2025 ಬಸ್ ದುರಂತಗಳ ಸರಮಾಲೆ! ಅಬ್ಬರಿಸಿ ಬೊಬ್ಬಿರಿದ ಜವರಾಯ; ದೇಶದಲ್ಲಿ ನಡೆದ ಪ್ರಮುಖ ಅಪಘಾತಗಳ ವಿವರ ಇಲ್ಲಿದೆ
ಚಿತ್ರದುರ್ಗದ ಬಳಿ ಬಸ್ ಬೆಂಕಿಗೆ ಆಹುತಿಯಾಗಿ 9ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕ್ರಿಸ್‌ಮಸ್ ದಿನವೇ ನಡೆದ ಈ ಹೃದಯ ವಿದ್ರವಾಕ ಘಟನೆಗೆ ದೇಶವೇ ಕಂಬಿನಿ ಮಿಡಿದಿದೆ. ಈ ವರ್ಷ ದೇಶದ ವಿವಿಧ ಕಡೆಗಳಲ್ಲಿ ನಾನಾ ಅವಘಡಗಳು ನಡೆದಿದ್ದು, ಆ ಕುರಿತಾದ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 25: 2025 ಕೊನೆಯ (Year End) ಹಂತಕ್ಕೆ ತಲುಪಿದ್ದು, ಈ ವರ್ಷವಿಡೀ ನಡೆದ ಹಲವು ಕಹಿ ಘಟನೆಗಳು ಸಾಕಷ್ಟು ಸಾವು ನೋವುಗಳಿಗೆ ಸಾಕ್ಷಿಯಾಗಿವೆ. ಯಾರು ಊಹಿಸಿರದಂತಹ ಭೀಕರ ಅವಘಡಗಳು ಒಂದರ ನಂತರ ಒಂದರ ಒಂದು ಸಂಭವಿಸಿದ್ದು, ದೇಶದ ಜನತೆ ತಲ್ಲಣಗೊಂಡಿದ್ದಾರೆ. ಅಹಮದಾಬಾದ್ ವಿಮಾನ ದುರಂತ, ಮಹಾಕುಂಭ ಮೇಳದಲ್ಲಿನ ಕಾಲ್ತುಳಿತ, ಅನೇಕ ಬಸ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆಗಳು ನೂರಾರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಇಷ್ಟೇ ಅಲ್ಲದೇ ವರ್ಷದ ಕೊನೆಯ ದಿನಗಳಲ್ಲೂ ಸಹ ಜವರಾಯನ ಅಟ್ಟಹಾಸ ಮುಂದುವರಿದಿದ್ದು, ಗುರುವಾರ (ಡಿಸೆಂಬರ್ 25) ಚಿತ್ರದುರ್ಗದ ಬಳಿ ಬಸ್ ಬೆಂಕಿಗೆ ಆಹುತಿಯಾಗಿ (Fire Incident) 15ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.
ಈ ವರ್ಷ ದೇಶದಲ್ಲಿ ಸಂಭವಿಸಿರುವ ಯಾರೂ ಮರೆಯಲು ಸಾಧ್ಯವಾಗದ ಕೆಲ ಬಸ್ ದುರಂತಗಳ ವಿವರ ಇಲ್ಲಿದೆ:
ಚಿತ್ರದುರ್ಗ ಅಪಘಾತ
ಚಿತ್ರದುರ್ಗ ಬಳಿಯ ಎನ್‌ಎಚ್–48ರಲ್ಲಿ ಲಾರಿಯೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 9ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬಸ್‌ನಲ್ಲಿದ್ದ 9 ಜನರು ಅದೃಷ್ಟವಶಾತ್ ಪಾರಾಗಿದ್ದು, ಗಾಯಾಳುಗಳನ್ನು ಹಿರಿಯೂರು ಮತ್ತು ಚಿತ್ರದುರ್ಗದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಖಾಸಗಿ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು. ಲಾರಿ ಬೆಂಗಳೂರು ಕಡೆಗೆ ಚಲಿಸುತ್ತಿತ್ತು.
ಸಿನಿಪ್ರಿಯರ ಮನಗೆದ್ದ ಫೇಮಸ್ ಒಟಿಟಿ ಸ್ಟಾರ್‌ಗಳಿವರು!
ಜೈಸಲ್ಮೇರ್ ಅಪಘಾತ
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅಕ್ಟೋಬರ್ 14ರಂದು ಅಪರಾಹ್ನ 3 ಗಂಟೆಗೆ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ನೋಡು ನೋಡುತ್ತಿದ್ದಂತೆ ಸುಟ್ಟು ಕರಕಲಾಯಿತು. ಈ ಘಟನೆಯಲ್ಲಿ 20 ಪ್ರಯಾಣಿಕರು ಸಜೀವ ದಹನವಾದರೆ, ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಕರ್ನೂಲ್ ಅಪಘಾತ
ಅಕ್ಟೋಬರ್ 24ರಂದು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ 20 ಮಂದಿ ಸಾವನ್ನಪ್ಪಿದರು. ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ನಂತರ ಈ ದುರಂತ ಸಂಭವಿಸಿದ್ದು, ಅನೇಕ ಪ್ರಯಾಣಿಕರು ಒಳಗೇ ಸಿಲುಕಿ ಸುಟ್ಟು ಕರಕಲಾದರು. ಶಾರ್ಟ್ ಸರ್ಕ್ಯೂಟ್‌ನಿಂದ ಬಸ್ ಬಾಗಿಲು ಜಾಮ್ ಆಗಿದ್ದರಿಂದ ಪ್ರಯಾಣಿಕರು ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.
ಜೈಪುರ ಅಪಘಾತ
ರಾಜಸ್ಥಾನದ ಜೈಪುರ ಜಿಲ್ಲೆಯ ಮನೋಹರಪುರ ಪ್ರದೇಶದಲ್ಲಿ ಅಕ್ಟೋಬರ್ 28ರಂದು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಸಾವನ್ನಪ್ಪಿದರು. ಚಲಿಸುತ್ತಿದ್ದ ಖಾಸಗಿ ಬಸ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ.
ಕಾನ್ಪುರ ಅಪಘಾತ
ನವೆಂಬರ್ 28ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ದೆಹಲಿಯಿಂದ ಬನಾರಸ್‌ಗೆ ತೆರಳುತ್ತಿದ್ದ ಪಲಕ್ ಟ್ರಾವೆಲ್ಸ್‌ನ ಲಕ್ಸುರಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು. ಈ ವೇಳೆ ಬಸ್‌ನಲ್ಲಿದ್ದ 30ರಿಂದ 40 ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಿಟಕಿ, ಬಾಗಿಲುಗಳಿಂದ ಹಾರಿ ದಿಕ್ಕಾಪಾಲಾಗಿ ಓಡಿದರು.
ತೆಂಕಾಸಿ ಅಪಘಾತ
2 ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 6 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನವೆಂಬರ್ 24ರಂದು ನಡೆಯಿತು. ತೆಂಕಾಸಿ ಜಿಲ್ಲೆಯಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು, ಎರಡು ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆಯಿತು. ದುರ್ಘಟನೆಯಲ್ಲಿ 32ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.