ಗಣತಿಗೆ ಬಂದವರನ್ನು ಅನುಮಾನದಿಂದ ನೋಡಿದರು, ಉತ್ತರ ಕೊಡದೆ ಕಳುಹಿಸಿದರು, ಬಾಗಿಲು ಮುಚ್ಚಿದರು; ಸೆನ್ಸಸ್‌ಗೆ ತೆರಳುವವರ ಸಂಕಷ್ಟ ಒಂದೆರೆಡಲ್ಲ
ದೇಶಾದ್ಯಂತ ನಡೆಯುತ್ತಿರುವ ಜನಗಣತಿಗೆ ಸಾರ್ವಜನಿಕರು ಸಹಕರಿಸದೇ ಇರುವುದರಿಂದ ಗಣತಿ ಕಾರ್ಯ ನಿಧಾನವಾಗುತ್ತಿದೆ. ಹಲವೆಡೆ ಜನರು ಗಣತಿದಾರರಿಗೆ ಮನೆ ಬಾಗಿಲನ್ನೇ ತೆರೆಯುತ್ತಿಲ್ಲ, ಇನ್ನು ಕೆಲವಡೆ ಸರಿಯಾಗಿ ಉತ್ತರಿಸುತ್ತಿಲ್ಲ, ಮತ್ತೆ ಕೆಲವೆಡೆ ಗಣತಿದಾರರ ಮೇಲೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.. ಇಷ್ಟೇ ಅಲ್ಲದೇ ತೀವ್ರ ಬಿಸಿಲು, ಸಾರ್ವಜನಿಕ ಹಿಂಜರಿಕೆ ಗಣತಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎನ್ನುತ್ತಿದ್ದಾರೆ ಗಣತಿದಾರರು.
ಸಂಗ್ರಹ ಚಿತ್ರ -
ಬೆಂಗಳೂರು: ಸಾರ್ವಜನಿಕರು ಸರಿಯಾಗಿ ಸಹಕಾರ ನೀಡದೇ ಇರುವುದರಿಂದ ದೇಶಾದ್ಯಂತ ಗಣತಿ (Census) ಕಾರ್ಯ ನಿಧಾನವಾಗಿದೆ. ತೀವ್ರ ಬಿಸಿಲು (extreme heat) ಒಂದೆಡೆಯಾದರೆ ಇನ್ನೊಂದೆಡೆ ಜನರು ಗಣತಿದಾರರಿಗೆ ಮನೆ ಬಾಗಿಲನ್ನೇ ತೆರೆಯುತ್ತಿಲ್ಲ, ಇನ್ನು ಕೆಲವಡೆ ಸರಿಯಾಗಿ ಉತ್ತರಿಸುತ್ತಿಲ್ಲ, ಮತ್ತೆ ಕೆಲವೆಡೆ ಗಣತಿದಾರರ (Census workers) ಮೇಲೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.. ಈ ಎಲ್ಲಾ ಕಾರಣಗಳಿಂದ ಗಣತಿ ಕಾರ್ಯ ನಿಧಾನವಾಗುತ್ತಿದೆ. ಹಲವಾರು ರಾಜ್ಯಗಳಲ್ಲಿ ಜನಗಣತಿ ಕಾರ್ಯ ನಡೆಯುತ್ತಿದ್ದರೂ ಜನರಲ್ಲಿ ಭಯ, ಅರಿವಿನ ಕೊರತೆ, ಸ್ವಯಂ ನೋಂದಣಿಗೆ ಹಿಂಜರಿಕೆಯ ಕಾರಣದಿಂದ ಗಣತಿ ಕಾರ್ಯ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಗಣತಿದಾರರು.
ಜನಗಣತಿ ಕಾರ್ಯಕ್ಕಾಗಿ ಗಣತಿದಾರರು ತೀವ್ರ ಬಿಸಿಲಿನ ನಡುವೆಯೂ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಸಾರ್ವಜನಿಕರ ಸಹಕಾರವಿಲ್ಲದೆ ಅವರ ಕಾರ್ಯ ನಿಧಾನವಾಗುತ್ತಿದೆ. ದೆಹಲಿ, ಗುರುಗ್ರಾಮ್, ಗೋರಖ್‌ಪುರ, ಚಂದೌಲಿ, ಪಂಜಾಬ್, ಮಹಾರಾಷ್ಟ್ರ ಮತ್ತು ಭೋಪಾಲ್‌ನಲ್ಲಿ ಇದರಲ್ಲಿ ತೊಡಗಿರುವ ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿಯೊಂದಿಗೆ ಜನರು ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.
ಹಲವು ನಗರಗಳಲ್ಲಿ ಜನರು ಬಾಗಿಲನ್ನೇ ತೆರೆಯುತ್ತಿಲ್ಲ, ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ, ಆದಾಯ ಮತ್ತು ಆಸ್ತಿ ವಿವರ ನೀಡುತ್ತಿಲ್ಲ, ತಪ್ಪಾದ ಮಾಹಿತಿ ನೀಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿವೆ. ತಮ್ಮ ವೈಯಕ್ತಿಕ ಮಾಹಿತಿಯನ್ನು ಸರ್ಕಾರಕ್ಕೆ ಏಕೆ ನೀಡಬೇಕು ಎಂದು ಕೂಡ ಪ್ರಶ್ನಿಸುತ್ತಿದ್ದಾರೆ ಎನ್ನುತ್ತಾರೆ ಗಣತಿದಾರರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹಲವಾರು ಪ್ರದೇಶಗಳಲ್ಲಿ ಜನಗಣತಿ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಗಣತಿದಾರರಿಗೆ ಉತ್ತರಿಸುವುದನ್ನು ತಪ್ಪಿಸಲು ಬಾಗಿಲನ್ನೇ ತೆರೆಯುತ್ತಿಲ್ಲ. ಸಾಕಷ್ಟು ವಿನಂತಿಸಿದ ಬಳಿಕ ಅಪೂರ್ಣ ಮಾಹಿತಿಯನ್ನು ನೀಡುತ್ತಿದ್ದಾರೆ. ಇನ್ನು ಕೆಲವೆಡೆ ಹೆಚ್ಚಿನವರು ಕೆಲಸಕ್ಕೆ ಹೋಗುವುದರಿಂದ ಉತ್ತರಿಸಲು ಯಾರೂ ಸಿಗುತ್ತಿಲ್ಲ. ಇದರಿಂದ ಗಣತಿ ಕಾರ್ಯ ವಿಳಂಬವಾಗಿದೆ. ಗ್ರಾಮೀಣ ಭಾಗಗಳಲ್ಲಿ ಆಸ್ತಿ, ಆದಾಯ ವಿವರ ಕೇಳಿದಾಗ ತೀವ್ರ ಕೋಪದಿಂದ ಪ್ರತಿಕ್ರಿಯಿಸುತ್ತಾರೆ. ಕೆಲವೆಡೆ ಹಲ್ಲೆಗೂ ಮುಂದಾಗುತ್ತಾರೆ. ಕೊಳೆಗೇರಿ ಪ್ರದೇಶಗಳ ಜನರು ಮಾಹಿತಿಗಳನ್ನು ಹಂಚಿಕೊಂಡರು. ಯಾವುದೇ ರೀತಿಯ ಆಕ್ಷೇಪಗಳನ್ನು ವ್ಯಕ್ತಪಡಿಸಲಿಲ್ಲ. ಆದರೆ ಕೆಲವು ಪ್ರಶ್ನೆಗಳಿಗೆ ಏಕೆ ಉತ್ತರಿಸಬೇಕು ಎನ್ನುವ ಗೊಂದಲ ಅವರನ್ನು ಕಾಡುತ್ತಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಜನಗಣತಿ ಕಾರ್ಯವು ಸುಗಮವಾಗಿ ಪೂರ್ಣಗೊಳ್ಳಬೇಕಾದರೆ ಆಡಳಿತವು ಮೊದಲು ಇಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ ಎನ್ನುತ್ತಾರೆ ದೆಹಲಿಯ ಗಣತಿದಾರರು.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೇಸಿಗೆ ರಜೆ ಮತ್ತು ತೀವ್ರ ಶಾಖದ ಹೊರತಾಗಿಯೂ ಗಣತಿ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ಕೂಡ ಜನರು ಆದಾಯ, ಆಸ್ತಿ ಮತ್ತು ಕುಟುಂಬ ಸದಸ್ಯರಿಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿರುವುದು ಕಂಡು ಬಂದಿದೆ. ಗ್ರಾಮೀಣ ಪ್ರದೇಶಗಳ ನಿವಾಸಿಗಳು ಇದು ಯಾವುದಾದರೂ ಸರ್ಕಾರಿ ಯೋಜನೆಗೆ ಸಂಬಂಧಿಸಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ನಗರಗಳಲ್ಲಿ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಹೆಚ್ಚು ಮುಕ್ತವಾಗಿ ಸಹಕರಿಸುತ್ತಿದ್ದಾರೆ. ಇಲ್ಲಿ ಗಣತಿದಾರರಿಗೆ ಗುರುತು ಪತ್ರ ನೀಡಿರುವುದರಿಂದ ಗುರುತಿಗೆ ಸಂಬಂಧಿಸಿದ ಅನುಮಾನಗಳು ಕಂಡು ಬರುತ್ತಿಲ್ಲ ಎನ್ನುತ್ತಾರೆ ಗಣತಿದಾರರು.
ಡಿಜಿಟಲ್ ಅರಿವುಳ್ಳವರು ಸ್ವಯಂ ನೋಂದಣಿಯನ್ನು ನಡೆಸಿದ್ದಾರೆ. ಆದರೆ ನಿರಂತರ ಸರ್ಕಾರಿ ಕಾರ್ಯಯೋಜನೆಗಳಿಂದಾಗಿ ವಿಶ್ರಾಂತಿ ಸಿಗುತ್ತಿಲ್ಲ ಎಂದು ಕೆಲವು ಶಿಕ್ಷಕರು ದೂರಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರನ್ನು ಜನಗಣತಿ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಆದರೆ ಇವರೊಂದಿಗೆ ಮಾತನಾಡಲು ಅನೇಕರು ತಪ್ಪಿಸಿಕೊಳ್ಳುತ್ತಿದ್ದರೆ. ಹೆಚ್ಚಿನ ಗುರಿ ಮತ್ತು ತೀವ್ರ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಗಣತಿದಾರರು.
ಆಶಾ ಕಾರ್ಯಕರ್ತೆಯೊಬ್ಬರಿಗೆ ಸುಮಾರು 900 ಜನರನ್ನು ಸಮೀಕ್ಷೆ ಮಾಡುವ ಗುರಿಯನ್ನು ನೀಡಲಾಗಿದೆ. ಇವರು ಸ್ಥಳೀಯರೇ ಆಗಿರುವುದರಿಂದ ಜನರು ಹೆಚ್ಚು ವಿಶ್ವಾಸದಿಂದ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಭಾರತಕ್ಕೆ ನೂರೆಂಟು ಲಾಭ
ಸ್ವಯಂ ನೋಂದಣಿಗೆ ತಾಂತ್ರಿಕ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದೆ. ಕೆಲವು ಮನೆಗಳು ಒಂದೇ ಫಾರ್ಮ್ ಅನ್ನು ಪೂರ್ಣಗೊಳಿಸಲು ಹಲವು ಗಂಟೆಗಳೇ ಬೇಕಾಗುತ್ತದೆ ಎನ್ನುತ್ತಾರೆ ಗಣತಿದಾರರು.
ಇನ್ನು ಗುರುಗ್ರಾಮ್, ಗೋರಖ್‌ಪುರ., ಚಂದೌಲಿ, ಫಿರೋಜ್‌ಪುರ, ಭೋಪಾಲ್, ಸೋನಿಪತ್ , ಪಠಾಣ್‌ಕೋಟ್ ನಲ್ಲಿ ಕೂಡ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ನಾಲ್ಕರಿಂದ ಐದು ಗಂಟೆಗಳ ಕಾಲ ಶಿಕ್ಷಕರು ಇದಕ್ಕಾಗಿ ಸಮಯ ಮೀಸಲಿಡಬೇಕಾಗುತ್ತದೆ. ಆನ್‌ಲೈನ್ ನಲ್ಲಿ ನೋಂದಣಿ ಕಡಿಮೆಯಾಗಿದ್ದು, ಮಾಹಿತಿ ಸಂಗ್ರಹಕ್ಕೆ ಮನೆ-ಮನೆಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಗಣತಿದಾರರು.