ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವಾಸ ಮತ ಗೆದ್ದ ಬಿಹಾರ ಸಿಎಂ ಸಾಮ್ರಾಟ್ ಚೌಧರಿ; ನಿತೀಶ್ ಕುಮಾರ್ ಹೆಜ್ಜೆಗಳನ್ನು ಅನುಸರಿಸುವುದಾಗಿ ಪ್ರತಿಜ್ಞೆ

Bihar CM Samrat Choudhary: ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸಿಎಂ ಹುದ್ದೆ ಸ್ವೀಕರಿಸಿದ ನಂತರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದರು. ಮಾಜಿ ಸಿಎಂ ನಿತೀಶ್ ಕುಮಾರ್ ಅವರ ಹೆಜ್ಜೆಗಳನ್ನು ಅನುಸರಿಸುವುದಾಗಿ ತಿಳಿಸಿದರು. ನಿತೀಶ್ ಕುಮಾರ್ ಸಮೃದ್ಧ ಬಿಹಾರ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು.

ವಿಶ್ವಾಸ ಮತ ಗೆದ್ದ ಬಿಹಾರ ಸಿಎಂ ಸಾಮ್ರಾಟ್ ಚೌಧರಿ

ವಿಶ್ವಾಸ ಮತ ಗೆದ್ದ ಬಿಹಾರ ಸಿಎಂ ಸಾಮ್ರಾಟ್ ಚೌಧರಿ -

Priyanka P
Priyanka P Apr 24, 2026 5:52 PM

ಪಟನಾ, ಏ.24: ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Choudhary) ಅವರು ಸಿಎಂ ಹುದ್ದೆ ಸ್ವೀಕರಿಸಿದ ನಂತರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದರು. ಈ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ನಿತೀಶ್ ಕುಮಾರ್ (Nitish Kumar) ಅವರ ಹೆಜ್ಜೆಗಳನ್ನು ಅನುಸರಿಸುವುದಾಗಿ ಮತ್ತು ‘ತ್ರಿವಳಿ ಸಿ’ (ಭ್ರಷ್ಟಾಚಾರ, ಅಪರಾಧ ಮತ್ತು ಕೋಮುವಾದ) ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಮುಖ್ಯಮಂತ್ರಿ ಚೌಧರಿ ಅವರು ತಮ್ಮ ಆಡಳಿತದ ಪ್ರಮುಖ ಆದ್ಯತೆಗಳನ್ನು ವಿವರಿಸಿದರು. ಮುಖ್ಯಮಂತ್ರಿಗಳ ಕಚೇರಿ ನೇರವಾಗಿ ಬ್ಲಾಕ್, ಸರ್ಕಲ್ ಮತ್ತು ಪೊಲೀಸ್ ಠಾಣೆಗಳ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲಿದೆ. ಖಾಸಗಿ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ, 11 ಟೌನ್‌ಶಿಪ್‌ಗಳ ಅಭಿವೃದ್ಧಿ, ಕೃಷಿ, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಕೇಂದ್ರೀಕರಿಸಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ ಇದರಿಂದ ಆಡಳಿತ ಹೆಚ್ಚು ಪರಿಣಾಮಕಾರಿ ಮತ್ತು ಜವಾಬ್ದಾರಿಯುತವಾಗುತ್ತದೆ ಎಂದು ಹೇಳಿದರು.

ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ, ಕಳೆದ ಎರಡು ದಶಕಗಳಲ್ಲಿ ಸಮಾಜದ ಎಲ್ಲಾ ವರ್ಗಗಳಿಗೂ ಕೆಲಸ ಮಾಡಿದೆ ಎಂದು ಚೌಧರಿ ಹೇಳಿದರು. “ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರಮಿಸುತ್ತಿದ್ದರೆ, ನಿತೀಶ್ ಕುಮಾರ್ ಸಮೃದ್ಧ ಬಿಹಾರ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ನಡೆದ ಪರಿವರ್ತನೆಯ ಪಯಣವನ್ನು ಇನ್ನಷ್ಟು ವೇಗವಾಗಿ ಮುಂದುವರೆಸಬೇಕಾಗಿದೆ” ಎಂದರು.

ಬಿಹಾರ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ

ಇನ್ನು ಅವರು ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ತಮ್ಮನ್ನು ಲಾಲು ಶಾಲೆಯ ಉತ್ಪನ್ನ ಎಂದು ಕರೆದ ವಿಚಾರಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕೈಯಲ್ಲಿ ಅವರು ಮತ್ತು ಅವರ ಕುಟುಂಬ ಎದುರಿಸಿದ ದೌರ್ಜನ್ಯಗಳು ತಮ್ಮನ್ನು ಮುಖ್ಯಮಂತ್ರಿ ಹುದ್ದೆಗೆ ಏರಲು ಕಾರಣವಾಯಿತು ಎಂದು ಚೌಧರಿ ಹೇಳಿದರು. ಈ ಹೇಳಿಕೆಯ ಮೂಲಕ, ಅವರು ತಮ್ಮ ರಾಜಕೀಯ ಹಿನ್ನೆಲೆಯನ್ನು ವಿವರಿಸುತ್ತಾ, ಪ್ರತಿಪಕ್ಷದ ಟೀಕೆಗಳಿಗೆ ತಿರುಗೇಟು ನೀಡಿದರು.

ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಸ್ಥಾನಕ್ಕೆ ತಲುಪಬೇಕು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಇಲ್ಲಿ ಯಾವುದೇ ಶಾಲೆ ಎಂಬುದಿಲ್ಲ. ಬಿಜೆಪಿ (ಭಾರತೀಯ ಜನತಾ ಪಕ್ಷ) ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುವ ಮೊದಲು ರಾಜ್ಯ ಪಕ್ಷದ ಮುಖ್ಯಸ್ಥ ಮತ್ತು ಎರಡು ಬಾರಿ ಉಪಮುಖ್ಯಮಂತ್ರಿಯನ್ನಾಗಿ ಮಾಡಿತು. ಇದೇ ವೇಳೆ ಎನ್‌ಡಿಎ ಮತ್ತು ಬಿಜೆಪಿ ಒಂದೇ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಕೆಲವು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿರುವಂತೆ ಎರಡರ ನಡುವೆ ಭಿನ್ನತೆ ಇಲ್ಲ ಎಂದು ಅವರು ಹೇಳಿದರು.

ನಿತೀಶ್ ಕುಮಾರ್ ಅವರ ಇಚ್ಛಾಶಕ್ತಿಯೇ ಅವರ ಈ ಉನ್ನತಿಗೆ ಕಾರಣ ಎಂದು ಅವರು ಹೇಳಿದರು. ನಿತೀಶ್ ಕುಮಾರ್ ಇಲ್ಲದಿದ್ದರೆ, ಲಾಲು ಪ್ರಸಾದ್ ಯಾದವ್ ಎಂದಿಗೂ ನಾಯಕರಾಗುತ್ತಿರಲಿಲ್ಲ. ಮುಖ್ಯಮಂತ್ರಿಯಾಗುವುದಂತೂ ಖಂಡಿತ ಆಗುತ್ತಿರಲಿಲ್ಲ ಎಂದು ಚೌಧರಿ ಹೇಳಿದರು. ಯಾರು ಅಧಿಕಾರದಲ್ಲಿರಬೇಕು ಎಂಬುದನ್ನು ನಿರ್ಧರಿಸುವುದು ಜನರ ಆದೇಶ ಎಂದು ತಿಳಿಸಿದರು.