Trump's Tariff Threat: ಟ್ರಂಪ್ ಸುಂಕ ಬೆದರಿಕೆ: ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪುಟಿನ್ ಅವರ ಭಾರತ ಭೇಟಿಗೆ ಇನ್ನೂ ಅಂತಿಮ ದಿನಾಂಕಗಳನ್ನು ನಿಗದಿಪಡಿಸಿಲ್ಲ. ಈ ವರ್ಷದಲ್ಲಿ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ ಎಂದು ಮಾಸ್ಕೋ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.


ನವದೆಹಲಿ: ರಷ್ಯಾದಿಂದ ತೈಲ ಖರೀದಿ (Russian Oil Import) ಮಾಡುತ್ತಿರುವುದಕ್ಕೆ ಭಾರತಕ್ಕೆ ಭಾರಿ ಸುಂಕವನ್ನು (Tariff) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ವಿಧಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಮಾತುಕತೆಗೆ ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಗೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೂ ಪುಟಿನ್ ಈ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Adviser Ajit Doval) ತಿಳಿಸಿದ್ದಾರೆ.
ಮಾಸ್ಕೋಗೆ ಭೇಟಿ ನೀಡಿರುವ ಅಜಿತ್ ದೋವಲ್ ಈ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪುಟಿನ್ ಅವರ ಭಾರತ ಭೇಟಿಗೆ ಇನ್ನೂ ಅಂತಿಮ ದಿನಾಂಕಗಳನ್ನು ನಿಗದಿಪಡಿಸಿಲ್ಲ. ಈ ವರ್ಷದಲ್ಲಿ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ ಎಂದು ಅವರು ಹೇಳಿದರು.
ರಷ್ಯಾ ಮತ್ತು ಭಾರತದ ನಡುವೆ ದೀರ್ಘ ಸಂಬಂಧವಿದೆ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ. ಉನ್ನತ ಮಟ್ಟದ ನಾಯಕರ ಈ ಭೇಟಿಯು ಈ ಹಿಂದೆ ಗಣನೀಯ ಕೊಡುಗೆಗಳನ್ನು ನೀಡಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷಪಡುತ್ತೇವೆ ಎಂದು ಅಜಿತ್ ದೋವಲ್ ತಿಳಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಶೇ. 25 ಸುಂಕವನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಒಂದು ದಿನದ ಬಳಿಕ ರಷ್ಯಾದಿಂದ ಈ ಪ್ರಕಟಣೆ ಬಂದಿದೆ.
ಭಾರತವು ಪ್ರಸ್ತುತ ರಷ್ಯಾ ಒಕ್ಕೂಟದಿಂದ ತೈಲವನ್ನು ನೇರವಾಗಿ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾವು ಉಕ್ರೇನ್ ಮೇಲೆ ನಡೆಸಿದ ಆಕ್ರಮಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತುರ್ತು ನಿಬಂಧನೆಗಳ ಅಡಿಯಲ್ಲಿ ಸುಂಕಗಳನ್ನು ಹೆಚ್ಚಿಸುವುದು ಅಗತ್ಯ ಮತ್ತು ಸೂಕ್ತ ಎಂದು ಅಮೆರಿಕ ಹೇಳಿದೆ.
ಮುಂದಿನ 21 ದಿನಗಳಲ್ಲಿ ಹೊಸ ಸುಂಕ ಜಾರಿಗೆ ಬರಲಿದ್ದು, ಇದರಿಂದ ಭಾರತೀಯ ಸರಕುಗಳ ಮೇಲಿನ ಒಟ್ಟು ಅಮೆರಿಕ ಸುಂಕ ಸುಮಾರು ಶೇ. 50 ಆಗಲಿದೆ. ಇದು ಟ್ರಂಪ್ ಆಡಳಿತವು ಏಷ್ಯಾದ ವ್ಯಾಪಾರ ಪಾಲುದಾರರ ಮೇಲೆ ವಿಧಿಸಿರುವ ಅತ್ಯಧಿಕ ಸುಂಕವಾಗಿದೆ.
ರಷ್ಯಾ ತೈಲ ಖರೀದಿದಾರರಿಗೆ ಟ್ರಂಪ್ ಬೆದರಿಕೆ
ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸಲು ಮಾಸ್ಕೋ ಒಪ್ಪದೇ ಇರುವುದರಿಂದ ರಷ್ಯಾದ ತೈಲ ಖರೀದಿದಾರರ ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿ ವಾಷಿಂಗ್ಟನ್ ಎಚ್ಚರಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿರುವ ಡೊನಾಲ್ಡ್ ಟ್ರಂಪ್, ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿ ಲಾಭ ಪಡೆಯುತ್ತಿದೆ. ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ ಮಾತ್ರವಲ್ಲ ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Asia Cup 2025: ಭಾರತ ಟಿ20ಐ ತಂಡಕ್ಕೆ ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಸಾಧ್ಯತೆ!
ಪುಟಿನ್- ಟ್ರಂಪ್ ಭೇಟಿ?
ವ್ಲಾಡಿಮಿರ್ ಪುಟಿನ್ ಅವರು ಮುಂದಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ವಿವರಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ರಷ್ಯಾದ ಅಧ್ಯಕ್ಷೀಯ ಸಲಹೆಗಾರ ಯೂರಿ ಉಷಾಕೋವ್ ತಿಳಿಸಿದ್ದಾರೆ.