವಾಗಿ ಹಾನಿಯಾಗಿವೆ.
ಸೈನಿಕರನ್ನು ಭೇಟಿಯಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್:
Prime Minister Shehbaz Sharif visited Pasrur Cantonment, Sialkot, today to commend the exceptional bravery & professionalism of the troops during Operation Bunyanum Marsoos. COAS Gen Asim Munir & Air Chief Zaheer Ahmed Baber Sidhu were also present during the visit. pic.twitter.com/PIGipXafjQ
— Tayyab Khan (@TayyabKhanARY) May 14, 2025
ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್, ಉಪ ಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತಿತರರು ಶರೀಫ್ ಜತೆಗೆ ತೆರಳಿದರು. ಪ್ರಧಾನಿ ಶರೀಫ್ ಸಿಯಾಲ್‌ಕೋಟ್ ವಾಯುನೆಲೆಯಲ್ಲಿ ಪಿಎಎಫ್ (Pakistan Air Force) ಸಿಬ್ಬಂದಿಯನ್ನು ಭೇಟಿಯಾದರು. ಭಾರತೀಯ ಸೇನೆ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದ ಬಳಿಕ ಪಾಕಿಸ್ತಾನ ನಡೆಸಿದ ಕಾರ್ಯಾಚರಣೆಗೆ ಪಿಎಎಫ್ ನೆರವು ನೀಡಿತ್ತು.
ಈ ಸುದ್ದಿಯನ್ನೂ ಓದಿ: Operation Sindoor: ನಿಮ್ಮ ಶೌರ್ಯಕ್ಕೆ ನನ್ನ ಸಲಾಂ: ಆಪರೇಷನ್ ಸಿಂದೂರ್ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ
ಏ. 22ರಂದು ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಸಾವಿಗೆ ಸೇಡು ತೀರಿಸಿಕೊಂಡ ಆಪರೇಷನ್ ಸಿಂಧೂರ್‌ನಲ್ಲಿ ನೇರವಾಗಿ ಭಾಗಿಯಾಗಿರುವ ಐಎಎಫ್ (Indian Air Force) ಸಿಬ್ಬಂದಿ ಮತ್ತು ಸೈನಿಕರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಆದಂಪುರ ವಾಯು ನೆಲೆಗೆ ತೆರಳಿದ್ದರು. ನಂತರ ಅವರು ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದರು. ಸೈನಿಕರನ್ನು ಭೇಟಿಯಾಗಿದ್ದು ಬಹಳ ವಿಶೇಷ ಅನುಭವ ಎಂದು ಹೇಳಿಕೊಂಡಿದ್ದರು. ಜತೆಗೆ ರಾಷ್ಟ್ರವು ತನ್ನ ಸಶಸ್ತ್ರ ಪಡೆಗಳಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತದೆ ಎಂದಿದ್ದರು.
ಆದಂಪುರ ಭಾರತದ 2ನೇ ಅತಿದೊಡ್ಡ ವಾಯು ನೆಲೆಯಾಗಿದ್ದು, ಅಲ್ಲಿ ಅಳವಡಿಸಿಕೊಂಡಿರುವ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಸುಳ್ಳು ಹೇಳಿ ಜಗತ್ತಿನ ಮುಂದೆ ನಗೆ ಪಾಟಿಲಿಗೆ ಗುರಿಯಾಗಿತ್ತು.
ಪಾಕಿಸ್ತಾನಕ್ಕೆ ಎಚ್ಚರಿಕೆ
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ 3 ದಿನಗಳ ಬಳಿಕ ಪ್ರಧಾನಿ ಮೋದಿ ಆದಂಪುರ ತೆರಳಿದ್ದರು. ಸದ್ಯಕ್ಕೆ ಕಾರ್ಯಾಚರಣೆಗೆ ತಾತ್ಕಾಲಿಕ ವಿರಾಮ ಹಾಡಲಾಗಿದ್ದು, ಭವಿಷ್ಯದ ಕ್ರಮವು ಪಾಕಿಸ್ತಾನದ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂದು ಭಾರತ ಎಚ್ಚರಿಸಿದೆ.
ಭಾರತದ ನೆಲದಲ್ಲಿ ಭಯೋತ್ಪಾದನೆ ನಡೆಸುವವರಿಗೆ ನಮ್ಮ ಸೇನೆ ಪ್ರತ್ಯುತ್ತರವನ್ನು ನೀಡಿದೆ. ನಮ್ಮ ಬಳಿ ಅತ್ಯಾಧುನಿಕ ಆಯುಧಗಳಿವೆ. ಭಾರತ ಯಾವುದೇ ಪರಮಾಣು ಬ್ಲ್ಯಾಕ್‌ಮೇಲ್ ಅನ್ನು ಸಹಿಸುವುದಿಲ್ಲ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.