Operation Sindoor: ಪಾಕಿಸ್ತಾನ ನಮ್ಮ ರಫೇಲ್ ಜೆಟ್ ಹೊಡೆದುರುಳಿಸಿದ್ಯ? ಏರ್ ಮಾರ್ಷಲ್ ಕೊಟ್ರು ಸ್ಪಷ್ಟನೆ
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ಮೇಲೆ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಪಾಕಿಸ್ತಾನ ಉಗ್ರರ ವಿರುದ್ಧ ಭಾರತ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ. ಮೇ 7ರಂದು ಆಪರೇಷನ್‌ನ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಹೆಡೆಮುರಿ ಕಟ್ಟಿದೆ. ಈ ಬಗ್ಗೆ ಭಾರತೀಯ ಸೇನೆ ಅದಿಕೃತ ಹೇಳಿಕೆ ನೀಡಿದೆ.

ಏರ್ ಮಾರ್ಷಲ್ ಎ.ಕೆ. ಭಾರ್ತಿ.

ಹೊಸದಿಲ್ಲಿ: ಪಾಕಿಸ್ತಾನದ ವಾಯುನೆಲೆಗಳು ಮತ್ತು ಇತರ ಗುರಿಗಳ ಮೇಲೆ ದಾಳಿ ನಡೆಸಿದ ನಂತರ ಭಾರತದ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ (Air Marshal AK Bharti) ತಿಳಿಸಿದರು. ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 2 ಭಾರತೀಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯ ಬಗ್ಗೆ ಕೇಳಿದಾಗ, ಅವರು ಸ್ಪಷ್ಟನೆ ನೀಡಿ, ʼʼಪಾಕಿಸ್ತಾನದ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತ. ಯುದ್ದದ ಸಂದರ್ಭದಲ್ಲಿ ಕೆಲವು ನಷ್ಟವಾಗೋದು ಸಾಮಾನ್ಯ. ಆದರೆ ನಮ್ಮ ಎಲ್ಲ ರಫೇಲ್ ಜೆಟ್‌ಗಳು ಸುರಕ್ಷಿತವಾಗಿವೆ. ನಾವು ನಿಗದಿತ ಗುರಿಗಳನ್ನು ಸಾಧಿಸಿದ್ದೇವೆ ಮತ್ತು ನಮ್ಮ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆʼʼ ಎಂದು ಹೇಳಿದರು.
"ನಾವು ಪಾಕಿಸ್ತಾನದ ಕೆಲವು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ. ಜತೆಗೆ ಯಾವುದೇ ಪಾಕ್ ವಿಮಾನಗಳು ನಮ್ಮ ಗಡಿಯನ್ನು ದಾಟದಂತೆ ಯಶಸ್ವಿಯಾಗಿ ತಡೆದಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ನಮ್ಮ ದಾಳಿಯಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟವಾಗಿರುವುದಂತೂ ಸತ್ಯ. ಈಗ ಯುದ್ಧದ ಸ್ಥಿತಿಯಲ್ಲಿರುವ ಕಾರಣ ನಿಖರ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲʼʼ ಎಂದು ವಿವರಿಸಿದರು.
ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದ್ದೇನು? ಇಲ್ಲಿದೆ ವಿಡಿಯೊ
#WATCH | Delhi: #OperationSindoor | Air Marshal AK Bharti says, "Whatever methods and whatever means we have chosen, it had the desired effects on the enemy targets. How many casualties? How many injuries? Our aim was not to inflict casualties, but in case there have been, it is… pic.twitter.com/uK9OBYuQp1
— ANI (@ANI) May 11, 2025
ಶುಕ್ರವಾರ (ಮೇ 9) ಪಾಕಿಸ್ತಾನವು, ಚೀನಾ ನಿರ್ಮಿತ ಫೈಟರ್ಸ್ ಭಾರತದ 2 ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ತಿಳಿಸಿತ್ತು. ಆ ವೇಳೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಈ ವದಂತಿಯನ್ನು ಸಾಕ್ಷಿ ಸಮೇತ ತಳ್ಳಿ ಹಾಕಿದೆ.
ʼʼಆಪರೇಷನ್ ಕಾರ್ಯಾಚರಣೆಯ ಮೂಲಕ, ಭಾರತವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕರಿಗೆ ಯಾವುದೇ ಸುರಕ್ಷತೆ ಇಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ. ಭಾರತೀಯ ನೆಲದ ಮೇಲಿನ ದಾಳಿಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಆಪರೇಷನ್ ಸಿಂದೂರ್ ಮೂಲಕ ತಿಳಿಸಿದ್ದೇವೆʼʼ ಎಂದು ವಿವರಿಸಿದರು. ಈ ಸಂಘರ್ಷದ ವೇಳೆ ಭಾರತದ ಸುಮಾರು 5 ಮಂದಿ ಸೈನಿಕರು ಹುತಾತ್ಮರಾದರೆ, ಪಾಕಿಸ್ತಾನದ 40ರಷ್ಟು ಯೋಧರು ಅಸು ನೀಗಿದ್ದಾರೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್ ಮೂಲಕ ಭಾರತ ಸಾಧಿಸಿದ್ದೇನು?
ವಿಡಿಯೊ ರಿಲೀಸ್ ಮಾಡಿದ ಡಿಜಿಎಂಒ
ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಭಾರತ ಮೇ 7ರ ನಸುಕಿನ ಜಾವ ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ಉಡೀಸ್ ಮಾಡಿದೆ. 100ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ. ಈ ಕಾರ್ಯಾಚರಣೆಯನ್ನು ವಿಡಿಯೊ ಸಮೇತ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಜನರ ಮುಂದಿಟ್ಟರು.
ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಅದಾಗ್ಯೂ ಪಾಕಿಸ್ತಾನ ತನ್ನ ನರಿಬುದ್ಧಿ ಬಿಡದೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಲು ಯತ್ನಿಸಿದರೆ ಸೇನೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ರಾಜೀವ್ ಘಾಯ್ ಎಚ್ಚರಿಸಿದ್ದಾರೆ. ಇದುವರೆಗೆ ಪಾಕ್‌ನಿಂದ ಬಂದ ಎಲ್ಲ ಡ್ರೋನ್‌ಗಳನ್ನು, ಕ್ಷಿಪಣಿಗಳನ್ನು ಉಡೀಸ್ ಮಾಡಲಾಗಿದೆ. ಸುಮಾರು 700ಕ್ಕೂ ಅಧಿಕ ಪಾಕಿಸ್ತಾನದ ಡ್ರೋನ್ ಧ್ವಂಸವಾಗಿದೆ ಎಂದು ಮಾಹಿತಿ ನೀಡಿದರು.