ನಾಸಿಕ್ ಟಿಸಿಎಸ್ ಪ್ರಕರಣ: ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್; ಏಪ್ರಿಲ್ 27ಕ್ಕೆ ವಿಚಾರಣೆ ಮುಂದೂಡಿಕೆ
ನಾಸಿಕ್ ಟಿಸಿಎಸ್ ಬಿಪಿಒ ಘಟಕದಲ್ಲಿ ನಡೆದ ಕಿರುಕುಳ ಮತ್ತು ಮತಾಂತರ ಆರೋಪದ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿದಾ ಖಾನ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನಿರಾಕರಿಸಿದೆ. ಅರ್ಜಿಯ ಬಗ್ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ದೂರುದಾರರ ಪರ ವಕೀಲರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ನಿಗದಿಪಡಿಸಲಾಗಿದೆ.
ಆರೋಪಿ ನಿದಾ ಖಾನ್ ಮತ್ತು ಟಿಸಿಎಸ್ ಕಚೇರಿ (ಸಂಗ್ರಹ ಚಿತ್ರ) -
ಮುಂಬೈ, ಏ. 20: ಮಹಾರಾಷ್ಟ್ರದ ನಾಸಿಕ್‌ನ (Nashik) ಟಿಸಿಎಸ್ (TCS) ಬಿಪಿಒ (BPO) ಶಾಖೆಯಲ್ಲಿ ನಡೆದಿದೆ ಎನ್ನಲಾದ ಕಿರುಕುಳ ಮತ್ತು ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ (Nida Khan) ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ. ನಿದಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯ ಬಗ್ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ದೂರುದಾರರ ಪರ ವಕೀಲರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ನಿಗದಿಪಡಿಸಲಾಗಿದೆ.
ನಿದಾ ಖಾನ್ ಪರ ವಕೀಲ ರಾಹುಲ್ ಕಸ್ಲಿವಾಲ್, ತಮ್ಮ ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಗರ್ಭಿಣಿಯಾಗಿದ್ದಾರೆ ಎಂಬ ವೈದ್ಯಕೀಯ ಕಾರಣಗಳನ್ನು ನೀಡಿ ಮಧ್ಯಂತರ ರಕ್ಷಣೆ ಕೋರಿದರು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, ತನಿಖೆಗೆ ಪೂರಕ ಕೆಲವು ಫೋಟೊ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ಬಗ್ಗೆಯೂ ನ್ಯಾಯಾಲಯದಲ್ಲಿ ಚರ್ಚೆ ನಡೆಯಿತು.
'ಮಾಸ್ಟರ್ ಮೈಂಡ್' ಎಂಬ ಆರೋಪಕ್ಕೆ ವಕೀಲರ ಆಕ್ಷೇಪ
ನಿದಾ ಖಾನ್ ಅವರನ್ನು ಈ ಇಡೀ ಜಾಲದ 'ಮಾಸ್ಟರ್ ಮೈಂಡ್' ಎಂದು ಪೊಲೀಸರು ಕರೆಯುತ್ತಿರುವುದನ್ನು ಅವರ ಪರ ವಕೀಲ ಬಾಬಾ ಸೈಯದ್ ಖಂಡಿಸಿದ್ದಾರೆ. "ಎಫ್‌ಐಆರ್‌ನಲ್ಲಿ ಬಲವಂತದ ಮತಾಂತರದ ಬಗ್ಗೆ ಉಲ್ಲೇಖವಿಲ್ಲ, ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವಷ್ಟೇ ಇದೆ. ನಿದಾ ಎಚ್‌ಆರ್ (HR) ವಿಭಾಗದ ಮುಖ್ಯಸ್ಥರಲ್ಲ, ಅವರು ಕೇವಲ ಒಬ್ಬ ಪ್ರೊಸೆಸ್ ಅಸೋಸಿಯೇಟ್ ಆಗಿದ್ದರು. 'ಜಿಹಾದ್' ಎಂಬುದು ರಾಜಕೀಯ ಪದವಾಗಿದ್ದು, ನ್ಯಾಯಾಲಯದಲ್ಲಿ ಅದಕ್ಕೆ ಬೆಲೆಯಿಲ್ಲ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಗೆದಷ್ಟು ಬಯಲಾಗುತ್ತಿದೆ TCS ಮತಾಂತರ ದಂಧೆ: ಲೈಂಗಿಕ ಕಿರುಕುಳ, ಮತಾಂತರದ ಬೃಹತ್ ಜಾಲ ಬಯಲು
ಕಂಪನಿ ಮತ್ತು ಕುಟುಂಬದ ಹೇಳಿಕೆ
ಆರಂಭದಲ್ಲಿ ನಿದಾ ಖಾನ್ ಎಚ್‌ಆರ್ ವ್ಯವಸ್ಥಾಪಕಿ ಎಂದು ವರದಿಯಾಗಿತ್ತು. ಆದರೆ ಕಂಪನಿಯು ಈ ಮಾಹಿತಿಯನ್ನು ಸ್ಪಷ್ಟಪಡಿಸಿ ಆಕೆ ಸಾಮಾನ್ಯ ಉದ್ಯೋಗಿ ಎಂದು ತಿಳಿಸಿದೆ. ಇತ್ತ ನಿದಾ ಖಾನ್ ತಂದೆ, ಮಗಳು ದಿನವೂ ಕೆಲಸಕ್ಕೆ ಹೋಗಿ ಬರುವ ಒಬ್ಬ ಸಾಮಾನ್ಯ ವೃತ್ತಿಪರಳು, ಆಕೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ನಿದಾ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದರೆ, ಅವರ ಕುಟುಂಬವು ಭಯದಿಂದಾಗಿ ದೂರವಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.
ಏನಿದು ಪ್ರಕರಣ?
ಮಾರ್ಚ್ 26 ಮತ್ತು ಏಪ್ರಿಲ್ 3ರ ನಡುವೆ ನಾಸಿಕದ ಟಿಸಿಎಸ್ ಘಟಕದ ಮಹಿಳಾ ಉದ್ಯೋಗಿಗಳು ನೀಡಿದ ದೂರುಗಳ ಆಧಾರದ ಮೇಲೆ ಸುಮಾರು ಒಂಬತ್ತು ಎಫ್‌ಐಆರ್‌ಗಳು ದಾಖಲಾಗಿವೆ. ಕೆಲಸದ ಸ್ಥಳದಲ್ಲಿ ಕಿರುಕುಳ ಮತ್ತು ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಂಟು ಮಂದಿ ಉದ್ಯೋಗಿಗಳನ್ನು ಕಂಪನಿ ಅಮಾನತುಗೊಳಿಸಿದೆ. ಈ ಪ್ರಕರಣವು ಈಗ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನ ಸೆಳೆದಿದ್ದು, ತನಿಖೆ ತೀವ್ರಗೊಂಡಿದೆ.