Pahalgam Terror Attack: ಕಾಶ್ಮೀರ ಟೈಗರ್, ಕಾಶ್ಮೀರ ಫ್ರೀಡಂ ಆರ್ಮಿ... ಇದು ಜೈಶ್ ಉಗ್ರ ಸಂಘಟನೆಯ ಹೊಸ ಮುಖ!
Jaish-e-Mohammed: ಪಹಲ್ಗಾಮ್ (Pahalgam Terror Attack) ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್‌ನ ವಿಸ್ತೃತ ಜಾಲದ ಕುರಿತು ಹೊಸಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಇವುಗಳು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದು ಮಾತ್ರವಲ್ಲ ಪದೇಪದೇ ಸಂಘಟನೆಯ ಹೆಸರನ್ನು ಬದಲಾಯಿಸಿಕೊಂಡು ಭಯೋತ್ಪಾದನೆ ಕಾರ್ಯಗಳನ್ನು ನಿರ್ವಹಿಸುತ್ತವೆ.


ಶ್ರೀನಗರ: ಪಹಲ್ಗಾಮ್ (Pahalgam) ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ (Terror attack) ಬಳಿಕ ಲಷ್ಕರ್-ಎ-ತೈಬಾ (Lashkar-e-Taiba), ಜೈಶ್-ಎ-ಮೊಹಮ್ಮದ್ (Jaish-e-Mohammed) ನ ವಿಸ್ತೃತ ಜಾಲದ ಕುರಿತು ಹೊಸಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಇವುಗಳು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದು ಮಾತ್ರವಲ್ಲ ಪದೇಪದೇ ಸಂಘಟನೆಯ ಹೆಸರನ್ನು ಬದಲಾಯಿಸಿಕೊಂಡು ಭಯೋತ್ಪಾದನೆ ಕಾರ್ಯಗಳನ್ನುನಿರ್ವಹಿಸುತ್ತವೆ. ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಪ್ರಸ್ತುತ ವಿಶಾಲವಾದ ಜಾಲವನ್ನೇ ಸ್ಥಾಪಿಸಿದೆ. ಇದು ರಹಸ್ಯ ಕಾರ್ಯಾಚರಣೆ ನಡೆಸಲು ಮರುನಾಮಕರಣ ಮಾಡಿಕೊಂಡಿದೆ ಎನ್ನುವುದು ಈಗ ಬೆಳಕಿಗೆ ಬಂದಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾರಣಾಂತಿಕ ದಾಳಿಗಳನ್ನು ಸಂಘಟಿಸುವಲ್ಲಿ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಈಗ ಕಾಶ್ಮೀರ ಟೈಗರ್ ಮತ್ತು ಕಾಶ್ಮೀರ ಫ್ರೀಡಂ ಆರ್ಮಿ ಎನ್ನುವ ಹೆಸರಿನಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ. ಜೈಶ್-ಎ-ಮೊಹಮ್ಮದ್ (ಜೆಎಂ) ತನ್ನ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಭಯೋತ್ಪಾದಕ ಗುಂಪಿನ ಜಾಲವನ್ನು ವಿಸ್ತರಿಸುವುದರೊಂದಿಗೆ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಲು ತನಗೆ ತಾನೇ ಮರುನಾಮಕರಣ ಮಾಡಿಕೊಂಡಿದೆ ಎನ್ನಲಾಗಿದೆ.
ಜೈಶ್-ಎ-ಮೊಹಮ್ಮದ್ ಗುಂಪಿನ ಕಾರ್ಯಾಚರಣೆ ಬಗ್ಗೆ ತನಿಖೆ, ಸಂಘಟನೆಗೆ ಅಂತಾರಾಷ್ಟ್ರೀಯ ನಿರ್ಬಂಧ, ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಿಂದ ತಪ್ಪಿಸಿಕೊಳ್ಳಲು ಈ ಸಂಘಟನೆ ತನ್ನ ಹೆಸರು ಬದಲಾಯಿಸುವ ತಂತ್ರವನ್ನು ಅನುಸರಿಸುತ್ತಿದೆ. ಈ ಸಂಘಟನೆಗೆ ಜಾಗತಿಕ ಮಟ್ಟದಲ್ಲಿ ನಿಷೇಧಗಳು ಹೆಚ್ಚಿದ ಪರಿಣಾಮ ಅದು ಈಗ ಕಾಶ್ಮೀರ ಟೈಗರ್ಸ್ (ಕೆಟಿ) ಮತ್ತು ಕಾಶ್ಮೀರ ಫ್ರೀಡಂ ಆರ್ಮಿ (ಕೆಎಫ್ಎ) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಭಾರತ-ಪಾಕ್ ನಡುವೆ ಉದ್ವಿಗ್ನತೆ- ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೈವೋಲ್ಟೇಜ್ ಮೀಟಿಂಗ್
ಜೈಶ್-ಎ-ಮೊಹಮ್ಮದ್ ಯೋಜನೆ ಏನು?
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (ಪಿಒಜೆಕೆ) ಸಾಮಾಜಿಕ ಮತ್ತು ಆರ್ಥಿಕವಾಗಿ ಜೈಶ್-ಎ-ಮೊಹಮ್ಮದ್ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದು ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ ಸಂಘಟನೆಗೆ ನಿಷೇಧಗಳನ್ನು ತಪ್ಪಿಸಲು ಖುದ್ದಾಂ ಉಲ್-ಇಸ್ಲಾಂ, ಅಲ್-ರೆಹಮತ್ ಟ್ರಸ್ಟ್‌ನಂತಹ ಹೊಸ ಹೆಸರುಗಳನ್ನು ಇಟ್ಟು ಮತ್ತೆಮತ್ತೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದೆ. ಇತ್ತೀಚೆಗೆ ಅದು ಕಾಶ್ಮೀರ ಟೈಗರ್ಸ್ (ಕೆಟಿ) ಮತ್ತು ಕಾಶ್ಮೀರ ಫ್ರೀಡಂ ಆರ್ಮಿ (ಕೆಎಫ್ಎ) ಹೆಸರಿನಲ್ಲಿ ಕಾಶ್ಮೀರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಡೆಸುತ್ತಿದೆ.
ಕೆಟಿ ಮತ್ತು ಕೆಎಫ್ಎ ಸಂಘಟನೆಗಳು ಮದರಸಾ ಮತ್ತು ಹಿಜಾಮಾ (ಕಪ್ಪಿಂಗ್ ಥೆರಪಿ) ಕೇಂದ್ರಗಳಿಂದ ಸಾಮಾಜಿಕ ರಕ್ಷಣೆ ಪಡೆದು ಕಾರ್ಯನಿರ್ವಹಿಸುತ್ತವೆ. ಈ ಮೂಲಕ ಇಸ್ಲಾಮಿಕ್ ಧರ್ಮೋಪದೇಶದ ಹೆಸರಿನಲ್ಲಿ ಉಗ್ರರನ್ನು ರೂಪಿಸಲು ತರಬೇತಿ ನೀಡಲಾಗುತ್ತದೆ. ಇದರಿಂದ ಅದು ಭಯೋತ್ಪಾದನಾ ಸಂಘಟನೆ ಎನ್ನುವುದು ಯಾರಿಗೂ ಗೊತ್ತೇ ಆಗುವುದಿಲ್ಲ.

2024ರ ಜುಲೈನಲ್ಲಿ ಹುಟ್ಟಿಕೊಂಡ ಕಾಶ್ಮೀರ ಟೈಗರ್ಸ್ ಜಮ್ಮುವಿನ ದೋಡಾ ಮತ್ತು ಕಥುವಾ ಜಿಲ್ಲೆಗಳಲ್ಲಿ ನಡೆದ ದಾಳಿಗಳ ಜವಾಬ್ದಾರಿ ಹೊತ್ತುಕೊಂಡಿತ್ತು. ಹೀಗಾಗಿ ಇದು ಜೈಶ್-ಎ-ಮೊಹಮ್ಮದ್ ಸಂಘಟನೆ ಇಲ್ಲಿ ಸಕ್ರಿಯವಾಗಿರುವುದನ್ನು ಬಹಿರಂಗಪಡಿಸಿದೆ.
ಬಾಲಕೋಟ್‌ನೊಂದಿಗೆ ಸಂಬಂಧ
ಪಾಕಿಸ್ತಾನದ ಬಾಲಕೋಟ್ ಜೈಶ್-ಎ-ಮೊಹಮ್ಮದ್ ಸಂಘಟನೆಯ ಚಟುವಟಿಕೆಗಳಿಗೆ ಪ್ರಮುಖ ನೆಲೆಯಾಗಿದೆ. ಇಲ್ಲಿನ ಜಾಮಿಯಾ ಆಯೇಷಾ ಸಿದ್ದಿಕಿ ಲಿಲ್ಬನಾತ್ ಇಸ್ಲಾಮಿಯಾ ಮದರಸಾವನ್ನು ಅಬ್ದುಲ್ ಮಜೀದ್ ಸುಲಿಮಾನಿ ನಿರ್ವಹಿಸುತ್ತಿದ್ದು, ಆತನ ಇನ್ನೊಂದು ಹೆಸರು ಮಜೀದ್ ಸುಲಿಮಾನಿ. ಈಗ ಜೈಶ್ ನ ಹಿರಿಯ ಕಮಾಂಡರ್ ಆಗಿದ್ದಾನೆ. ಈ ಮದರಸಾ 2 ರಿಂದ 3 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಇಲ್ಲಿ ಅನೇಕ ಬೋಧನಾ ಕೊಠಡಿಗಳು, ಮಸೀದಿ ಮತ್ತು ವಸತಿ ನಿಲಯಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಮುಖ್ಯವಾಗಿ ಅನಾಥ ಮಹಿಳೆಯರಿಗೆ ಧಾರ್ಮಿಕ ಶಿಕ್ಷಣ ಡೋರಾ-ಎ-ಆಮಾನ್ ಮತ್ತು ಉನ್ನತ ಅಧ್ಯಯನಕ್ಕಾಗಿ ದಾರಾ-ಎ-ಖಾಸಾವನ್ನು ಒದಗಿಸುತ್ತದೆ.
ಇದನ್ನೂ ಓದಿ: Red Frort: ಕೆಂಪು ಕೋಟೆ ನಮ್ಮ ವಶಕ್ಕೆ ನೀಡಿ ಎಂದ ಮೊಘಲ್ ವಂಶಸ್ಥೆ; ಅರ್ಜಿ ತಿರಸ್ಕಾರ ಮಾಡಿದ ಸುಪ್ರೀಂ ಕೋರ್ಟ್
ಇದು ಕೆಟಿ ಮತ್ತು ಕೆಎಫ್‌ಎಗೆ ನೇಮಕಾತಿ ಮತ್ತು ಮಾರ್ಗದರ್ಶನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಮೂಲಸೌಕರ್ಯವನ್ನು ವಿಸ್ತರಿಸುವ ಯೋಜನೆಯನ್ನು ಸುಲಿಮಾನಿಯ ಯುಕೆ ಮೂಲದ ಸಹೋದರ ಖಾಜಿ ಶಬೀರ್ ನಿರ್ವಹಿಸುತ್ತಿದ್ದಾನೆ. ಇದಕ್ಕಾಗಿ ಆತ ಸೌದಿ ಅರೇಬಿಯಾ, ಯುಎಇ ಮತ್ತು ಪಾಕಿಸ್ತಾನದಿಂದ ದೇಣಿಗೆಗಳನ್ನು ಪಡೆಯುತ್ತಿದ್ದಾನೆ.
ಜೈಶ್-ಎ-ಮೊಹಮ್ಮದ್ ಮತ್ತು ಅದರ ಶಾಖೆಗಳು ಐಎಸ್‌ಐ ಮತ್ತು ಮುಜಫರಾಬಾದ್‌ನಲ್ಲಿರುವ ಕರ್ನಲ್ ರಹೀಲ್ ನೇತೃತ್ವದ ನಿರಾಶ್ರಿತರ ನಿರ್ವಹಣಾ ಕೋಶದೊಂದಿಗೆ (ಆರ್‌ಎಂಸಿ) ನಿಕಟ ಸಂಬಂಧವನ್ನು ಹೊಂದಿವೆ. ಇದು ತರಕಾರಿ, ಮಾಂಸ ಮತ್ತು ಸುರಕ್ಷಿತ ತಾಣಗಳ ಮಾಹಿತಿಗಳನ್ನು ಸಂಘಟನೆಗೆ ಒದಗಿಸುತ್ತದೆ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಯಾಕೆಂದರೆ 2024ರಲ್ಲಿ ಬಹಿರಂಗವಾದ ಪತ್ರದಲ್ಲಿ ಸುಲಿಮಾನಿಯಿಂದ ಆರ್‌ಎಂಸಿ ವ್ಯವಹಾರ ಕಾರ್ಯಾಚರಣೆಗಳಿಗೆ ಬೆಂಬಲವನ್ನು ಕೇಳಿರುವುದಾಗಿ ತಿಳಿದುಬಂದಿದೆ.