ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vikram Sood: ಪಾಕಿಸ್ತಾನದ ಜತೆ ರಾಜಿ, ಸಂಧಾನ, ಶಾಂತಿ ಅಸಾಧ್ಯ: RAW ಮಾಜಿ ಮುಖ್ಯಸ್ಥ ವಿಕ್ರಮ್‌ ಸೂದ್‌

Mangaluru Lit Fest: ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್‌ ಫೆಸ್ಟ್‌ 8ನೇ ಆವೃತ್ತಿಯ ‘ಗ್ರೇಟ್‌ ಪವರ್‌ ಗೇಮ್ಸ್‌ʼ ಎಂಬ ಗೋಷ್ಠಿಯಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾʼ ದ ಮಾಜಿ ಮುಖ್ಯಸ್ಥ ವಿಕ್ರಮ್‌ ಸೂದ್‌ ಮಾತನಾಡಿದ್ದಾರೆ.

ಪಾಕಿಸ್ತಾನದ ಜತೆ ರಾಜಿ, ಸಂಧಾನ, ಶಾಂತಿ ಅಸಾಧ್ಯ: ವಿಕ್ರಮ್‌ ಸೂದ್‌

ಭಾರತದ ಗುಪ್ತಚರ ಸಂಸ್ಥೆ ‘ರಾʼ ದ ಮಾಜಿ ಮುಖ್ಯಸ್ಥ ವಿಕ್ರಮ್‌ ಸೂದ್‌ ಮಾತನಾಡಿದರು. -

Profile
Siddalinga Swamy Jan 10, 2026 8:11 PM

ಮಂಗಳೂರು, ಜ.10: ಪಾಕಿಸ್ತಾನ, ಚೀನಾ ಹಾಗೂ ಭಾರತ ನಡುವೆ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತಿರುವಂಥದ್ದು. ಪಾಕಿಸ್ತಾನದ ಜತೆ ರಾಜಿ, ಸಂಧಾನ ಮಾಡಿ ಪ್ರಯೋಜನವಿಲ್ಲ. ಅವರ ಜತೆ ಶಾಂತಿ ಅಸಾಧ್ಯ ಎಂದು ಭಾರತದ ಗುಪ್ತಚರ ಸಂಸ್ಥೆ ‘ರಾʼ ಮಾಜಿ ಮುಖ್ಯಸ್ಥ ವಿಕ್ರಮ್‌ ಸೂದ್‌ (Vikram Sood) ಹೇಳಿದರು. ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್‌ ಫೆಸ್ಟ್‌ (Mangaluru Lit Fest) 8ನೇ ಆವೃತ್ತಿಯ ‘ಗ್ರೇಟ್‌ ಪವರ್‌ ಗೇಮ್ಸ್‌ʼʼ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಯಾವತ್ತೂ ಬದಲಾಗಲ್ಲ ಎಂದರು.

ಭಾರತ ಮತ್ತು ನೆರೆ ದೇಶಗಳ ಜತೆಗಿನ ಸ್ನೇಹದ ಕುರಿತು ಮಾತನಾಡಿದ ಅವರು, ‘ಈ ಹಿಂದೆ ಶ್ರೀಲಂಕಾ ಅಥವಾ ಬಾಂಗ್ಲಾದೇಶ ಕಷ್ಟದಲ್ಲಿದೆ ಎಂದಾಗ ಭಾರತ ಅವರ ಸಹಾಯಕ್ಕೆ ನಿಂತಿತ್ತು. ಆದರೆ, ಭಾರತಕ್ಕೆ ಸಂಕಷ್ಟ ಬಂದಾಗ ಯಾರೂ ಜತೆ ನಿಲ್ಲುವುದಿಲ್ಲʼ ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಅಮೆರಿಕ ಹಾಗೂ ವೆನೆಜುವೆಲಾ ಯುದ್ಧದ ಬಗ್ಗೆ ಮಾತನಾಡಿ, ‘ಮೊದಲಿಗೆ ಅಮೆರಿಕ ಯುಕ್ರೇನ್‌ ವಿಷಯದಲ್ಲಿ ತಲೆ ಹಾಕಿತು, ಬಳಿಕ ಇಸ್ರೇಲ್‌ ಈಗ ವೆನೆಜುವೆಲಾ. ಪ್ರಪಂಚಾದ್ಯಂತ ಸಮಸ್ಯೆ ಮಾಡುವ ಉದ್ದೇಶ ಹೊಂದಿರುವ ದೇಶವದು. ಈ ಸಮಸ್ಯೆಗೆ ಯಾರು ಕಾರಣ ಎಂದು ಬಹಿರಂಗವಾಗಿ ಗೊತ್ತಾಗದಿರಬಹುದು ಆದರೆ, ಎಲ್ಲವನ್ನೂ ಸರಿ ಮಾಡುವ ಅಧ್ಯಕ್ಷ ನಮ್ಮ ದೇಶದಲ್ಲಿದ್ದಾರೆ ಎಂಬ ಮನೋಭಾವ ಹೊಂದಿರುವ ದೇಶವದು. ಸ್ವತಃ ನಾನೇ ಕಾನೂನು ಎಂಬ ಮನೋಭಾವ ಹೊಂದಿರುವ ಅಧ್ಯಕ್ಷ ಅಲ್ಲಿದ್ದಾರೆʼ ಎಂದರು.

ಉತ್ತಮ ಆಡಳಿತಕ್ಕೆ ಶಕ್ತಿ, ಸೇನೆ ಹಾಗೂ ಅಧಿಕಾರ ಬಹಳ ಮುಖ್ಯ. ದೇಶ ಪ್ರಬಲಗೊಳ್ಳಲು ಈ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಈ ಹಿಂದೆ ಚೀನಾ ಉತ್ಪನ್ನಗಳನ್ನು ಸಿದ್ಧಪಡಿಸಲು ಸ್ವತಂತ್ರ ಆಗಿದ್ದಕ್ಕೆ ಅಮೆರಿಕಕ್ಕೆ ಆರ್ಥಿಕ ಹೊಡೆತ ನೀಡಲು ಸಾಧ್ಯವಾಯಿತುʼ ಎಂದರು. ಹಾಗೆಯೇ ಅಮೆರಿಕಾದ ಬಗ್ಗೆ ಮಾತನಾಡಿ, ʼಅಮೆರಿಕಾದ ಬಳಿ ಬೃಹತ್‌ ಸೇನೆ, ಪರಮಾಣು ಶಕ್ತಿ ಎಲ್ಲವೂ ಇದ್ದರೂ ಯಾವ ಯುದ್ಧವನ್ನು ನೇರವಾಗಿ ಗೆದ್ದಿಲ್ಲ. 1945ರಲ್ಲಿ ನಾಗಸಾಕಿ, ಹಿರೊಶಿಮಾ ಮೇಲೆ ದಾಳಿ ಮಾಡಿದ ಘಟನೆಯಿಂದಲೇ ಅವರ ಪತನ ಶುರುವಾಗಿದೆʼ ಎಂದು ಹೇಳಿದರು.

ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು, ಅಧ್ಯಾಪಕರು ಕಾರಣ: ಶತಾವಧಾನಿ ಆರ್. ಗಣೇಶ್

ಅಮೆರಿಕಾ ಮತ್ತು ಚೀನಾ ಜತೆ ಯಾವ ರೀತಿಯ ತಂತ್ರಗಳನ್ನು ಮಾಡಬಹುದು ಎಂಬ ವಿಷಯದ ಕುರಿತು ಮಾತನಾಡಿದ ವಿಕ್ರಮ್‌, ‘ಅಮೆರಿಕ ಹಾಗೂ ಚೀನಾ ಯಾವತ್ತೂ ಭಾರತದ ಸಹಾಯಕ್ಕೆ ನಿಂತಿಲ್ಲ. ಎರಡೂ ದೇಶಗಳ ಜತೆ ತಾರ್ಕಿಕವಾಗಿ ವ್ಯವಹರಿಸುವ ದಾರಿಯನ್ನು ಭಾರತ ಆಯ್ಕೆ ಮಾಡಿಕೊಳ್ಳಬೇಕು. ಬಲಿಷ್ಠ ರಾಷ್ಟ್ರವಾಗಲು ಬಲಿಷ್ಠ ಸರ್ಕಾರದ ಅಗತ್ಯ ಮುಖ್ಯ. ಹೇಗೆ ಅಮೆರಿಕಾದ ಸರ್ಕಾರಿ ಪ್ರತಿನಿಧಿ ಭಾರತಕ್ಕೆ ಬಂದು ಸಹಾಯ ಕೇಳುವುದಿಲ್ಲವೋ ಅದೇ ರೀತಿ ಭಾರತ ಕೂಡ ಯಾರನ್ನೂ ಸಹಾಯ ಕೇಳದಿರುವಂತೆ ಆಗಬೇಕು. ಇತ್ತೀಚೆಗೆ ಅಂತಹ ಬೆಳವಣಿಗೆ ಕಾಣುತ್ತಿವೆ. ಬಾಲಾಕೊಟ್‌, ಉರಿ ಕೌಂಟರ್‌ ಅಟ್ಯಾಕ್‌ ಹಾಗೂ ಆಪರೇಷನ್‌ ಸಿಂದೂರ್‌ ಕೆಲವು ಉದಾಹರಣೆಗಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನಿಲುವುನ್ನು ಇನ್ನೂ ಗಟ್ಟಿಯಾಗಿ ಸ್ಥಾಪಿಸಬೇಕು. ಈಗ ಅಲ್ಲದಿದ್ದರೆ ಇನ್ನೆಂದೂ ಮೇಲೆ ಹೋಗಲು ಸಾಧ್ಯವಿಲ್ಲʼ ಎಂದು ಹೇಳಿದರು.‌ ಡಾ. ಶ್ರೀಪರ್ಣಾ ಪಾಠಕ್‌ ಈ ಸಂವಾದ ನಡೆಸಿಕೊಟ್ಟರು.