ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಬಿಗಿ ಭದ್ರತೆ; 296 ಸ್ಥಾನಗಳಿಗೆ ನಾಳೆ ಮತದಾನ

ಅಸ್ಸಾಂ, ಕೇರಳ, ಪುದುಚೇರಿಯ ಒಟ್ಟು 296 ವಿಧಾನ ಸಭಾ ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ನಾಳೆ ಮತದಾನ

ಸಂಗ್ರಹ ಚಿತ್ರ -

ಬೆಂಗಳೂರು: ಕೇರಳ (Kerala), ಅಸ್ಸಾಂ (assam) ಮತ್ತು ಪುದುಚೇರಿಯ (Puducherry) ಒಟ್ಟು 296 ವಿಧಾನ ಸಭಾ (Assembly Elections 2026) ಸ್ಥಾನಗಳಿಗೆ ಗುರುವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. 2026ರ ವಿಧಾನಸಭಾ ಚುನಾವಣೆಯು ಬಿಜೆಪಿ (BJP), ಕಾಂಗ್ರೆಸ್‌‍ (Congress) ಹಾಗೂ ಪ್ರಾದೇಶಿಕ ಪಕ್ಷಗಳ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ಸ್ಥಾನಗಳಿಗೆ ಭಾರೀ ಬಿಗಿ ಭದ್ರತೆ ನಡುವೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಕೇರಳ

ಕೇರಳದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಮುಖ್ಯಮಂತ್ರಿ ವಿಜಯನ್‌ ಪಿಣರಾಯಿ ಅವರ ಎಲ್‌ಡಿಎಫ್‌ ಭಾರಿ ಸಿದ್ಧತೆ ಮಾಡಿಕೊಂಡಿದೆ. ಇವರ ವಿರುದ್ಧ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯು ಎದ್ದಿದ್ದು, ಇದನ್ನು ಪಕ್ಷವು ಹಿಮ್ಮೆಟ್ಟಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಗುಜರಾತ್‌ ಜನರು ಅನಕ್ಷರಸ್ಥರು ಎಂಬ ಹೇಳಿಕೆಗೆ ಕೊನೆಗೂ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ

ಎಲ್‌ಡಿಎಫ್‌ಗೆ ಕಾಂಗ್ರೆಸ್‌‍ ನೇತೃತ್ವದ ಯುಡಿಎಫ್‌ ಭಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ. ಇದರ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಕೂಡ ಅಧಿಕಾರರಕ್ಕೇರುವ ಕನಸು ಕಾಣುತ್ತಿದೆ.

ಒಟ್ಟು 140 ಸ್ಥಾನಗಳಿಗೆ 890 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಸರ್ಕಾರ ರಚನೆಗೆ 71 ಸ್ಥಾನಗಳ ಬಹುಮತ ಅಗತ್ಯವಾಗಿದೆ. ರಾಜ್ಯದಲ್ಲಿ ಒಟ್ಟು 27.1 ಮಿಲಿಯನ್ ಮತದಾರರಿದ್ದು, ಇದರಲ್ಲಿ 13.2 ಮಿಲಿಯನ್ ಪುರುಷರು, 13.9 ಮಿಲಿಯನ್ ಮಹಿಳೆಯರು ಮತ್ತು 273 ತೃತೀಯ ಲಿಂಗಿ ಮತದಾರರಿದ್ದಾರೆ.

ಅಸ್ಸಾಂ

ಅಸ್ಸಾಂನ 126 ವಿಧಾನ ಸಭಾ ಕ್ಷೇತ್ರಗಳಿಗೆ ಗುರುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಹಿಮಂತ್‌ ಬಿಶ್ವಾಸ್‌‍ ಶರ್ಮ ಹಾಗೂ ಲೋಕಸಭೆಯ ಕಾಂಗ್ರೆಸ್‌‍ ಉಪನಾಯಕ ಗೌರವ್‌ ಗೋಗಯ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಒಂದೇ ಹಂತದ ಮತದಾನವನ್ನು ನಡೆಸಲಿದೆ. ರಾಜ್ಯದಲ್ಲಿ ಸತತ ಎರಡು ಬಾರಿ ಅಧಿಕಾರ ನಡೆಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ ಮತ್ತೆ ಅಧಿಕಾರಕ್ಕೇರುವ ಕನಸು ಇಟ್ಟುಕೊಂಡಿದ್ದು, ಕಾಂಗ್ರೆಸ್‌‍ ಮರಳಿ ಅಧಿಕಾರ ಸ್ಥಾಪನೆ ಮಾಡುವ ಗುರಿ ಹೊಂದಿದೆ.

ಅಸ್ಸಾಂನಲ್ಲಿ ಒಟ್ಟು 25 ಮಿಲಿಯನ್ ಮತದಾರರಿದ್ದು, ಇವರಲ್ಲಿ 12.5 ಮಿಲಿಯನ್ ಪುರುಷರು, 12.5 ಮಿಲಿಯನ್ ಮಹಿಳೆಯರು ಮತ್ತು 343 ತೃತೀಯ ಲಿಂಗಿಗಳಿದ್ದಾರೆ. ಒಟ್ಟು 126 ವಿಧಾನಸಭಾ ಸ್ಥಾನಗಳಿಗೆ 722 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಪುದುಚೇರಿ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಗುರುವಾರ ಒಂದೇ ಹಂತದ ಮತದಾನ ನಡೆಯಲಿದ್ದು, ಇಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಪುದುಚೇರಿಯ ಒಟ್ಟು 30 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿವೆ. ಇಲ್ಲಿ ಸರ್ಕಾರ ರಚಿಸಲು 16 ಸ್ಥಾನಗಳ ಬಹುಮತದ ಅಗತ್ಯವಿದ್ದು, 9.44 ಲಕ್ಷ ಮತದಾರರಲ್ಲಿ ಸುಮಾರು 4.43 ಲಕ್ಷ ಪುರುಷರು, 5 ಲಕ್ಷ ಮಹಿಳೆಯರು ಮತ್ತು 139 ತೃತೀಯ ಲಿಂಗದ ಮತದಾರರು ನಾಳೆ ಮತದಾನ ಮಾಡಲಿದ್ದಾರೆ.

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಮಂಗಳವಾರ ಸಂಜೆ ಕೊನೆಯಾಗಿದ್ದು, ಗುರುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

Kerala Election Campaign: ದೇಶದಲ್ಲಿ ‘ಇಂಡಿ’ ದೋಸ್ತಿ: ಕೇರಳಂನಲ್ಲಿ ಜಂಗೀಕುಸ್ತಿ

ಇನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಾರ್ಯ ತೀವ್ರಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯುವುದಾಗಿ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.