ಚರ್ಚ್ಗೆ ತೆರಳಿ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ; ಸಾಮರಸ್ಯದ ಸಂದೇಶ ರವಾನೆ
ದೇಶದ ವಿವಿಧ ಕಡೆಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಯುತ್ತಿದೆ ಎನ್ನುವ ಆರೋಪದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಚರ್ಚ್ಗೆ ತೆರಳಿ, ಪ್ರಾರ್ಥನೆ ಸಲ್ಲಿಸಿ, ಕ್ರಿಸ್ಮಸ್ ಆಚರಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ. ಡಿಸೆಂಬರ್ 25ರಂದು ಬೆಳಗ್ಗೆ ಮೋದಿ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ನಲ್ಲಿ ನಡೆದ ಕ್ರಿಸ್ಮಸ್ ಬೆಳಗಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ದೆಹಲಿಯಲ್ಲಿ ನಡೆದ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ -
ವಿಶೇಷ ಪ್ರಾರ್ಥನೆ
ಕ್ರಿಸ್ಮಸ್ ಆಚರಣೆಯು ಪ್ರಾರ್ಥನೆ, ಕ್ಯಾರೋಲ್, ಸ್ತೋತ್ರ ಪಠಣಗಳೊಂದಿಗೆ ನೆರವೇರಿತು. ದೆಹಲಿಯ ಬಿಷಪ್ ರೆವರೆಂಡ್ ಡಾ. ಪಾಲ್ ಸ್ವರೂಪ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ವೇಳೆ ಮೋದಿ ವಿಶೇಷ ಪ್ರಾರ್ಥನೆ ಕೈಗೊಂಡರು.
ಫೋಟೊ ಹಂಚಿಕೊಂಡ ಮೋದಿ
ಪ್ರಧಾನಿ ಮೋದಿ ಕ್ರಿಸ್ಮಸ್ ಆಚರಣೆಯಲ್ಲಿ ತಾವು ಪಾಲ್ಗೊಂಡ ಫೋಟೊ, ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೋದಿ ಹೇಳಿದ್ದೇನು?
ʼʼದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ನಲ್ಲಿ ನಡೆದ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಿದೆ. ಈ ವಿಶೇಷ ಪ್ರಾರ್ಥನೆಯು ಪ್ರೀತಿ, ಸಮಾಧಾನ ಮತ್ತು ಶಾಂತಿಯ ಸಂದೇಶ ಸಾರಿದೆ. ಕ್ರಿಸ್ಮಸ್ ನಮ್ಮ ಸಮಾಜಕ್ಕೆ ಸಾಮರಸ್ಯವನ್ನು ತುಂಬಲಿʼʼ ಎಂದು ಬರೆದುಕೊಂಡಿದ್ದಾರೆ.
ಕ್ರಿಸ್ಮಸ್ ಸಂದೇಶ
ʼʼಪ್ರತಿಯೊಬ್ಬರ ಬಾಳಿಗೂ ಕ್ರಿಸ್ಮಸ್ ಶಾಂತಿ, ಸಮಾಧಾನ ಮತ್ತು ಭರವಸೆಯನ್ನು ತರಲಿ. ಏಸುಕ್ರಿಸ್ತ ಅವರ ಜೀವನದ ಪಾಠ ಸಾಮರಸ್ಯ ತರಲಿʼʼ ಎಂದು ಪ್ರಧಾನಿ ಮೋದಿ ಸಂದೇಶದಲ್ಲಿ ಹಾರೈಸಿದ್ದಾರೆ.
ಚರ್ಚ್ನ ವೈಶಿಷ್ಟ್ಯ
ರಾಷ್ಟ್ರಪತಿ ಭವನಕ್ಕೆ ಬಹಳ ಹತ್ತಿರದಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ದೆಹಲಿಯ ಅತ್ಯಂತ ಹಳೆಯ ಚರ್ಚ್ಗಳಲ್ಲಿ ಒಂದು. ಈ ಚರ್ಚ್ನ ನಿರ್ಮಾಣ 1935ರಲ್ಲಿ ಪೂರ್ಣಗೊಂಡಿತು. ಈ ಚರ್ಚ್ನ ವಾಸ್ತುಶಿಲ್ಪವು ಯುರೋಪಿಯನ್ ಶೈಲಿಗಳಿಂದ ಪ್ರಭಾವಿತವಾಗಿದೆ.