ಇಂಧನ ದರ ಹೆಚ್ಚಳ; ಸುಮಾರು 400 ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲು ಮುಂದಾದ ಏರ್ ಇಂಡಿಯಾ
ಪಶ್ಚಿಮ ಏಷ್ಯಾ ಪ್ರದೇಶದ ಉದ್ವಿಗ್ನ ಪರಿಸ್ಥಿತಿ, ಹೆಚ್ಚುತ್ತಿರುವ ಜೆಟ್ ಇಂಧನ ದರ ಹಾಗೂ ಕೆಲವು ದೇಶಗಳ ಮೇಲಿನ ವೈಮಾನಿಕ ನಿರ್ಬಂಧಗಳ ಪರಿಣಾಮವಾಗಿ ಏರ್ ಇಂಡಿಯಾ ಜೂನ್‌ನಿಂದ ಆಗಸ್ಟ್‌ವರೆಗೆ ಹಲವು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಸೇವೆಗಳನ್ನು ಕಡಿತಗೊಳಿಸುವುದಾಗಿ ಮತ್ತು ಕೆಲವು ಮಾರ್ಗಗಳಲ್ಲಿ ತಾತ್ಕಾಲಿಕ ಸ್ಥಗಿತ ಘೋಷಿಸಿದೆ. ಉತ್ತರ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ಹಾಗೂ ಆಗ್ನೇಯ ಏಷ್ಯಾದ ಅನೇಕ ಮಾರ್ಗಗಳು ಈ ನಿರ್ಧಾರದಿಂದ ಪ್ರಭಾವಿತವಾಗಲಿವೆ.
ಏರ್ ಇಂಡಿಯಾ -
ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು (Air India) ಜೂನ್‌ನಿಂದ ಆಗಸ್ಟ್‌ವರೆಗೆ ಪ್ರತಿ ತಿಂಗಳು ಸುಮಾರು 400 ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ (International Flights) ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಹಾಗೂ ಕೆಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಹೆಚ್ಚುತ್ತಿರುವ ಜೆಟ್ ಇಂಧನ ದರ, ಪಶ್ಚಿಮ ಏಷ್ಯಾ ಪ್ರದೇಶದ ಉದ್ವಿಗ್ನ ಪರಿಸ್ಥಿತಿ ಮತ್ತು ಕೆಲವು ದೇಶಗಳ ಮೇಲಿನ ವೈಮಾನಿಕ ನಿರ್ಬಂಧಗಳಿಂದ ಕಾರ್ಯಾಚರಣಾ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
‘ಕಾರ್ಯಾಚರಣೆ ಸ್ಥಿರತೆಯನ್ನು ಸುಧಾರಿಸುವುದು ಮತ್ತು ಕೊನೆಯ ಕ್ಷಣದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲವನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ಹೇಳಿದೆ. ವಾಣಿಜ್ಯ ಮತ್ತು ಕಾರ್ಯಾಚರಣಾ ಸವಾಲುಗಳು ಹೆಚ್ಚುತ್ತಿರುವ ಹಿನ್ನೆಲೆ, ಕೆಲವು ದೀರ್ಘ ದೂರದ ಮಾರ್ಗಗಳನ್ನು ಮುಂದುವರಿಸುವುದು ಆರ್ಥಿಕವಾಗಿ ಕಷ್ಟಕರವಾಗಿದೆ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ.
ಯಾವ ಮಾರ್ಗಗಳಲ್ಲಿ ಬದಲಾವಣೆ?
ಉತ್ತರ ಅಮೆರಿಕಾ ಮಾರ್ಗಗಳಲ್ಲಿ ದೆಹಲಿ–ಚಿಕಾಗೊ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೆಹಲಿ–ಸ್ಯಾನ್ ಫ್ರಾನ್ಸಿಸ್ಕೊ ವಾರಕ್ಕೆ 10ರಿಂದ 7 ವಿಮಾನಗಳಿಗೆ ಇಳಿಕೆಯಾಗಲಿದೆ. ದೆಹಲಿ–ಟೊರೊಂಟೊ ಸೇವೆ 10ರಿಂದ 5ಕ್ಕೆ ಕಡಿತಗೊಂಡಿದ್ದು, ಆಗಸ್ಟ್‌ನಲ್ಲಿ ಮರುದಿನ ನಿತ್ಯ ಸೇವೆ ಆರಂಭಿಸುವ ಯೋಜನೆ ಇದೆ. ದೆಹಲಿ–ವ್ಯಾಂಕೂವರ್ ಮಾರ್ಗದಲ್ಲೂ ವಿಮಾನಗಳ ಸಂಖ್ಯೆ ಕಡಿಮೆಯಾಗಲಿದೆ. ದೆಹಲಿ–ನ್ಯೂವರ್ಕ್ ಹಾಗೂ ಮುಂಬೈ–JFK ಸೇವೆಗಳನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುವವರಿಗೆ ಏರ್ ಇಂಡಿಯಾ, ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಹತ್ವದ ಸೂಚನೆ
ಯುರೋಪ್ ವಿಭಾಗದಲ್ಲಿ ದೆಹಲಿ–ಪ್ಯಾರಿಸ್ ಮಾರ್ಗದ ವಿಮಾನಗಳು 14ರಿಂದ 7ಕ್ಕೆ ಇಳಿಯಲಿವೆ. ಕೊಪೆನ್‌ಹೇಗನ್, ವಿಯೆನ್ನಾ, ಜ್ಯೂರಿಕ್, ರೋಮ್ ಮತ್ತು ಮಿಲಾನ್ ಮಾರ್ಗಗಳಲ್ಲೂ ವಾರಾಂತರ ಸೇವೆ ಕಡಿತಗೊಳ್ಳಲಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಮತ್ತು ಸಿಡ್ನಿ ಮಾರ್ಗಗಳಲ್ಲಿ ದೈನಂದಿನ ಸೇವೆ ಬದಲಾಗಿ ವಾರಕ್ಕೆ ನಾಲ್ಕು ವಿಮಾನಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಹಾಗೇ ಆಗ್ನೇಯ ಏಷ್ಯಾ ವಿಭಾಗದಲ್ಲಿ ದೆಹಲಿ–ಶಾಂಘೈ, ಚೆನ್ನೈ–ಸಿಂಗಪುರ, ಮುಂಬೈ–ಢಾಕಾ ಮತ್ತು ದೆಹಲಿ–ಮಾಲೆ ಸೇವೆಗಳನ್ನು ಆಗಸ್ಟ್ ಅಂತ್ಯದವರೆಗೆ ಸ್ಥಗಿತಗೊಳಿಸಲಾಗಿದೆ. ದೆಹಲಿ–ಸಿಂಗಪುರ ಸೇವೆ 24ರಿಂದ 14ಕ್ಕೆ ಇಳಿಕೆಯಾಗಿದ್ದು, ಬ್ಯಾಂಕಾಕ್, ಕೌಲಾಲಂಪುರ, ಹೋ ಚಿ ಮಿನ್ ಸಿಟಿ ಹಾಗೂ ಹನೋಯಿ ಮಾರ್ಗಗಳಲ್ಲೂ ವಿಮಾನಗಳ ಸಂಖ್ಯೆ ಕಡಿಮೆಯಾಗಲಿದೆ.
ಪ್ರಯಾಣಿಕರಿಗೆ ಏನು ಸೌಲಭ್ಯ?
ವಿಮಾನ ರದ್ದತಿ ಅಥವಾ ವೇಳಾಪಟ್ಟಿ ಬದಲಾವಣೆಯಿಂದ ತೊಂದರೆಗೊಳಗಾಗುವ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ, ಉಚಿತ ದಿನಾಂಕ ಬದಲಾವಣೆ ಮತ್ತು ಅಗತ್ಯವಿದ್ದಲ್ಲಿ ಸಂಪೂರ್ಣ ಹಣ ಮರುಪಾವತಿ ನೀಡಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ. ಪ್ರಯಾಣಿಕರು ಸಹಾಯಕ್ಕಾಗಿ ಸಂಸ್ಥೆಯ 24x7 ಸಂಪರ್ಕ ಕೇಂದ್ರ ಮತ್ತು ಡಿಜಿಟಲ್ ಸೇವೆಗಳನ್ನು ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಏರ್ ಇಂಡಿಯಾ ಪ್ರತಿ ತಿಂಗಳು 1,200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ ಜಾಗತಿಕ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ.