ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನರೇಂದ್ರ ಮೋದಿ–ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ವೈರಿಗಳ ಅಪರೂಪದ ಕ್ಷಣ ವೈರಲ್

Narendra Modi: ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿಯ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಈ ವೇಳೆ ಮೋದಿ ಮತ್ತು ಖರ್ಗೆ ನಡುವೆ ನಡೆದ ಲಘು ಧಾಟಿಯ ಸಂಭಾಷಣೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಖರ್ಗೆ ಮೋದಿ ಅವರಿಗೆ “ನೀವು ಸ್ವಲ್ಪ ಬದಲಾಗಿದ್ದೀರಿ” ಎಂದು ಹೇಳಿದ್ದು, ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿದ ದೃಶ್ಯ ಗಮನ ಸೆಳೆದಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ನಾಯಕರ ಈ ಸ್ನೇಹಪೂರ್ಣ ಕ್ಷಣ ಅಪರೂಪದಲ್ಲಿ ಅಪರೂಪ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ಭಿನ್ನಾಭಿಪ್ರಾಯ ಮರೆತು ನಗೆಯ ಹಂಚಿಕೆ: ಮೋದಿ–ಖರ್ಗೆ ಸಂಭಾಷಣೆ ವೈರಲ್

ಮೋದಿ–ಖರ್ಗೆ ಸಂಭಾಷಣೆ ವೈರಲ್ -

Profile
Sushmitha Jain Aug 12, 2026 4:11 PM

ನವದೆಹಲಿ, ಆ. 12: ರಾಜಕೀಯ ಭಿನ್ನಾಭಿಪ್ರಾಯಗಳನ್ನು ಕೆಲಕಾಲ ಬದಿಗಿಟ್ಟು ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಗಾಂಧಿ ಕುಟುಂಬದ ಸಹೋದರ-ಸಹೋದರಿ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಅಪರೂಪದ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಅವರ ವಿವಾಹ ಆರತಕ್ಷತೆ ಸೋಮವಾರ (ಆಗಸ್ಟ್‌ 10) ನವದೆಹಲಿಯ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ನಡೆದ ಹಾಸ್ಯ ಸಂಭಾಷಣೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿyoದಲ್ಲಿ ಪ್ರಧಾನಿ ಮೋದಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆರೋಗ್ಯ ವಿಚಾರಿಸುತ್ತಾ, “ಹೇಗಿದ್ದೀರಿ?” ಎಂದು ಕೇಳಿದ್ದಾರೆ. ಇದಕ್ಕೆ ಪ್ರಿಯಾಂಕಾ, “ನಾನು ಚೆನ್ನಾಗಿದ್ದೇನೆ ಸರ್, ನೀವು ಹೇಗಿದ್ದೀರಿ?” ಎಂದು ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ತಮಾಷೆಯ ಕ್ಷಣ:



ಅದಕ್ಕೆ ಪ್ರಧಾನಿ ಮೋದಿ, “ನಾನು ಯಾವಾಗಲೂ ಹೇಗಿದ್ದೇನೋ ಹಾಗೆಯೇ ಇದ್ದೇನೆ” ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಈ ಮಾತು ಕೇಳಿ ಖರ್ಗೆ ನಗುತ್ತಾ, “ಭಾಯಿ ಸಾಹೇಬ್, ನೀವು ಸ್ವಲ್ಪ ಬದಲಾಗಿದ್ದೀರಿ” ಎಂದು ಹೇಳಿದ್ದಾರೆ.

ಖರ್ಗೆ ಅವರ ಈ ಮಾತಿಗೆ ಪ್ರಧಾನಿ ಮೋದಿ ಕೂಡ ಮುಗುಳ್ನಗುತ್ತಾ “ಹೌದಾ?” ಎಂದು ಪ್ರತಿಕ್ರಿಯಿಸಿದ್ದು, ಅಲ್ಲಿದ್ದ ನಾಯಕರು ನಗೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡ ನಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸ

ಮಲ್ಲಿಕಾರ್ಜುನ ಖರ್ಗೆ ಅವರ “ಸ್ವಲ್ಪ ಬದಲಾಗಿದ್ದೀರಿ” ಎಂಬ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವ್ಯಾಖ್ಯಾನಗಳು ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಪ್ರಧಾನಿ ಮೋದಿ ಯುವಜನರನ್ನು ತಲುಪುವ ಉದ್ದೇಶದಿಂದ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಹಾಗೂ ಕಿರು ವಿಡಿಯೊಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುವುದನ್ನು ಖರ್ಗೆ ಸೂಚ್ಯವಾಗಿ ತಿಳಿಸಿದ್ದಾಗಿ ಕೆಲವರು ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣ ಚಟುವಟಿಕೆಗಳು ಹೆಚ್ಚಾಗಿದ್ದು, ಯುವಜನರೊಂದಿಗೆ ಸಂಪರ್ಕ ಸಾಧಿಸಲು ಕಿರು ವಿಡಿಯೊಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಒಂದೇ ಫ್ರೇಮ್‌ನಲ್ಲಿ ಅಮಿತ್ ಶಾ, ರಾಹುಲ್ ಗಾಂಧಿ

ಒಂದೇ ವೇದಿಕೆಯಲ್ಲಿ ಪ್ರಮುಖ ನಾಯಕರು

ಸುಪ್ರಿಯಾ ಸುಳೆ ಅವರ ಪುತ್ರಿಯ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಗಂಭೀರ ಚರ್ಚೆಯಲ್ಲಿ ತೊಡಗಿರುವ ಮತ್ತೊಂದು ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಎನ್‌ಸಿಪಿ (ಎಸ್‌ಪಿ) ಮತ್ತು ಬಿಜೆಪಿಯ ನಡುವಿನ ರಾಜಕೀಯ ಸಮೀಕರಣಗಳ ಕುರಿತು ಚರ್ಚೆಗಳು ಆರಂಭವಾಗಿವೆ. ಆದರೆ, ಮಹಾರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಷ್ಟೇ ತಮ್ಮ ಪಕ್ಷದ ಇತ್ತೀಚಿನ ಪ್ರಧಾನಿ ಮೋದಿ ಭೇಟಿಗಳು ನಡೆದಿವೆ ಎಂದು ಸುಪ್ರಿಯಾ ಸುಳೆ ಈ ಹಿಂದೆ ಸ್ಪಷ್ಟಪಡಿಸಿದ್ದರು.

ಮುಂದುವರಿದ ರಾಜಕೀಯ ಭಿನ್ನಾಭಿಪ್ರಾಯ

ನಾಯಕರ ನಡುವಿನ ಈ ಲಘು ಧಾಟಿಯ ಸಂಭಾಷಣೆ ಗಮನ ಸೆಳೆದಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ರಾಜಕೀಯ ಸಂಘರ್ಷದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಕೈಗೊಂಡ ಕ್ರಮದ ಕುರಿತು ಕಾಂಗ್ರೆಸ್ ಸಂಸತ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ವಿರುದ್ಧ ನಡೆದ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉತ್ತರವನ್ನು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.

ಸಂಸತ್ ಕಲಾಪದಲ್ಲಿ ಎಫ್‌ಸಿಆರ್‌ಎ ಮಸೂದೆ ಹಾಗೂ ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದ ದೇಣಿಗೆಗಳ ದುರುಪಯೋಗದ ಆರೋಪ ಸೇರಿ ಹಲವು ವಿಚಾರಗಳು ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿವೆ.

ಹೀಗಾಗಿ, ವಿವಾಹ ಆರತಕ್ಷತೆಯಲ್ಲಿ ರಾಜಕೀಯ ನಾಯಕರ ನಡುವಿನ ಈ ಹಗುರವಾದ ಮಾತುಕತೆ ಅಪರೂಪದ ಸ್ನೇಹಪೂರ್ಣ ಕ್ಷಣವಾಗಿ ಗಮನ ಸೆಳೆದಿದ್ದರೂ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಂಘರ್ಷ ಮಾತ್ರ ಮುಂದುವರಿದಿದೆ.