''ವಿದೇಶಿ ವಸ್ತುಗಳ ಖರೀದಿ ನಿಲ್ಲಿಸಿ, ವಿದೇಶ ಪ್ರವಾಸ ಕೈಬಿಡಿʼʼ: ಸಾರ್ವಜನಿಕರಿಗೆ ಮೋದಿ ಮತ್ತೊಮ್ಮೆ ಮನವಿ
Narendra Modi: ಇರಾನ್ ಯುದ್ಧ ಪರಿಣಾಮ ತಪ್ಪಿಸಲು ಮತ್ತು ವಿದೇಶಿ ವಿನಿಮಯ ರಕ್ಷಣೆಗಾಗಿ ಮಿತವ್ಯಯಕ್ಕೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇದನ್ನು ಪುನರುಚ್ಚರಿಸಿದ್ದಾರೆ. ಗುಜರಾತ್‌ನಲ್ಲಿ ಮಾತನಾದ ಅವರು, ವಿದೇಶಿ ವಸ್ತುಗಳ ಖರೀದಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಗುಜರಾತ್‌ನ ವಡೋದರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಯಿತು -
ಗಾಂಧಿನಗರ, ಮೇ 11: ಇರಾನ್ ಯುದ್ಧ (Iran War) ಜಾಗತಿಕ ಇಂಧನ ಪೂರೈಕೆ ಜಾಲದ ಮೇಲೆ ಪರಿಣಾಮ ಬೀರಿದ್ದು ಮಿತವ್ಯಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ದೇಶವಾಸಿಗಳಲ್ಲಿ ಮನವಿ ಮಾಡಿದರು. ವಿದೇಶಿ ವಸ್ತುಗಳ ಖರೀದಿ ನಿಲ್ಲಿಸುವಂತೆಯೂ ಅವರು ಕರೆ ನೀಡಿದರು. ಗುಜರಾತ್‌ನಲ್ಲಿ ಮಾತನಾಡಿದ ಅವರು, ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುವಂತೆ ಒತ್ತಾಯಿಸಿದರು. "ವಿದೇಶಗಳಿಂದ ಅನೇಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಭಾರತವು ಲಕ್ಷಾಂತರ ಕೋಟಿ ರುಪಾಯಿ ಖರ್ಚು ಮಾಡುತ್ತದೆ. ಅದೇ ಸಮಯದಲ್ಲಿ ಆಮದು ಮಾಡಿಕೊಂಡ ಸರಕುಗಳ ಬೆಲೆಗಳು ಗಗನಕ್ಕೇರುತ್ತವೆ. ಅಲ್ಲದೆ ಸದ್ಯದ ಸಂಘರ್ಷದ ಪರಿಸ್ಥಿತಿಯಿಂದ ಜಾಗತಿಕ ಪೂರೈಕೆ ಸರಪಳಿಗಳು ಸಹ ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ" ಎಂದ ಅವರು, ʼʼಸಣ್ಣ ಪ್ರಯತ್ನಗಳು ದೊಡ್ಡ ಲಾಭಗಳಿಗೆ ಕಾರಣವಾಗುತ್ತವೆʼʼ ಎಂದು ವಿವರಿಸಿದರು.
"ಪ್ರತಿ ಹನಿಯೂ ಒಂದು ಪಾತ್ರೆಯನ್ನು ತುಂಬುವಂತೆ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಪ್ರಯತ್ನ ಮುಖ್ಯ. ನಾವು ವಿದೇಶದಿಂದ ಬರುವ ಉತ್ಪನ್ನಗಳ ಬಳಕೆ ಕಡಿಮೆ ಮಾಡಬೇಕು ಮತ್ತು ನಮ್ಮ ದೈನಂದಿನ ಜೀವನದಲ್ಲಿ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅನಗತ್ಯ ಅವಲಂಬನೆಯನ್ನು ತಪ್ಪಿಸಬೇಕುʼʼ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ:
#WATCH | Gujarat: Prime Minister Narendra Modi says, "Even in the earlier decades, whenever the country has gone through war or any other major crisis, every citizen has fulfilled their responsibility in the same way in response to the government's appeal. Today, too, there is a… pic.twitter.com/ydS8y5AApC
— ANI (@ANI) May 11, 2026
ಕೋವಿಡ್-19 ಸಾಂಕ್ರಾಮಿಕ ರೋಗವು ಶತಮಾನದ ಅತಿದೊಡ್ಡ ಸವಾಲಾಗಿತ್ತು. ಇದೀಗ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಉಂಟಾದ ಬಿಕ್ಕಟ್ಟು ಕೂಡ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪ್ರತಿಪಾದಿಸಿದರು. "ಪಶ್ಚಿಮ ಏಷ್ಯಾ ಬಿಕ್ಕಟ್ಟು ಅತ್ಯಂತ ಕೆಟ್ಟದಾಗಿದೆ. ನಾವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಜಯಿಸಿದಂತೆಯೇ ಇದರಿಂದಲೂ ಹೊರಬರುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ನಾಗರಿಕರ ಕರ್ತವ್ಯ
ದೇಶದ ಸಂಪನ್ಮೂಲಗಳ ಮೇಲಿನ ಹೊರೆ ಕಡಿಮೆ ಮಾಡುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ ಎಂದು ಅವರು ಹೇಳಿದರು. "ಹಿಂದೆಲ್ಲ ದೇಶವು ಯುದ್ಧ ಅಥವಾ ಯಾವುದೇ ಇತರ ಪ್ರಮುಖ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲ ಪ್ರತಿಯೊಬ್ಬ ನಾಗರಿಕನು ಸರ್ಕಾರದ ಮನವಿಗೆ ಪ್ರತಿಕ್ರಿಯೆಯಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾನೆ. ಈಗಲೂ ದೇಶದ ಸಂಪನ್ಮೂಲಗಳ ಮೇಲಿನ ಹೊರೆ ಕಡಿಮೆ ಮಾಡಲು ನಾವೆಲ್ಲರೂ ಒಗ್ಗೂಡಿ ನಮ್ಮ ಜವಾಬ್ದಾರಿಯನ್ನು ಪೂರೈಸುವ ಅಗತ್ಯವಿದೆ. ಹೀಗಾಗಿ ಡೀಸೆಲ್ ಮತ್ತು ಪೆಟ್ರೋಲ್ ಉಳಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕುʼʼ ಎಂದು ಪುನರುಚ್ಚರಿಸಿದರು.
"ವಿದೇಶಗಳಲ್ಲಿ ಮದುವೆಯಾಗುವ ಡೆಸ್ಟಿನೇಶನ್ ವೆಡ್ಡಿಂಗ್‌ಗಳ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಇದನ್ನು ತಪ್ಪಿಸಬೇಕು. ಇನ್ನು ನಮ್ಮ ರಜಾದಿನಗಳನ್ನು ಕಳೆಯಲು, ನಮ್ಮ ಮಕ್ಕಳಿಗೆ ನಮ್ಮ ಇತಿಹಾಸದ ಬಗ್ಗೆ ಕಲಿಸಲು, ಸ್ಥಳೀಯ ತಾಣಗಳ ಬಗ್ಗೆ ಹೆಮ್ಮೆ ಪಡಲು ಸಾಕಷ್ಟು ಸ್ಥಳಗಳಿವೆ. ಹೀಗಾಗಿ ವಿದೇಶ ಪ್ರವಾಸ ಆದಷ್ಟಿ ಕಡಿಮೆ ಮಾಡಿʼʼ ಎಂದು ಸಲಹೆ ನೀಡಿದರು.
ʼʼದೇಶಾದ್ಯಂತ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಆನ್‌ಲೈನ್ ತರಗತಿ ನಡೆಸಬೇಕು. ಕಚೇರಿಗಳಲ್ಲಿ ವರ್ಕ್ ಫ್ರಮ್ ಹೋಂ ಪದ್ಧತಿ ಜಾರಿಗೊಳಿಸಬೇಕುʼʼ ಎಂದು ಮತ್ತೊಮ್ಮೆ ಸೂಚಿಸಿದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.