ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯಾವುದೇ ಅನಾಹುತಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ: ದೆಹಲಿಯಲ್ಲಿ ಕುಸಿದ ಕಟ್ಟಡದ ಪಿಜಿ ಒಪ್ಪಂದದಲ್ಲಿತ್ತು ವಿಚಿತ್ರ ಷರತ್ತು!

Delhi Building Collapse: ದೆಹಲಿಯ ಸತ್ಯ ನೀಕೆತನ ಪ್ರದೇಶದಲ್ಲಿ ಭಾನುವಾರ ಬಾಯ್ಸ್ ಪಿಜಿ ಇದ್ದ 5 ಮಹಡಿಯ 'ಹೋಸ್ಟೆಲ್ ಡೇಜ್' ಕಟ್ಟಡ ಕುಸಿದುಬಿದ್ದು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ದುರಂತದ ಬೆನ್ನಲೇ ಈ ಪಿಜಿಯ ಬಾಡಿಗೆ ಒಪ್ಪಂದ ಪತ್ರದಲ್ಲಿದ್ದ ನಿಯಮಗಳು ಹೊರಬಿದ್ದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಅಷ್ಟಕ್ಕೂ ಷರತ್ತಿನಲ್ಲಿ ಏನಿತ್ತು?

ದೆಹಲಿಯಲ್ಲಿ ಕುಸಿದ ಕಟ್ಟಡದ ಪಿಜಿ ಒಪ್ಪಂದದಲ್ಲಿತ್ತು ವಿಚಿತ್ರ ಷರತ್ತು

ದೆಹಲಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ -

Ramesh Ballamoole
Ramesh Ballamoole Sep 7, 2026 6:01 PM

ನವದೆಹಲಿ, ಸೆ. 7: ಸತ್ಯ ನಿಕೇತನ್ ಪ್ರದೇಶದಲ್ಲಿ ಭಾನುವಾರ (ಸೆಪ್ಟೆಂಬರ್‌ 7) ಮಧ್ಯಾಹ್ನ 5 ಮಹಡಿಯ ಬಾಯ್ಸ್ ಪಿಜಿ (Delhi Building Collapse) ಕಟ್ಟಡ ಕುಸಿದುಬಿದ್ದು, 7 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಈಗ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಈ ಪಿಜಿಯ ಬಾಡಿಗೆ ಒಪ್ಪಂದ ಪತ್ರದಲ್ಲಿದ್ದ (Rent Agreement) ಬಾಧ್ಯತೆಯ ನಿರಾಕರಣೆ (Liability Disclaimer) ಷರತ್ತು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ ಈ ಪಿಜಿಯಲ್ಲಿದ್ದ ವಿದ್ಯಾರ್ಥಿಗಳ ಬಾಡಿಗೆ ಒಪ್ಪಂದ ಪತ್ರದಲ್ಲಿ ʼ'ನನಗೆ ಉಂಟಾಗುವ ಯಾವುದೇ ರೀತಿಯ ಅನಾಹುತ, ಆಕಸ್ಮಿಕ ಸಾವು ಅಥವಾ ಅಪಾಯಕ್ಕೆ ಪಿಜಿ ಆಡಳಿತ ಮಂಡಳಿಯು ಜವಾಬ್ದಾರಿಯಾಗಿರುವುದಿಲ್ಲ'ʼ ಎಂಬ ಸ್ಪಷ್ಟ ಷರತ್ತನ್ನು ಸೇರಿಸಲಾಗಿತ್ತು. ಅಂದರೆ, ಕಟ್ಟಡದ ಸುರಕ್ಷತೆಯ ಹೊಣೆಯಯಿಂದ ಪಿಜಿ ಮಾಲಕರು ಸಂಪೂರ್ಣವಾಗಿ ನುಣುಚಿಕೊಳ್ಳುವಂತಹ ಒಪ್ಪಂದಕ್ಕೆ ವಿದ್ಯಾರ್ಥಿಗಳಿಂದಿದ ಸಹಿ ಪಡೆದುಕೊಳ್ಳಲಾಗಿತ್ತು.

ಸ್ಥಳೀಯ ನಿವಾಸಿ ಹಾಗೂ ದೆಹಲಿ ಪೊಲೀಸ್ ಸಿಬ್ಬಂದಿ ರಾಜನ್ ಛೇತ್ರಿ ಅವರ ಪ್ರಕಾರ, ವಿದ್ಯಾರ್ಥಿಗಳಿಂದ ಪ್ರತಿ ಹಾಸಿಗೆಗೆ ತಿಂಗಳಿಗೆ ಸುಮಾರು 12 ಸಾವಿರ ರೂಪಾಯಿವರೆಗೆ ಬಾಡಿಗೆ ಪಡೆಯಲಾಗುತ್ತಿತ್ತು. ಕೇರಳಂ, ಹರಿಯಾಣ ಹಾಗೂ ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಬಂದು ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್ ನೆಹರೂ ಕಾಲೇಜು, ಆತ್ಮಾರಾಮ ಸನಾತನ ಧರ್ಮ (ARSD) ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಈ ಪಿಜಿಯಲ್ಲಿ ವಾಸವಾಗಿದ್ದರು.

ದೆಹಲಿಯಲ್ಲಿ ಕಟ್ಟಡ ಕುಸಿದ ಜಾಗದಲ್ಲಿನ ರಕ್ಷಣಾ ಕಾರ್ಯಾಚರಣೆ:



ಸರಿಯಾದ ನಿರ್ವಹಣೆಯಿಲ್ಲದೆ ಬಳಕೆ

20–22 ವರ್ಷಗಳಿಂದ ಸತ್ಯ ನಿಕೇತನದಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿ ಪ್ರಿಯಾಂಕಾ, ಪ್ರದೇಶದಲ್ಲಿ ಐದರಿಂದ ಆರು ಅಂತಸ್ತಿನ ಕಟ್ಟಡಗಳನ್ನು ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲಕರು ಕಟ್ಟಡಗಳಿಗೆ ಪಿಜಿ ಎಂಬ ಫಲಕ ಹಾಕಿ ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಪ್ರತಿ ತಿಂಗಳು ಆನ್‌ಲೈನ್ ಮೂಲಕ ಬಾಡಿಗೆ ಪಡೆಯುವುದಕ್ಕಷ್ಟೇ ಗಮನ ಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಕಟ್ಟಡದ ಸ್ಥಿತಿ ಮತ್ತು ನಿರ್ವಹಣೆ ಬಗ್ಗೆ ಮಾಲಕರು ನಿಯಮಿತವಾಗಿ ಪರಿಶೀಲನೆ ನಡೆಸುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ದೆಹಲಿ ಪಿಜಿ ದುರಂತ ಪ್ರಕರಣ: ಈಗಲೋ, ಆಗಲೋ ಎನ್ನುವಂತಿದ್ದ 50 ವರ್ಷ ಹಿಂದಿನ ಹಳೆಯ ಕಟ್ಟಡ

ತಳಮಹಡಿಯ ರಿಪೇರಿ ಕೆಲಸವೇ ಕುಸಿತಕ್ಕೆ ಕಾರಣವಾಯಿತಾ?

ಸುಮಾರು 40 ವರ್ಷ ಹಳೆಯದಾದ ಈ ಕಟ್ಟಡದ ತಳಮಹಡಿಯಲ್ಲಿನ ತೇವಾಂಶ ಅಥವಾ ಕಟ್ಟಡದ ಬದಲಾವಣೆಗಳ ಕಾರಣಕ್ಕೆ ದುರಸ್ತಿ ಕೆಲಸ ನಡೆಯುತ್ತಿತ್ತು. ಈ ಕೆಲಸದ ಸಮಯದಲ್ಲಿ ಕಟ್ಟಡಕ್ಕೆ ಆಧಾರವಾಗಿದ್ದ ಒಂದೆರಡು ಪ್ರಮುಖ ಗೋಡೆಗಳನ್ನು ಅಲುಗಾಡಿಸಿರಬಹುದು ಅಥವಾ ತೆರವುಗೊಳಿಸಿರಬಹುದು, ಇದು ಇಡೀ ಕಟ್ಟಡ ಕುಸಿಯಲು ಕಾರಣವಾಗಿರಬಹುದು ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ, ʼʼಶೇಕಡಾ 80ರಷ್ಟು ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ತಳಮಹಡಿಯ ಬೂದಿ-ತ್ಯಾಜ್ಯ ಮಾತ್ರ ಬಾಕಿ ಉಳಿದಿದೆ. ತಳಮಹಡಿಯಲ್ಲಿ ನೀರು ನಿಂತುಕೊಂಡಿದೆ. ಹಳೆಯ ಕಟ್ಟಡದಲ್ಲಿದ್ದ ಈ ನೀರಿನ ಶೇಖರಣೆ ಮತ್ತು ಅಲ್ಲಿ ನಡೆಯುತ್ತಿದ್ದ ರಿಪೇರಿ ಕೆಲಸಗಳೇ ಕಟ್ಟಡ ಕುಸಿತಕ್ಕೆ ಮುಖ್ಯ ಕಾರಣʼʼ ಎಂದು ಹೇಳಿದ್ದಾರೆ.

ಕಟ್ಟುನಿಟ್ಟಿನ ಕ್ರಮಕ್ಕೆ ದೆಹಲಿ ಸರ್ಕಾರ ಆದೇಶ

ಸತ್ಯ ನಿಕೇತನ್ ಕಟ್ಟಡ ದುರಂತದ ಮರುದಿನವೇ ದೆಹಲಿ ಸರ್ಕಾರವು ಇಡೀ ನಗರದಾದ್ಯಂತ ಇರುವ ನಿಯಮಬಾಹಿರ 5 ಮಹಡಿಯ ಅಕ್ರಮ ಕಟ್ಟಡಗಳನ್ನು ತಕ್ಷಣವೇ ಸೀಲ್ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ. ಅಲ್ಲದೆ ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದ ಪಿಜಿಗಳು ಮತ್ತುಇತರ ಕಟ್ಟಡಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿ, ನಿಯಮ ಉಲ್ಲಂಘಣೆ ಕಂಡುಬಂದಲ್ಲಿ ತಕ್ಷಣವೇ ಅವುಗಳನ್ನು ಬಂದ್‌ ಮಾಡಲು ಸೂಚಿಸಲಾಗಿದೆ. ಕಟ್ಟಡದ ಮಾಲೀಕನ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಿಸಲಾಗಿದ್ದು, ಈ ವಿಚಾರದಲ್ಲಿ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಕಡೆಯಿಂದ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದರೆ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ.

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಮುನ್ನಚ್ಚರಿಕಾ ಕ್ರಮವಾಗಿ ದುರಂತ ನಡೆದ ಸ್ಥಳದ ಪಕ್ಕದಲ್ಲಿರುವ ಕಟ್ಟಡಗಳಿಗೆ ಬೆಂಬಲವಾಗಿ ಕಬ್ಬಿಣದ ಜಾಕ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ, ಪಿಜಿಗಳು, ನರ್ಸಿಂಗ್ ಹೋಮ್‌ಗಳು, ಶಾಲೆಗಳು ಸೇರಿ ಸಾರ್ವಜನಿಕವಾಗಿ ಬಳಕೆಯಾಗುವ ಕಟ್ಟಡಗಳಿಗೆ ಕಾಲಕಾಲಕ್ಕೆ 'ಕಟ್ಟಡ ದೃಢತೆ ತಪಾಸಣೆ' ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸುವ ಹೊಸ ನೀತಿಯನ್ನು ದೆಹಲಿ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ರೇಖಾ ಗುಪ್ತಾ ತಿಳಿಸಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.