New Aadhaar App: ಫೇಸ್ ಐಡಿ, ಕ್ಯೂಆರ್ ಕೋಡ್ ಇರುವ ಹೊಸ ಆಧಾರ್ ಆಪ್ ರಿಲೀಸ್- ಏನಿದರ ವಿಶೇಷತೆ?
New Aadhaar App: ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆಯತ್ತ ಪ್ರಮುಖ ಹೆಜ್ಜೆಯಾಗಿ, ಕೇಂದ್ರವು ಮಂಗಳವಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ, ಅದು ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ಆಗಿ ಪರಿಶೀಲಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ


ಬೆಂಗಳೂರು: ಆಧಾರ್ ಕಾರ್ಡ್ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಸರ್ಕಾರಿ ದಾಖಲೆಯಾಗಿದೆ. ಯಾವುದೇ ಅರ್ಜಿ ಸಲ್ಲಿಸಲು, ಗುರುತಿನ ಚೀಟಿಯಾಗಿ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಟಿಕೆಟ್ ಪಡೆಯಲು ಕೂಡಾ ಆಧಾರ್ ಕಾರ್ಡ್ ಅನ್ನೇ ಬಳಸಲಾಗುತ್ತದೆ. ಈ ಆಧಾರ್ ಕಾರ್ಡ್ ದುರ್ಬಳಕೆ ಆಗುವುದನ್ನು ತಡೆಯಲು ಕೇಂದ್ರ ಸರ್ಕಾರ ಹಿಂದಿನಿಂದಲೂ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಈಗ ಕೇಂದ್ರ ಸಚಿವ ಅಶ್ವಿಣಿ ವೈಷ್ಣವ್ ಅವರು ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳುಳ್ಳ ಬಹುನಿರೀಕ್ಷಿತ ಆಧಾರ ಅಪ್ಲಿಕೇಶನ್(New Aadhaar App) ಅನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಇದು ಬಳಸಲು ಅತ್ಯಂತ ಸುಲಭವಾಗಿದ್ದು, ಅಷ್ಟೇ ಸುರಕ್ಷಿತವೂ ಅಗಿದೆ. ಫೇಸ್ ಐಡಿ(Face ID, QR Code)ಯಿಂದ ಬಳಕೆದಾರರ ದೃಢೀಕರಣ ಮತ್ತು ಕೃತಕ ಬುದ್ಧಿಮತ್ತೆ (AI) ಅನ್ನು ಸಂಯೋಜನೆಯೊಂದಿಗೆ ತಯಾರಾದ ಈ ಅಪ್ಲಿಕೇಶನ್, ಭಾರತದ ಎಲ್ಲಾ ನಾಗರಿಕರ ಮೊಬೈಲ್ ಫೋನ್‌ಗಳಿಗೆ ಡಿಜಿಟಲ್ ಆಧಾರ್ ಸೇವೆಗಳನ್ನು ತಲುಪಿಸಲಿದೆ.
ಈ ಹೊಸ ಅಪ್ಲಿಕೇಶನ್‌ನ ವೈಶಿಷ್ಟ್ಯಗಳನ್ನು ತೋರಿಸುವ ವಿಡಿಯೋವನ್ನು ಸಚಿವ ವೈಷ್ಣವ್ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ “ಹೊಸ ಆಧಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಫೇಸ್ ಐಡಿ ದೃಢೀಕರಣ. ಭೌತಿಕ ಕಾರ್ಡ್ ಅಗತ್ಯವಿಲ್ಲ ಮತ್ತು ಫೋಟೋಕಾಪಿಗಳ ಜಂಜಾಟಗಳಿಲ್ಲ" ಎಂದು ಅವರು ಕ್ಯಾಪ್ಶನ್ ಬರೆದಿದ್ದಾರೆ.
ಈ ಅಪ್ಲಿಕೇಶನ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಈ ಅಪ್ಲಿಕೇಶನ್ QR ಕೋಡ್ ಆಧಾರಿತ ಶೀಘ್ರ ಪರಿಶೀಲನೆ ಮತ್ತು ಬಳಕೆದಾರರ ದೃಢೀಕರಣಕ್ಕಾಗಿ ಫೇಸ್ IDಯನ್ನು ಬಳಸುತ್ತದೆ. ಇದರಿಂದಾಗಿ ಜನರು ಆಧಾರ್ ಕಾರ್ಡ್‌ಗಳನ್ನು ಪ್ರತಿದಿನ ಹೊತ್ತೊಯ್ಯುವ ಜಂಜಾಟಗಳಿಂದ ಮುಕ್ತಿ ಪಡೆಯಬಹುದಾಗಿದೆ.
New Aadhaar App
— Ashwini Vaishnaw (@AshwiniVaishnaw) April 8, 2025
Face ID authentication via mobile app
❌ No physical card
❌ No photocopies
🧵Features👇 pic.twitter.com/xc6cr6grL0
"ಈಗ ಕೇವಲ ಒಂದು ಟ್ಯಾಪ್ ಮೂಲಕ, ಬಳಕೆದಾರರು ಅಗತ್ಯವಿರುವ ಡೇಟಾವನ್ನು ಮಾತ್ರ ಹಂಚಿಕೊಳ್ಳಬಹುದು. ಇದು ಸಂಪೂರ್ಣವಾಗಿ ಬಳಕೆದಾರರ ವೈಯಕ್ತಿಕ ಇಚ್ಛೆಯನ್ನು ಆಧರಿಸಿದ್ದು, ಎಲ್ಲಾ ಮಾಹಿತಿಯ ಮೇಲೆ ಅವರು ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ" ಎಂದು ವೈಷ್ಣವ್ ಹೇಳಿದರು. ಹೊಸ ಆಧಾರ್ ಅಪ್ಲಿಕೇಶನ್ (ಬೀಟಾದಲ್ಲಿ) ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ.
ಆಧಾರ್ ದೃಢೀಕರಣವು ಈಗ UPI ಪಾವತಿ ಮಾಡುವಷ್ಟು ಸರಳವಾಗಲಿದೆ ಎಂದು ಅವರು ಹೇಳಿದರು. ಬಳಕೆದಾರರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜತೆಗೆ ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಬಹುದು ಮತ್ತು ಅಗತ್ಯವಿರುವ ಜನರೊಂದಿಗೆ ಹಂಚಿಕೊಳ್ಳಬಹುದು. ಇದಕ್ಕೆ ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಅಥವಾ ಆಧಾರ್ ವಿವರಗಳನ್ನು ಕೇಳಿ ಮನವಿ ಕಳುಹಿಸಿದರೆ ಸಾಕು ಎಂದು ಅವರು ಹೇಳಿದರು.
ಹೊಸ ಅಪ್ಲಿಕೇಶನ್ ಏಕೆ ಮುಖ್ಯ?
ಈ ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಇನ್ನು ಮುಂದೆ ಪ್ರಯಾಣ ಮಾಡುವಾಗ, ಹೋಟೆಲ್ ಚೆಕ್-ಇನ್‌ಗಳು ಅಥವಾ ಶಾಪಿಂಗ್ ಸಮಯದಲ್ಲಿ ಭೌತಿಕ ಆಧಾರ್ ಕಾರ್ಡ್ ಅನ್ನು ಕೊಂಡೊಯ್ಯಬೇಕಾಗಿಲ್ಲ ಅಥವಾ ಅದರ ನಕಲು ಪ್ರತಿಗಳನ್ನು ಸಂಬಂಧಪಟ್ಟವರಿಗೆ ತೋರಿಸಬೇಕಿಲ್ಲ. ಆಧಾರ್ ಅಪ್ಲಿಕೇಶನ್ ಅತ್ಯಂತ ಸುರಕ್ಷಿತವಾಗಿದ್ದು, ಬಳಕೆದಾರರ ಒಪ್ಪಿಗೆಯಿದ್ದರೆ ಮಾತ್ರ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಇದು 100 ಶೇಕಡಾ ಡಿಜಿಟಲ್ ವ್ಯವಸ್ಥೆಯಾಗಿದೆ.