ಪ್ರಧಾನಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆಗೆ ಸಂಕಷ್ಟ; ಚುನಾವಣಾ ಆಯೋಗದಿಂದ ನೊಟೀಸ್
Mallikarjun Kharge: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣೆ ಆಯೋಗ ಶೋಕಾಸ್ ನೊಟೀಸ್ ನೀಡಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ. ಈ ಮೂಲಕ ತಮಿಳುನಾಡು ಚುನಾವಣೆಯ ಸಮಯದಲ್ಲಿ ಕೈ ಪಡೆಗೆ ಸಂಕಷ್ಟ ಎದುರಾಗಿದೆ.
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) -
ದೆಹಲಿ, ಏ. 22: ತಮಿಳುನಾಡು ಚುನಾವಣಾ (Tamil Nadu Assembly Election 2026) ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭಯೋತ್ಪಾದಕ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಚುನಾವಣೆ ಆಯೋಗ (Election Commission) ಶೋಕಾಸ್ ನೊಟೀಸ್ ನೀಡಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಗುರುವಾರ (ಏಪ್ರಿಲ್ 23) ನಡೆಯಲ್ಲಿದ್ದು, ಮುನ್ನಾದಿನ ಕಾಂಗ್ರೆಸ್‌ಗೆ ಆಘಾತ ಎದುರಾಗಿದೆ.
ನಿರ್ಮಲಾ ಸೀತಾರಾಮನ್ ಸೇರಿ ಮೂವರು ಕೇಂದ್ರ ಸಚಿವರನ್ನು ಒಳಗೊಂಡ ಬಿಜೆಪಿ ನಿಯೋಗವು ಬುಧವಾರ (ಏಪ್ರಿಲ್ 22) ಬೆಳಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಿ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. 24 ಗಂಟೆಗಳ ಒಳಗೆ ತಮ್ಮ ನಿಲುವು ವಿವರಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಲಾಗಿದೆ.
ಬಿಜೆಪಿ ನಾಯಕ ಸುದ್ದಿಗೋಷ್ಠಿ:
A high-level BJP delegation met the @ECISVEEP today with deep sorrow and anger.
— Kiren Rijiju (@KirenRijiju) April 22, 2026
For @kharge ji to call Hon’ble PM @narendramodi ji a “terrorist” is not just a remark, it is a grave insult to the entire nation.
Such disgraceful conduct cannot be normalised. We have urged the… pic.twitter.com/oBkzPkaWf0
"ಬಿಜೆಪಿಯ ಉನ್ನತ ಮಟ್ಟದ ನಿಯೋಗ ಬುಧವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರನ್ನು ಅವಮಾನಿಸಿದ ಕಾರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆದಿರುವುದು ಇಡೀ ದೇಶಕ್ಕೆ ಮಾಡಿದ ಅವಮಾನ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಏಪ್ರಿಲ್ 21ರಂದು ಚೆನ್ನೈಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ʼʼಎಐಎಡಿಎಂಕೆಯು ಭಯೋತ್ಪಾದಕ ಪ್ರಧಾನಿ ಮೋದಿ ಅವರೊಂದಿಗೆ ಕೈ ಜೋಡಿಸಿರುವುದು ವಿಷಾದನೀಯʼʼ ಎಂದಿದ್ದರು. ʼʼತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯ ಔಚಿತ್ಯವೇನು? ಸಮಾನತೆ ಮತ್ತು ನ್ಯಾಯದ ಮೇಲೆ ನಂಬಿಕೆ ಇರದ ಪಕ್ಷದ ಎಐಎಡಿಎಂಕೆ ನಂಬಿಕೆ ಇಟ್ಟಿರುವುದೇ ಅಚ್ಚರಿʼʼ ಎಂದು ತಿಳಿಸಿದ್ದರು.
ಮುಂದುವರಿದು, ʼʼನಮಗೆ ಹೆಚ್ಚು ಸಂಸದರನ್ನು ನೀಡಿದ ತಮಿಳುನಾಡಿನ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಅದರಿಂದಾಗಿಯೇ ನಾವು ಮೊನ್ನೆ ಸಂಸತ್ತಿನಲ್ಲಿ ಹೋರಾಡಿ ವಿಧೇಯಕವನ್ನು ಸೋಲಿಸಲು ಸಾಧ್ಯವಾಯಿತು. ಇದು ಪೆರಿಯಾರ್, ಅಣ್ಣಾ ದೊರೈ, ಕಾಮರಾಜ್, ಕರುಣಾನಿಧಿ ಮುಂತಾದವರ ವೈಜ್ಞಾನಿಕ ಚಿಂತನೆ ಮತ್ತು ಆದರ್ಶಗಳ ನಾಡುʼʼ ಎಂದಿದ್ದರು.
ಸಮರ್ಥಿಸಿಕೊಂಡಿದ್ದ ಖರ್ಗೆ
ಅದಾದ ಬಳಿಕ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದನ್ನು ಖರ್ಗೆ ಸಮರ್ಥಿಸಿಕೊಂಡಿದ್ದರು. ʼʼಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಂಡು ಪ್ರಧಾನಿ ಮೋದಿ ರಾಜಕೀಯ ವಿರೋಧಿಗಳು ಮತ್ತು ಜನಸಾಮಾನ್ಯರನ್ನು ಭಯಭೀತಿಗೊಳಿಸುತ್ತಿದ್ದಾರೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಅವರು ಭಯೋತ್ಪಾದಕ ಎಂದು ನಾನು ಎಂದಿಗೂ ಹೇಳಿಲ್ಲʼʼ ಎಂದು ಸಮರ್ಥನೆ ನೀಡಿದ್ದರು.
ಪ್ರಧಾನಿ ಮೋದಿ ವಿರುದ್ಧ ಲಘು ಹೇಳಿಕೆ; ಖರ್ಗೆ ಕ್ಷಮೆಯಾಚಿಸಲಿ ಎಂದು ಜೋಶಿ ಆಗ್ರಹ
ದೇಶಾದ್ಯಂತ ಆಕ್ರೋಶ
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಈಗಾಗಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತರು, ನಾಯಕರು ಪ್ರತಿಭಟನೆ ನಡೆಸಿ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ಬೀದರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕೂಡ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. "ಟೆರರಿಸ್ಟ್ ಮತ್ತು ಟೆರರಿಸ್ಟ್ಗಳಿಗೇ ಟೆರರ್ ಆಗಿರುವವರ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗುತ್ತಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.