ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಹೊಡೆದುರುಳಿಸಿದ ಪಾಕ್ ಸೇನೆ? ವೈರಲ್ ವಿಡಿಯೋದ ಅಸಲಿ ಕತೆ ಬಯಲಿಗೆಳೆದ ಪಿಐಬಿ!
ಬುಡ್ಗಾಂವ್ ಬಳಿ ಪಾಕಿಸ್ತಾನ ಸೇನೆ ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ಹೊಡೆದುರುಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು ಎಂದು PIB ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿದೆ. ವೈರಲ್ ಆಗಿರುವ ವಿಡಿಯೋ 2019ರ ಘಟನೆಗೆ ಸಂಬಂಧಿಸಿದ್ದು, ಪಾಕಿಸ್ತಾನ ದಾಳಿಯಿಂದ ಹೆಲಿಕಾಪ್ಟರ್ ಪತನವಾಗಿಲ್ಲ ಎಂದು ತಿಳಿಸಲಾಗಿದೆ. ಹಳೆಯ ವಿಡಿಯೋವನ್ನು ಪ್ರಸ್ತುತ ಘಟನೆಗೆ ತಳಕು ಹಾಕಿ ಹರಡಲಾಗುತ್ತಿದೆ ಎಂದು ಎಚ್ಚರಿಸಲಾಗಿದೆ.
PIB ಫ್ಯಾಕ್ಟ್‌ಚೆಕ್ -
ನವದೆಹಲಿ: ಪಾಕಿಸ್ತಾನಿ ಸೇನೆ (Pakistan Army)ಯು ಜಮ್ಮು ಮತ್ತು ಕಾಶ್ಮೀರ (Jammu & Kashmir)ದ ಬುಡ್ಗಾಂವ್ ಬಳಿ ಭಾರತೀಯ ವಾಯುಪಡೆಗೆ (Indian Air Force) ಸೇರಿದ Mi-17 ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಳೆಯ ವಿಡಿಯೋ ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ ಕಪೋಲಕಲ್ಪಿತ ಪ್ರಚಾರ ಎಂದು ಭಾರತ ಸರ್ಕಾರ (Indian Government)ದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (press information bureau)ದ ಅಧಿಕೃತ ಪಿಐಬಿ ಫ್ಯಾಕ್ಟ್‌ಚೆಕ್ ಘಟಕವು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನಿ ಪರ ಪ್ರಚಾರ ನಡೆಸುವ ಕಿಡಿಗೇಡಿ ಖಾತೆಗಳು ಭಾರತದ ಭದ್ರತಾ ವ್ಯವಸ್ಥೆಯ ವಿರುದ್ಧ ಜನರಲ್ಲಿ ತಪ್ಪು ಗ್ರಹಿಕೆ ಮತ್ತು ಆತಂಕ ಸೃಷ್ಟಿಸಲು 2019ರ ಹಳೆಯ ಅಪಘಾತದ ವಿಡಿಯೋ ತುಣುಕನ್ನು ದುರುದ್ದೇಶಪೂರ್ವಕವಾಗಿ ಹಂಚಿಕೊಳ್ಳುತ್ತಿವೆ. ಆದರೆ ವಾಸ್ತವವಾಗಿ ಈ ಘಟನೆ ಫೆಬ್ರವರಿ 27, 2019 ರಂದು ಶ್ರೀನಗರದ ವಾಯುನೆಲೆಯಿಂದ ನಿಯಮಿತ ಕಾರ್ಯಾಚರಣೆಗಾಗಿ ಹೊರಟಿದ್ದ ಸಂದರ್ಭದಲ್ಲಿ ನಡೆದಿದ್ದಾಗಿದೆ. ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳ ನಡುವೆ ತೀವ್ರ ವೈಮಾನಿಕ ಸಂಘರ್ಷ ನಡೆಯುತ್ತಿದ್ದಾಗ, ತಾಂತ್ರಿಕ ಸಂವಹನ ಕೊರತೆಯ ಪರಿಣಾಮ ಭಾರತೀಯ ವಾಯುಪಡೆಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಆಕಸ್ಮಿಕ ಹೊಡೆತಕ್ಕೆ (ಫ್ರೆಂಡ್ಲಿ ಫೈರ್) ಒಳಗಾಗಿ Mi-17 V5 ಹೆಲಿಕಾಪ್ಟರ್ ಬುಡ್ಗಾಂವ್ ಬಳಿ ಅಪಘಾತಕ್ಕೀಡಾಗಿತ್ತು. ಈ ದುರದೃಷ್ಟಕರ ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಆರು ಜನ ವೀರ ಯೋಧರು ಹುತಾತ್ಮರಾಗಿದ್ದರು.
ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ಅನ್ನು ಪಾಕಿಸ್ತಾನಿ ಸೇನೆಯು ಬುಡ್ಗಾಂವ್ ಬಳಿ ಹೊಡೆದುರುಳಿಸಿದೆ ಎಂದು ಪಾಕಿಸ್ತಾನಿ ಪ್ರಚಾರದ ಖಾತೆಗಳು ವೀಡಿಯೊವೊಂದನ್ನು ಹಂಚಿಕೊಳ್ಳುತ್ತಿವೆ.
— PIB in Karnataka (@PIBBengaluru) August 15, 2026
❌ ಇದು ಸುಳ್ಳು
✅ 2019ರಲ್ಲಿ, ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ಶ್ರೀನಗರದ ಬಳಿ ಭಾರತೀಯ ವಾಯುಪಡೆಯ ವಾಯು ರಕ್ಷಣಾ ವ್ಯವಸ್ಥೆಯಿಂದಲೇ… https://t.co/3TFSWpaQ65
ಪಾಕಿಸ್ತಾನಿ ಪಡೆಗಳು ಹೆಲಿಕಾಪ್ಟರ್ ಹೊಡೆದುರುಳಿಸಿವೆ ಎಂಬುದು ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದ ವದಂತಿಯಾಗಿದೆ. ಇಂತಹ ಸೂಕ್ಷ್ಮ ರಕ್ಷಣಾ ವಿಚಾರಗಳಲ್ಲಿ ಹಳೆಯ ವಿಡಿಯೋಗಳನ್ನು ಪ್ರಸ್ತುತ ಸಂದರ್ಭಕ್ಕೆ ತಳಕುಹಾಕಿ ಸುಳ್ಳು ನಿರೂಪಣೆ ನಿರ್ಮಿಸುವುದು ಪಾಕಿಸ್ತಾನ ಪ್ರಚಾರ ಯಂತ್ರದ ಹಳೆಯ ಚಾಳಿಯಾಗಿದೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಸಲಿ ಎಂದು ಬಿಂಬಿಸುವ ಯಾವುದೇ ಸುಳ್ಳು ಸಂದೇಶಗಳು, ತಿರುಚಿದ ವಿಡಿಯೋಗಳು ಮತ್ತು ಊಹಾಪೋಹಗಳನ್ನು ನಂಬಬಾರದು ಹಾಗೂ ಇತರರಿಗೆ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಪ್ರತಿಯೊಂದು ರಕ್ಷಣಾ ಹಾಗೂ ರಾಷ್ಟ್ರೀಯ ವಿಚಾರಗಳ ಕುರಿತು ಕೇವಲ ರಕ್ಷಣಾ ಸಚಿವಾಲಯ ಹಾಗೂ ದೃಢಪಟ್ಟ ಮೂಲಗಳನ್ನು ಮಾತ್ರ ಅವಲಂಬಿಸಬೇಕು.
ಯಾವುದೇ ಅನುಮಾನಾಸ್ಪದ ಸುದ್ದಿ ಅಥವಾ ಭಾರತ ಸರ್ಕಾರಕ್ಕೆ ಸಂಬಂಧಿಸಿದ ನಕಲಿ ಪೋಸ್ಟ್‌ಗಳು ಕಂಡುಬಂದಲ್ಲಿ ನಾಗರಿಕರು ತಕ್ಷಣವೇ ಅಧಿಕೃತ ಸಾಮಾಜಿಕ ಖಾತೆಗೆ ವರದಿ ಮಾಡಿ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ. ಸುಳ್ಳು ಸುದ್ದಿಗಳನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.