ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್‌ನನ್ನು ಹೊಡೆದುರುಳಿಸಿದ ಭಾರತೀಯ ಸೇನೆ
Latif Bhat: ಇತ್ತೀಚೆಗೆ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಸಿಆರ್‌ಪಿಎಫ್ ಕ್ಯಾಂಪ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಲತೀಫ್ ಭಟ್ ಸೇರಿ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.
ಉಗ್ರ ಲತೀಫ್ ಭಟ್ (ಸಂಗ್ರಹ ಚಿತ್ರ) -
ಶ್ರೀನಗರ, ನ. 16: ಇತ್ತೀಚೆಗೆ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಸಿಆರ್‌ಪಿಎಫ್ ಕ್ಯಾಂಪ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಲತೀಫ್ ಭಟ್ (Latif Bhat) ಸೇರಿ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕಿಸ್ತಾನದ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾದ (Lashkar-e-Taiba) ಪ್ರಮುಖ ಸದಸ್ಯನಾಗಿದ್ದ ಲತೀಫ್ ಭಟ್ ಬೇಟೆಗಾಗಿ ಭಾರತೀಯ ಸೇನೆ ಹಲವು ವರ್ಷಗಳಿಂದ ಹೊಂಚು ಹಾಕಿತ್ತು. ಕಳೆದ ವಾರ ಕುಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು.
ಕಳೆದ ವಾರದ ಸಿಆರ್‌ಪಿಎಫ್ ಕ್ಯಾಂಪ್ ಮೇಲಿನ ದಾಳಿ ಬಳಿಕ ಭದ್ರತಾ ಪಡೆ ಸ್ಥಳದಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಕುಲ್ಗಾಮ್‌ನಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸೋಮವಾರ (ನವೆಂಬರ್ 16) ದಾಳಿ ನಡೆಸಲಾಗಿದ್ದು ಈ ವೇಳೆ ಇಬ್ಬರು ಹತರಾಗಿದ್ದಾರೆ. ಭಾರತದ ಪಾಲಿಗೆ ಈ ಕಾರ್ಯಾಚರಣೆ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ.
ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ:
Two Lashkar-e-Taiba terrorists, including the lone surviving LET commander, Latif Bhat, were eliminated in an encounter with security forces at Laroo in Kulgam, South Kashmir. Both were involved in the recent terrorist attack on CRPF personnel in Kulgam. Jai Hind 🇮🇳 https://t.co/5Hn8mtgTEj
— Mudit Jain (@MuditJain_IN) November 16, 2026
ಅಧಿಕಾರಿಗಳ ಪ್ರಕಾರ, ಖುದ್ವಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಅಧಿಕಾರಿಗಳ ಪ್ರಕಾರ, ಉನ್ನತ ಸೇನಾ ಅಧಿಕಾರಿಗಳು, ಡಿಜಿಪಿ ನಳಿನ್ ಪ್ರಭಾತ್ ಮತ್ತು ಕಾಶ್ಮೀರ ವಲಯದ ಐಜಿಪಿ ಸುಜಿತ್ ಕುಮಾರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಯಿತು.
ಜಮ್ಮು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಗುಂಪಿನ ಮೇಲೆ ಉಗ್ರರ ದಾಳಿ; ಮೂವರು ಯೋಧರಿಗೆ ಗಾಯ
ಕುಲ್ಗಾಮ್ ದಾಳಿ
ನವೆಂಬರ್ 11ರಂದು ಭಾರಿ ಶಸ್ತ್ರಸಜ್ಜಿತರಾಗಿದ್ದ ಇಬ್ಬರು ಭಯೋತ್ಪಾದಕರು ಬೈಕ್‌ನಲ್ಲಿ ಆಗಮಿಸಿ ಕುಲ್ಗಮ್‌ನಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಹಠಾತ್ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ನವೆಂಬರ್ 12ರಂದು ಕಿಶ್ತ್ವಾರ್ ಜಿಲ್ಲೆಯ ದುರ್ಗಮ ದಾಚನ್ ಅರಣ್ಯ ಪ್ರದೇಶದಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹ ಪತ್ತೆಯಾದವು. ಈ ಹತ್ಯೆಗೂ ಲತೀಫ್ ಭಟ್‌ಗೂ ಸಂಬಂಧವಿದ್ಯಾ ಎನ್ನುವ ಬಗ್ಗೆಯೂ ತನಿಖೆ ನಡೆಯಲಿದೆ.
ಯಾರು ಈ ಲತೀಫ್ ಭಟ್?
ಮೊಹಮ್ಮದ್ ಲತೀಫ್ ಭಟ್ ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಲಷ್ಕರ್-ಎ-ತೈಬಾ ಮತ್ತು ಅದರ ಅಂಗಸಂಸ್ಥೆಗಳಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಕಾಶ್ಮೀರ ರೆವಲ್ಯೂಷನರಿ ಆರ್ಮಿಗೆ ಸೇರಿದ ಮೋಸ್ಟ್ ವಾಂಟೆಡ್ ಸ್ಥಳೀಯ ಉಗ್ರನಾಗಿದ್ದ. ಈತ ಕುಲ್ಗಾಮ್ ಜಿಲ್ಲೆಯ ಖ್ರೆವಾನ್ ಚಡ್ಡರ್ ನಿವಾಸಿಯಾಗಿದ್ದು, 2025ರ ನವೆಂಬರ್ 19ರಂದು ಮನೆಯಿಂದ ನಾಪತ್ತೆಯಾಗಿ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದ.
ಎನ್‌ಐಎ ಬಲೆಗೆ ಬಿದ್ದ ಪಾಕಿಸ್ತಾನ ಉಗ್ರ ಶಹಜಾದ್ ಭಟ್ಟಿ ಜಾಲ
2026ರಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಹಿಂದೆ ಈತನ ಕೈವಾಡವಿತ್ತು. ಅಷ್ಟೇ ಅಲ್ಲದೇ ಜುಲೈನಲ್ಲಿ ನಡೆದಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹತ್ಯೆ ಸೇರಿ ಇತ್ತೀಚೆಗೆ ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿಯೂ ಈತನ ಕೈವಾಡವಿತ್ತು ಎಂದು ಹೇಳಲಾಗಿತ್ತು.