ವಿಶ್ವ ಪರಿಸರ ದಿನ ಕಾರ್ಯಕ್ರಮ; ಸ್ವಚ್ಛತೆ, ಹಸಿರು ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತದ ಮಹತ್ವ ಒತ್ತಿಹೇಳಿದ ಪ್ರಧಾನಿ
ವಿಶ್ವ ಪರಿಸರ ದಿನದ ಅಂಗವಾಗಿ ಸೂರತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸ್ತುತ ದಶಕವು "ವಿಪತ್ತುಗಳ ದಶಕ"ವಾಗಿ ಪರಿಣಮಿಸುತ್ತಿದೆ ಎಂದು ಎಚ್ಚರಿಸಿದರು. ಕೋವಿಡ್-19 ಮಹಾಮಾರಿ, ವಿವಿಧ ದೇಶಗಳಲ್ಲಿನ ಯುದ್ಧಗಳು ಹಾಗೂ ಜಾಗತಿಕ ಇಂಧನ ಬಿಕ್ಕಟ್ಟು ವಿಶ್ವದ ಆರ್ಥಿಕತೆ ಮತ್ತು ಪೂರೈಕೆ ವ್ಯವಸ್ಥೆಗಳಿಗೆ ತೀವ್ರ ಪರಿಣಾಮ ಬೀರಿವೆ ಎಂದು ಹೇಳಿದರು. ಇಂತಹ ಸವಾಲುಗಳ ನಡುವೆಯೂ 140 ಕೋಟಿ ಭಾರತೀಯರ ಒಗ್ಗಟ್ಟಿನ ಪ್ರಯತ್ನದಿಂದ ಭಾರತ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಮೋದಿ ತಿಳಿಸಿದರು. ಜೊತೆಗೆ ಇಂಧನ ಸ್ವಾವಲಂಬನೆ, ಹಸಿರು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ -
ಸೂರತ್ : ವಿಶ್ವವು ಅಭೂತಪೂರ್ವ ಸವಾಲುಗಳ (Unprecedented Challenges) ನಡುವೆ ಸಾಗುತ್ತಿದ್ದು, ಪ್ರಸ್ತುತ ದಶಕವು "ವಿಪತ್ತುಗಳ ದಶಕ" (Decade of Disasters)ವಾಗಿ ರೂಪುಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ. ವಿಶ್ವ ಪರಿಸರ ದಿನ (World Environment Day)ದ ಅಂಗವಾಗಿ ಸೂರತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್-19 ಮಹಾಮಾರಿ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳು (Wars) ಮತ್ತು ಜಾಗತಿಕ ಇಂಧನ ಬಿಕ್ಕಟ್ಟುವಿಶ್ವದ ಆರ್ಥಿಕತೆ ಹಾಗೂ ಪೂರೈಕೆ ವ್ಯವಸ್ಥೆಗಳಿಗೆ ದೊಡ್ಡ ಹೊಡೆತ ನೀಡಿವೆ ಎಂದು ಹೇಳಿದರು.
"ಕೆಲ ವರ್ಷಗಳ ಹಿಂದೆಯೇ ಈ ದಶಕವು ವಿಪತ್ತುಗಳ ದಶಕವಾಗಬಹುದು ಎಂದು ಹೇಳಿದ್ದೆ. ಮೊದಲು ಕೋವಿಡ್ ಸಂಕಷ್ಟ ಎದುರಾಯಿತು. ಬಳಿಕ ಹಲವು ಭಾಗಗಳಲ್ಲಿ ಯುದ್ಧಗಳು ಆರಂಭವಾದವು. ಇಂಧನ ಬಿಕ್ಕಟ್ಟಿನಿಂದ ಜಗತ್ತಿನ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ. ಪೆಟ್ರೋಲ್ ಬೆಲೆಗಳಲ್ಲಿ (Petrol Prices) ನಿರಂತರ ಏರಿಳಿತ ಕಂಡುಬರುತ್ತಿದೆ. ಅನಿಲ ಪೂರೈಕೆ ಸರಪಳಿಗಳು ಕುಸಿಯುತ್ತಿವೆ" ಎಂದು ಮೋದಿ ಹೇಳಿದರು. ಇಂತಹ ಸವಾಲುಗಳ ನಡುವೆಯೂ 140 ಕೋಟಿ ಭಾರತೀಯರ ಒಗ್ಗಟ್ಟಿನ ಪ್ರಯತ್ನದಿಂದ ಭಾರತ ಪ್ರತಿಯೊಂದು ಸಂಕಷ್ಟವನ್ನೂ ಧೈರ್ಯದಿಂದ ಎದುರಿಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ದೇಶದ ಜನರ ಸಾಮೂಹಿಕ ಶಕ್ತಿಯೇ ಭಾರತದ ದೊಡ್ಡ ಬಲವಾಗಿದೆ" ಎಂದರು.
ಸೂರತ್ ನಗರದ ಬಗ್ಗೆ ಮಾತನಾಡಿದ ಪ್ರಧಾನಿ, "ಸೂರತ್ ಕೇವಲ ಒಂದು ನಗರವಲ್ಲ, ಅದು ಒಂದು ಸ್ಪೂರ್ತಿ" ಎಂದು ಬಣ್ಣಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ಸುಮಾರು 15 ಸಾವಿರ ಪೋಸ್ಟರ್‌ಗಳನ್ನು ತಯಾರಿಸಿ ಪರಿಸರ ಜಾಗೃತಿ ಮೂಡಿಸಿದ ಕುಟುಂಬಗಳನ್ನು ಅಭಿನಂದಿಸಿದರು. ಜೊತೆಗೆ ಸೌರಾಷ್ಟ್ರ ಭಾಗದ ಜನರು ಕೃಷಿ ಭೂಮಿಯನ್ನು ರಕ್ಷಿಸುವುದು ಮತ್ತು ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಮೆಲೋಡಿ ಚಾಕೊಲೇಟ್ ಬೆನ್ನಲ್ಲೇ ಮೋದಿ-ಮೆಲೋನಿಯ ಮತ್ತೊಂದು ವಿಡಿಯೊ ವೈರಲ್; ಹಿಂದಿಯಲ್ಲಿ ಮಾತನಾಡಿದ ಇಟಲಿ ಪ್ರಧಾನಿ
ಸ್ವಚ್ಛತಾ ಅಭಿಯಾನಗಳ ಕುರಿತು ಮಾತನಾಡಿದ ಮೋದಿ, ಐದು ದಿನಗಳ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸಿರುವುದನ್ನು ಶ್ಲಾಘಿಸಿದರು. "ಸ್ವಚ್ಛತೆ ಒಂದು ಅಭಿಯಾನ ಮಾತ್ರವಲ್ಲ, ಅದು ಸಮಾಜದ ಮೌಲ್ಯ ಮತ್ತು ಸಂಸ್ಕೃತಿಯಾಗಬೇಕು" ಎಂದು ಹೇಳಿದರು. ಸೂರತ್ ಹಾಗೂ ನವಸಾರಿ ಜನಪ್ರತಿನಿಧಿಗಳಿಗೂ ಅಭಿನಂದನೆ ಸಲ್ಲಿಸಿದರು. ಭಾರತದ ಹಸಿರು ಅಭಿವೃದ್ಧಿ (Green Growth) ನೀತಿಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಜಗತ್ತು ಹಸಿರು ಭವಿಷ್ಯದತ್ತ ಸಾಗುತ್ತಿರುವ ಸಂದರ್ಭದಲ್ಲಿ ಭಾರತವೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಗುಜರಾತ್ ರಾಜ್ಯವು ಶತಮಾನದ ಆರಂಭದಲ್ಲಿಯೇ ಪ್ರತ್ಯೇಕ ಹವಾಮಾನ ಬದಲಾವಣೆ ಇಲಾಖೆಯನ್ನು ಸ್ಥಾಪಿಸಿತ್ತು ಎಂದು ಅವರು ನೆನಪಿಸಿದರು.
ಸೂರತ್‌ನ ಪರಿಸರ ನಿರ್ವಹಣಾ ಯೋಜನೆಗಳನ್ನು ಮೆಚ್ಚಿದ ಮೋದಿ, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ಮಾರಾಟ ಮಾಡುವ ಮೂಲಕ ನಗರ ಪಾಲಿಕೆ ಆದಾಯ ಗಳಿಸುತ್ತಿರುವುದನ್ನು ಪ್ರಶಂಸಿಸಿದರು. ತಾಪಿ ಬ್ಯಾರೇಜ್ ಯೋಜನೆಯು ನಗರಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಜಾಗತಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ಇಂಧನ ಸ್ವಾವಲಂಬನೆ ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ ಪ್ರಧಾನಿ, ಕಳೆದ 12 ವರ್ಷಗಳಲ್ಲಿ ಭಾರತ ಅಣುಶಕ್ತಿ, ವಿದ್ಯುತ್ ಉತ್ಪಾದನೆ ಹಾಗೂ ಇಂಧನ ಜಾಲಗಳ ಅಭಿವೃದ್ಧಿಗೆ ಭಾರೀ ಹೂಡಿಕೆ ಮಾಡಿದೆ ಎಂದು ಹೇಳಿದರು. ಸೂರತ್‌ಗೆ ಬರುವ ಮುನ್ನ ಭೇಟಿ ನೀಡಿದ ಹಜೀರಾ ಪ್ರದೇಶವು ಆತ್ಮನಿರ್ಭರ ಭಾರತದ ಯಶಸ್ಸಿನ ಪ್ರತೀಕವಾಗಿದ್ದು, ದೇಶದ ಪ್ರಮುಖ ಸಾಗರ ಮತ್ತು ಕೈಗಾರಿಕಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದರು.
Ajith Shetty Column: ರಾಜತಾಂತ್ರಿಕತೆ ಬದಲಾಯಿಸಿದ ಮೋದಿ-ಟ್ರಂಪ್
ಆತ್ಮನಿರ್ಭರ ಭಾರತ ಅಭಿಯಾನವನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, "ಭಾರತವನ್ನು ವಿದೇಶಗಳ ಮೇಲೆ ಅವಲಂಬಿತವಾಗಿಡಲು ಪ್ರಯತ್ನಿಸಿದವರೇ ಇಂದು ಸ್ವಾವಲಂಬನೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ" ಎಂದು ಹೇಳಿದರು. ದೇಶದ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ತಮ್ಮ ಭಾಷಣದ ಕೊನೆಯಲ್ಲಿ ಜನರಿಗೆ ಸಂದೇಶ ನೀಡಿದ ಪ್ರಧಾನಿ, "ಭಾರತದ ಶಕ್ತಿ ಎಂದರೆ ನಕಾರಾತ್ಮಕತೆಯನ್ನು ತಿರಸ್ಕರಿಸುವ ಜನರ ಮನೋಭಾವ. ನೀವು ಎರಡು ಹೆಜ್ಜೆ ಮುಂದೆ ಇಟ್ಟರೆ, ನಾನು ಮೂರು ಹೆಜ್ಜೆ ಮುಂದೆ ಇಡುತ್ತೇನೆ. ನಿಲ್ಲುವುದು ಅಥವಾ ಸುಸ್ತಾಗುವುದು ನಮಗೆ ಒಪ್ಪಿಗೆಯಿಲ್ಲ" ಎಂದು ಹೇಳಿದರು.