ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ʼTIME 100 Climate 2025ʼ ಪಟ್ಟಿಯಲ್ಲಿ ಸ್ಥಾನ ಪಡೆದ ಸಚಿವ ಪ್ರಲ್ಹಾದ್‌ ಜೋಶಿ

TIME 100 Climate Most Powerfull Leader: ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಸಿದ್ಧಪಡಿಸಿದ "TIME 100 climate most powerfull leader" ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಲ್ಹಾದ್‌ ಜೋಶಿ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಸಂಸದರಾಗಿ ದಾಖಲೆ ನಿರ್ಮಿಸಿದ ಪ್ರಲ್ಹಾದ್‌ ಜೋಶಿ ಇದೀಗ ಈ ವರ್ಷದ 'TIME 100 CLIMATE' ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ "ಮೊದಲ ಭಾರತೀಯ ರಾಜಕಾರಣಿ" ಎಂಬ ಹೊಸ ದಾಖಲೆ ಸಹ ಬರೆದು ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ʼTIME 100 Climate 2025ʼ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಲ್ಹಾದ್‌ ಜೋಶಿ

-

Profile Siddalinga Swamy Nov 4, 2025 8:44 PM

ನವದೆಹಲಿ, ನ.4: ಆರ್ಥಿಕತೆ-ಅಭಿವೃದ್ಧಿ, ಪರಂಪರೆ ಮತ್ತು ದೂರದೃಷ್ಟಿ ನಾಯಕತ್ವದಲ್ಲಿ ಭಾರತ ವಿಶ್ವಪ್ರಸಿದ್ಧಿ ಪಡೆದಿದೆ. ಅದರಂತೆ ಇದೀಗ ಈ ಪ್ರಗತಿಶೀಲ ರಾಷ್ಟ್ರದ ಸಚಿವರೂ ಪ್ರಭಾವಿ ನಾಯಕರಾಗಿ ಜಗತ್ಪ್ರಸಿದ್ಧರಾಗುತ್ತಿದ್ದಾರೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅವರ ಸಚಿವ ಸಂಪುಟದ ಸದಸ್ಯರೂ ವಿಶ್ವಪ್ರಸಿದ್ಧರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರೀಗ ವಿಶ್ವದ ಪ್ರಮುಖ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಸಿದ್ಧಪಡಿಸಿದ "TIME 100 climate most powerfull leader" ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಲ್ಹಾದ್‌ ಜೋಶಿ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಸಂಸದರಾಗಿ ದಾಖಲೆ ನಿರ್ಮಿಸಿದ ಪ್ರಲ್ಹಾದ್‌ ಜೋಶಿ ಇದೀಗ ಈ ವರ್ಷದ "TIME 100 CLIMATE" ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ "ಮೊದಲ ಭಾರತೀಯ ರಾಜಕಾರಣಿ" ಎಂಬ ಹೊಸ ದಾಖಲೆ ಸಹ ಬರೆದು ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌

ಈ ಸುದ್ದಿಯನ್ನೂ ಓದಿ | Solar energy: ಸೌರ ಗುರಿಸಾಧನೆಯಲ್ಲಿ ಜಿ.20 ರಾಷ್ಟ್ರಗಳ ಪೈಕಿ ಭಾರತವೇ ಮುಂಚೂಣಿ: ಪ್ರಲ್ಹಾದ್‌ ಜೋಶಿ

ಪ್ರತಿಕೂಲ ಪರಿಸ್ಥಿತಿಯಲ್ಲಿ ಜಗತ್ತಿನ ಹವಾಮಾನ ಸುಸ್ಥಿರತೆಗಾಗಿ ಸಚಿವ ಪ್ರಲ್ಹಾದ್‌ ಜೋಶಿ ಅವರ ಸಾರಥ್ಯದಲ್ಲಿ ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಭಾರತ ದಿಟ್ಟ ಹೆಜ್ಜೆಯಿರಿಸಿದೆ. ಇದಕ್ಕಾಗಿ ನೂರಾರು ರಾಷ್ಟ್ರಗಳೂ ಭಾರತದೊಂದಿಗೆ ಕೈ ಜೋಡಿಸಿವೆ. ದೆಹಲಿಯ ಭಾರತ್ ಮಂಟಪದಲ್ಲಿ ಮೊನ್ನೆಯಷ್ಟೇ 125ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಟ್ಟುಗೂಡಿಸಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನವೇ ಇದಕ್ಕೆ ಸಾಕ್ಷಿ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವದ ಊಹೆಗೂ ನಿಲುಕದಂತೆ ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ. ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ವಲಯದ ಸಾಧನೆಯಲ್ಲಂತೂ ವಿಶ್ವವೇ ನಿಬ್ಬೆರಗಾಗಿದೆ. ಯುರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿ ಮಾಡಿ ಸೌರಶಕ್ತಿ ಉತ್ಪಾದನೆಯಲ್ಲಿ ಭಾರತದ ತಾಂತ್ರಿಕತೆ, ತಂತ್ರಜ್ಞಾನ ಹಂಚಿಕೆಗೆ ಪ್ರಸ್ತಾಪಿಸಿದ್ದಾರೆ.

ಭಾರತದ ಕೋಟ್ಯಂತರ ಮನೆಗಳಲ್ಲಿ ಸೌರ ಬೆಳಕು ಚೆಲ್ಲಿದ ʼಸೂರ್ಯಘರ್ʼ ಮತ್ತು ರೈತ ಸಮುದಾಯವನ್ನು ಸಬಲೀಕರಣಗೊಳಿಸುತ್ತಿರುವ ʼಪಿಎಂ ಕುಸುಮ್ʼ ಯೋಜನೆ ಯಶಸ್ಸು ಕಂಡು ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮಲ್ಲೂ ಈ ಯೋಜನೆಗಳ ಅನುಷ್ಠಾನಕ್ಕೆ ಸಾಥ್ ನೀಡುವಂತೆ ಬೇಡಿಕೆ ಮುಂದಿಡುವಷ್ಟರ ಮಟ್ಟಿಗೆ ಕಾರ್ಯ ಸಾಧನೆ ತೋರಿದ್ದಾರೆ ಸಚಿವ ಜೋಶಿ.

2024ರಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹೊಣೆ ಹೊತ್ತ ಜೋಶಿ ಅವರು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ ಕುಸುಮ್, ಸೂರ್ಯಘರ್ ಸೇರಿದಂತೆ ಭಾರತದ ಹಸಿರು ಇಂಧನ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. 2030ರ ವೇಳೆಗೆ 500 ಗಿಗಾವಾಟ್ ಪಳೆಯುಳಿಕೇಯೇತರ ಇಂಧನ ಸಾಮರ್ಥ್ಯ ತಲುಪುವ ಭಾರತದ ಗುರಿಯನ್ನು ಐತಿಹಾಸಿಕ ಎನ್ನುವಂತೆ 5 ವರ್ಷ ಮೊದಲೇ ಸಾಧಿಸಿದರು. ಅಲ್ಲದೇ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಭಾರತವನ್ನು ಜಗತ್ತಿನ 2ನೇ ಅತಿದೊಡ್ಡ ಸೋಲಾರ್ ಮಾರುಕಟ್ಟೆಯಾಗಿ ನಿರ್ಮಿಸಿದ್ದು ಪ್ರಲ್ಹಾದ್‌ ಜೋಶಿ ಅವರ ಕಾರ್ಯಕ್ಷಮತೆ ಮತ್ತು ದೂರದೃಷ್ಟಿ ನಾಯಕತ್ವಕ್ಕೆ ನಿದರ್ಶನ.

2014ರಲ್ಲಿ ಕೇವಲ 81 ಗಿಗಾವಾಟ್ ಇದ್ದ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಇಂದು 257 ಗಿಗಾವಾಟ್‌ಗೆ ಏರಿದೆ. ಇನ್ನು ಸೋಲಾರ್ ಸಾಮರ್ಥ್ಯ ಸಹ ಅತ್ಯದ್ಭುತ ಎನ್ನುವಂತೆ 2.8 ಗಿಗಾವಾಟ್ನಿಂದ 128 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯಕ್ಕೆ ಹೆಚ್ಚಿಸುವಲ್ಲಿ ಪ್ರಲ್ಹಾದ್‌ ಜೋಶಿಯವರ ಕಾರ್ಯವೈಖರಿ ಅನುಕರಣೀಯ.

ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಗ್ಗಿಸಲು ಇಂಗಾಲ ಹೊರಸೂಸುವಿಕೆಯಲ್ಲಿ ತ್ವರಿತ ಕಡಿತದ ಅಗತ್ಯವಿದೆಯೆಂದು ಪ್ರತಿಪಾದಿಸುತ್ತಲೇ ಬಂದಿರುವ ಪ್ರಲ್ಹಾದ್‌ ಜೋಶಿ, 2028ರ ವೇಳೆಗೆ ಭಾರತ ಸ್ಥಳೀಯ ಸೌರಕೋಶ ಉತ್ಪಾದನೆ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಲ್ಲದೆ, ಯುವ ಸಮೂಹ ಹಸಿರು ಇಂಧನ ಉತ್ಪಾದನೆ ಕೌಶಲ್ಯ ಹೊಂದಲು 2½ ತಿಂಗಳ ಕೋರ್ಸ್ ಸಹ ಪ್ರಾರಂಭಿಸಿ ನವೀಕರಿಸಬಹುದಾದ ಇಂಧನ ವಲಯಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Pralhad Joshi: ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ ಮೆಚ್ಚುಗೆ

ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಹಸಿರು ಇಂಧನ ಪರಿವರ್ತನೆಯಲ್ಲಿ ಭಾರತದ ಅದ್ವಿತೀಯ ಸಾಧನೆ ಹಿಂದೆ ಸಚಿವ ಪ್ರಲ್ಹಾದ್‌ ಜೋಶಿಯವರ ಕಾರ್ಯಸಾಧನೆ ಅತಿ ದೊಡ್ಡದಿದೆ ಎಂದು ಗುರುತಿಸಿದ್ದು, "TIME 100 CLIMATE (ಹವಾಮಾನ)" ಸುಸ್ಥಿರತೆಯಲ್ಲಿ ವಿಶ್ವದ ಹೆಸರಾಂತ ದಿಗ್ಗಜರ ಪಟ್ಟಿಯಲ್ಲಿ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಅವರ ಹೆಸರು ಮೇಲುಸ್ಥರದಲ್ಲಿ ರಾರಾಜಿಸುತ್ತಿದೆ.