ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್‌ನಿಂದ ಹೊರ ತನ್ನಿʼʼ: ಶಿಕ್ಷಕರಿಗೆ ಮಹತ್ತರ ಜವಾಬ್ದಾರಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ

Teachers’ Day 2026: 'ʼಮಕ್ಕಳ ಜೀವನ ರೂಪಿಸುವಲ್ಲಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕುವ ಶಿಕ್ಷಕರು ದೇಶದ ನಿಜವಾದ ಶಕ್ತಿʼ' ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ರಾಷ್ಟ್ರೀಯ ಶಿಕ್ಷಕರ ದಿಣಾಚರಣೆಯ ಪ್ರಯುಕ್ತ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಪ್ರಶಂಸಿಸಿದರು.

ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ: ಶಿಕ್ಷಕರಿಗೆ ಪ್ರಧಾನಿ ಮೋದಿ ಕರೆ

ದೆಹಲಿಯಲ್ಲಿ ಶಿಕ್ಷಕರ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದರು -

Ramesh Ballamoole
Ramesh Ballamoole Sep 5, 2026 3:03 PM

ನವದೆಹಲಿ, ಸೆ. 5: ಶಿಕ್ಷಕರ ದಿನಾಚರಣೆ (Teachers’ Day 2026) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಅಧಿಕೃತ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಸ್ತಕ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ 82 ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು, ʼʼಮಕ್ಕಳ ಹಾಗೂ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಗಾಧ. ಶಿಕ್ಷಕರು ಕೇವಲ ಪಠ್ಯ ಮತ್ತು ಪರೀಕ್ಷಾ ಅಂಕಗಳ ಮೇಲೆ ಗಮನ ಹರಿಸದೆ, ಮಕ್ಕಳ ಮಾನಸಿಕ ಬೆಳವಣಿಗೆ ಹಾಗೂ ನಡವಳಿಕೆಗಳನ್ನೂ ಪರಿಶೀಲಿಸವೇಕುʼʼ ಎಂದು ಕರೆ ನೀಡಿದರು.

ಶಿಕ್ಷಕರ ದಿನಾಚರಣೆಯ ಮುನ್ನಾದಿನದಂದು ನಡೆದ ಈ ವಿಶೇಷ ಸಭೆಯಲ್ಲಿ ಶಿಕ್ಷಣ ಕೇತ್ರದಲ್ಲಾದ ಬದಲಾವಣೆಗಳು, ಮಕ್ಕಳ ಸೃಜನಶೀಲತೆ ಮತ್ತು ಇಂದಿನ ಸಾಮಾಜಿಕ ಸವಾಲುಗಳ ಕುರತು ಪ್ರಧಾನಿ ಚರ್ಚೆ ನಡೆಸಿದರು.

ಶಿಕ್ಷಕರ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ:



ಮಕ್ಕಳಿಗೆ ಇಂಟರ್‌ವ್ಯೂ ಕಲಿಕೆ

ಸಂವಾದದ ವೇಳೆ ಶಿಕ್ಷಕಿಯೊಬ್ಬರು, ʼʼನಾನು ನನ್ನ ಶಾಲೆಯ ಮಕ್ಕಳಿಗೆ ಸಂದರ್ಶನ ಮಾಡುವುದು ಹೇಗೆ ಎಂಬುವುದನ್ನು ವಿನೂತನವಾಗಿ ಕಲಿಸುತ್ತಿದ್ದೇನೆʼʼ ಎಂದಾಗ ಪ್ರಧಾನಿ ಮೋದಿ ತಕ್ಷಣವೇ ನಕ್ಕು, ʼʼಹಾಗಿದ್ದರೆ ಆ ಮಕ್ಕಳು ಮನೆಯಲ್ಲಿ ತಮ್ಮ ಪೋಷಕರನ್ನು ಇಂಟರ್‌ವ್ಯೂ ಮಾಡುತ್ತಿರಬೇಕಲ್ಲವೇ?ʼʼ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅದಕ್ಕೆ ಶಿಕ್ಷಕಿ, "ಹೌದು ಸರ್, ಈಗ ನಮ್ಮ ಶಾಲೆಯ ಎಲ್ಲ ಮಕ್ಕಳೂ ವರದಿಗಾರರಾಗಲು ಬಯಸುತ್ತಿದ್ದಾರೆ" ಎಂದು ಸಂಭ್ರಮದಿಂದ ಉತ್ತರಿಸಿದರು.

ಮತ್ತೊಬ್ಬ ಶಿಕ್ಷಕಿಗೆ ಪ್ರಧಾನಿ ಮೋದಿ, ʼʼನಾನು ನಿಮ್ಮ ವಿದ್ಯಾರ್ಥಿಯಾಗಿದ್ದು, ಒಬ್ಬ ಉತ್ತಮ ವಾಗ್ಮಿಯಾಗಲು ಬಯಸಿದರೆ ನನಗೆ ಏನು ಸಲಹೆ ನೀಡುತ್ತೀರಿ?ʼʼ ಎಂದು ಕೇಳಿದರು. ಅದಕ್ಕೆ ಶಿಕ್ಷಕಿ, ʼʼಸರ್, ಮೊದಲು ಆತ್ಮವಿಶ್ವಾಸ ಬೇಕುʼʼ ಎನ್ನುತ್ತಾ, ಪ್ರಧಾನಿಯವರ ಎದುರು ತಾವೇ ಕೊಂಚ ಗಾಬರಿಗೊಂಡು, ʼʼಕ್ಷಮಿಸಿ ಸರ್, ನಿಮ್ಮ ಎದುರು ನಿಂತು ಮಾತನಾಡಲು ನನಗೇ ಕೊಂಚ ಭಯ ಹಾಗೂ ಗಾಬರಿಯಾಗುತ್ತಿದೆʼʼ ಎಂದರು. ಈ ಮಾತು ಇಡೀ ಸಭೆಯಲ್ಲಿ ಮಂದಹಾಸ ಮೂಡಿಸಿತು.

ನರೇಂದ್ರ ಮೋದಿ-ಜಾರ್ಜಿಯಾ ಮೆಲೋನಿ ʼಮೆಲೋಡಿʼ ಚಾಕೊಲೇಟ್ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಉತ್ತುಂಗಕ್ಕೆ ಏರಿದ ರಿಯಲ್ ಎಸ್ಟೇಟ್ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರು

ಶಿಕ್ಷಕರಿಗೆ ಪ್ರಧಾನಿ ನೀಡಿದ ಪ್ರಮುಖ ಮಾರ್ಗದರ್ಶನಗಳು

ʼʼಬೋಧನೆ ಕೇವಲ ಪಠ್ಯಪುಸ್ತಕ ಮತ್ತು ಪರೀಕ್ಷೆಗಳಿಗೆ ಸೀಮಿತವಾಗಬಾರದು. ಕೇವಲ ಅಂಕಗಳಿಗೆ ಗಮನ ನೀಡದೆ, ಪರೀಕ್ಷೆಯಲ್ಲಿ ಹಿಂದುಳಿಯುವ ಮಗುವಿನಲ್ಲಿರುವ ಕ್ರೀಡೆ, ಕಲೆ ಅಥವಾ ಪ್ರಾಯೋಗಿಕ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯʼʼ ಎಂದು ಮೋದಿ ಹೇಳಿದರು.

ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಉಪಕರಣ ಹಾಗೂ ಮೊಬೈಲ್ ಬಳಕೆಯ ಕುರಿತು ಕಳವಳ ವ್ಯಕ್ತಪಡಿಸಿದ ಮೋದಿ, ಮಕ್ಕಳನ್ನು 'ಸ್ಕ್ರೀನ್ ಅಡಿಕ್ಷನ್'ನಿಂದ ಹೊರತರಲು ಅವರನ್ನು ಹೊರಾಂಗಣ ಆಟಗಳು ಮತ್ತು ಸೃಜನಶೀಲ ಹವ್ಯಾಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.

ʼʼಯುವಜನತೆಯನ್ನು ದುರಭ್ಯಾಸಗಳಿಂದ ದೂರವಿಡಲು ಮತ್ತು ಮಾದಕ ವ್ಯಸನದಂತಹ ಅಪಾಯಗಳ ಬಗ್ಗೆ ಶಾಲಾ ಹಂತದಲ್ಲೇ ನಿರಂತರ ಜಾಗೃತಿ ಹಾಗೂ ಮಾರ್ಗದರ್ಶನ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆʼʼ ಎಂದರು.

ʼʼತಂತ್ರಜ್ಞಾನದ ಬದಲಾವಣೆಗೆ ಅನುಗುಣವಾಗಿ ನವೀನ ಬೋಧನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳನ್ನು ನೈಜ ಜಗತ್ತಿನ ಕೌಶಲ್ಯಗಳಿಗೆ ಪರಿಚಯಿಸಬೇಕುʼʼ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಸ್ಮರಣೀಯವಾಗಿಸಲು ಬಿಜೆಪಿ ಯೋಜನೆ; 1 ತಿಂಗಳ ಜನಸಂಪರ್ಕ ಯಾತ್ರೆಗೆ ಸಿದ್ಧತೆ

ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸಲು ಪ್ರತಿವರ್ಷ ಈ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ. 'ವಿಕಸಿತ ಭಾರತ'ದ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಶಿಕ್ಷಕರ ಪಾತ್ರವೇ ಪ್ರಮುಖ ಬುನಾದಿ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಬಣ್ಣಿಸಿದರು.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.