ಹಿಂದೂ ದೇವಸ್ಥಾನಗಳಲ್ಲಿರುವ ಟನ್‌ಗಟ್ಟಲೆ ಚಿನ್ನ ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು: ವಿವಾದದ ಕಿಡಿ ಹೊತ್ತಿಸಿದ ಫಾದರ್ ಪೌಲ್ ತೆಲಕ್ಕಾಟ್
Paul Thelakkatt: ʼ'ದೇಶದ ಹಿಂದೂ ದೇವಾಲಯಗಳಲ್ಲಿ ಟನ್‌ಗಟ್ಟಲೆ ಚಿನ್ನ ಇದೆ. ಅದನ್ನು ತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕುʼʼ ಎಂದು ಕೊಚ್ಚಿಯ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರು ಫಾದರ್ ಪೌಲ್ ತೆಲಕ್ಕಾಟ್ ಹೇಳಿದ್ದು ವಿವಾದದ ಬಿರಿಗಾಳಿ ಎಬ್ಬಿಸಿದೆ.
ಫಾದರ್ ಪೌಲ್ ತೆಲಕ್ಕಾಟ್ (ಸಂಗ್ರಹ ಚಿತ್ರ) -
ತಿರುವನಂತಪುರಂ, ಏ. 20: ''ದೇಶದ ಹಿಂದೂ ದೇವಾಲಯಗಳಲ್ಲಿ ಟನ್‌ಗಟ್ಟಲೆ ಚಿನ್ನ ಇದೆ. ಅದನ್ನು ತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕುʼʼ ಎಂದು ಕೊಚ್ಚಿಯ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರು ಫಾದರ್ ಪೌಲ್ ತೆಲಕ್ಕಾಟ್ (Fr. Paul Thelakkatt) ಹೇಳಿದ್ದು, ಭಾರಿ ಸಂಚಲನ ಮೂಡಿಸಿದೆ. ಕೇಂದ್ರ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (Foreign Contribution Regulation Act) ತಿದ್ದುಪಡಿ ತಂದಿರುವುದನ್ನು ವಿರೋಧಿಸುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಸದ್ಯ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಚರ್ಚೆ ಹುಟ್ಟು ಹಾಕಿದೆ. ಹಿಂದೂ ದೇವಾಲಯಗಳ ಮೇಲೆ ಅನ್ಯ ಧರ್ಮೀಯರು ಕಣ್ಣಿಟ್ಟಿದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ʼಮಾತೃಭೂಮಿʼ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫಾದರ್ ಪೌಲ್ ತೆಲಕ್ಕಾಟ್ ನಾಲಗೆ ಹರಿಯಬಿಟ್ಟಿದ್ದಾರೆ. ʼʼಚರ್ಚ್‌ಗಳಿಗೆ ಬರುವ ವಿದೇಶಿ ದೇಣಿಗೆಯನ್ನು ನಾವು ಜನಸೇವೆಗೆ ಬಳಸುತ್ತಿದ್ದೇವೆ ಹೊರತು ಸಂಗ್ರಹಿಸಿಡುತ್ತಿಲ್ಲ. ಅದೇ ರೀತಿ ಹಿಂದೂ ದೇಗುಲಗಳಲ್ಲಿರುವ ಟನ್‌ಗಟ್ಟಲೆ ಚಿನ್ನವನ್ನು ಸಮಾಜದ ಒಳಿತಿಗಾಗಿ, ಜನರಿಗಾಗಿ ಬಳಸಬೇಕುʼʼ ಎಂದು ಆಗ್ರಹಿಸಿದ್ದಾರೆ.
ಧರ್ಮಗುರು ಫಾದರ್ ಪೌಲ್ ತೆಲಕ್ಕಾಟ್ ಅವರ ವಿವಾದಾತ್ಮಕ ಹೇಳಿಕೆ:
ಫಾದರ್ ಪೌಲ್ ತೆಲಕ್ಕಾಟ್ ಹೇಳಿದ್ದೇನು?
ʼʼವಿದೇಶ ಖಾತೆಯನ್ನು ನಿರ್ವಹಿಸುವ ಎನ್‌ಜಿಒಗಳು ಯಾವ ದೇಶದ್ರೋಹ ಚಟುವಟಿಕೆ ನಡೆಸುತ್ತಿವೆ? ಸರ್ಕಾರದ ಮೂಲಕವೇ ದೇಣಿಗೆ ಬರುತ್ತದೆ. ಇದನ್ನು ಶಾಲೆ, ಕಾಲೇಜು, ಆಸ್ಪತ್ರೆ, ಅನಾಥಾಶ್ರಮಗಳಿಗೆ ಬಳಸಲಾಗುತ್ತಿದೆ. ಇದನ್ನೆಲ್ಲ ನಿಯಂತ್ರಿಸುವುದು ಭಾರತೀಯರೇ. ಈ ರೀತಿಯ ಸೇವೆಯನ್ನು ದೇಶದ್ರೋಹವಾಗಿ ಪರಿಗಣಿಸಲಾಗುತ್ತದೆ. ಈ ರೀತಿಯ ಸೇವೆಗಳನ್ನು ಭಾರತದಲ್ಲಿ ಕ್ರಿಶ್ಚಿಯನ್ನರು ಮಾಡಬಾರದು ಎಂಬ ಉದ್ದೇಶ ಕೇಂದ್ರ ಸರ್ಕಾರದ ಹಿಂದಿದೆʼʼ ಎಂದು ಹೇಳಿದ್ದಾರೆ.
ಜಿತಿನ್ ಜೇಕಬ್ ಅವರ ಫೇಸ್‌ಬುಕ್ ಪೋಸ್ಟ್:
ವ್ಯಾಪಕ ವಿರೋಧ
ಸದ್ಯ ಫಾದರ್ ಪೌಲ್ ತೆಲಕ್ಕಾಟ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ, ಹಿಂದೂಪರ ಸಂಘಟನೆಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳದ ಹಿಂದೂ ಐಕ್ಯವೇದಿಯ ಅಧ್ಯಕ್ಷ ಆರ್.ವಿ. ಬಾಬು ಈ ಬಗ್ಗೆ ಮಾತನಾಡಿ, ʼʼದೇಗುಲದ ಸಂಪತ್ತು ಭಕ್ತರು ಭಕ್ತಿಯಿಂದ ಕೊಡುಗೆ ನೀಡಿರುವಂತಹದ್ದು. ಅಲ್ಲದೆ ಇದನ್ನು ಬಡವರ ಫೋಟೊ ತೋರಿಸಿ ವಿದೇಶದಿಂದ ತಂದಿಲ್ಲʼʼ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇರಳದ ಯುವ ನಾಯಕ, ಜಿತಿನ್ ಜೇಕಬ್ ಕೂಡ ಫಾದರ್ ಹೇಳಿಕೆಯನ್ನು ಖಂಡಿಸಿದ್ದಾರೆ. ʼʼದೇವಸ್ಥಾನಗಳಲ್ಲಿರುವುದು ಕದ್ದು ತಂದಿರುವ, ಯುದ್ಧ ಮೂಲಕ ದೋಚಿರುವ ಸಂಪತ್ತಲ್ಲ. ಅದು ಇಲ್ಲಿನ ಭಕ್ತರು ನೀಡಿದುವ ಕೊಡುಗೆ. ಈ ಸಂಪತ್ತು ನೋಡಿಯೇ ವಿದೇಶಿಗರು ದೇಶದ ಮೇಲೆ ದಂಡೆತ್ತಿ ಬಂದಿದ್ದರು. ಕ್ರಿಶ್ಚಿಯನ್ನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ, ವ್ಯವಸ್ಥಿತವಾಗಿ ಹಿಂದೂ ಸಂಘಟನೆಗಳು ಶಿಕ್ಷಣ ಕೇಂದ್ರ, ಆಸ್ಪತ್ರೆಗಳನ್ನು ನಡೆಸುತ್ತಿವೆʼʼ ಎಂದು ತಿರುಗೇಟು ನೀಡಿದ್ದಾರೆ.
ವಿದೇಶಿ ದೇಣಿಗೆಯ ಮೇಲೂ ನಿಯಂತ್ರಣ ಹೇರುವುದು ಎಷ್ಟು ಸರಿ ?
ಏನಿದು ಎಫ್‌ಸಿಆರ್‌ಎ ಕಾಯ್ದೆ?
ಎಫ್‌ಸಿಆರ್‌ಎ ಕಾಯ್ದೆಯು ಮೂಲತಃ ವಿದೇಶಗಳಿಂದ ಭಾರತಕ್ಕೆ ಬರುವ ಧನಸಹಾಯವನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ. ದೇಶದ ಆಂತರಿಕ ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ವಿದೇಶಿ ಹಣದ ಹರಿವಿನ ಮೇಲೆ ಕಣ್ಣಿಡುವುದು ಅಗತ್ಯ ಎಂಬುದು ಸರ್ಕಾರದ ವಾದ. ರಾಷ್ಟ್ರೀಯ ಹಿತಾಸಕ್ತಿ, ಸಾರ್ವಜನಿಕ ಸುವ್ಯವಸ್ಥೆ ಅಥವಾ ರಾಷ್ಟ್ರೀಯ ಭದ್ರತೆಗೆ ಅಡ್ಡಿಯಾಗದಿರುವುದನ್ನು ಖಾತ್ರಿಪಡಿಸಿಕೊಳ್ಳಲು, ವಿದೇಶಿ ದೇಣಿಗೆಯನ್ನು ಎನ್‌ಜಿಒಗಳು ಸ್ವೀಕರಿಸುವುದನ್ನು ಎಫ್‌ಸಿಆರ್‌ಎ ನಿಯಂತ್ರಿಸಲಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.