Indus Waters Treaty: ಸಿಂಧೂ ಜಲ ಒಪ್ಪಂದ ಮರುಜಾರಿಗೆ ಪಾಕ್ ಪ್ರಯತ್ನ
India Pakistan Ceasefire: ಕದನ ವಿರಾಮದ ಬಳಿಕ ಪಾಕ್ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕ್ರಮದ ವಿರುದ್ಧ ಅಮೆರಿಕದೊಂದಿಗೆ ಚರ್ಚಿಸಬೇಕು. ಭಾರತ ತಕ್ಷಣವೇ ಇದನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಪಾಕಿಸ್ತಾನದ ಜಲ ತಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.


ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಸದ್ಯ ಕದನ ವಿರಾಮ ಘೋಷಣೆ(India Pakistan Ceasefire) ಆಗಿದ್ದರೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ನದಿ ನೀರು ಒಪ್ಪಂದವನ್ನು(Indus Waters Treaty) ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ದಂಡನಾತ್ಮಕ ಕ್ರಮಗಳು ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಭಾರತ ತನ್ನ ದೃಢ ನಿರ್ಧಾರವನ್ನು ಈಗಾಗಲೇ ತಿಳಿಸಿದೆ. ಆದರೆ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ಪಾಕ್, ಭಾರತ ತಡೆ ಹಿಡಿದ ಸಿಂಧೂ ಜಲ ಒಪ್ಪಂದದ ಪುನರ್‌ಜಾರಿಗೂ ಅಮೆರಿಕ(america) ಮಧ್ಯಸ್ಥಿಕೆ ವಹಿಸುವಂತೆ ಮೊರೆಯಿಡುವ ನಿರೀಕ್ಷೆಯಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತ ಮೊದಲು ಕೈಗೊಂಡ ಮಹತ್ವದ ನಿರ್ಧಾರವೆಂದರೆ ಅದು ಸುಮಾರು 65 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕ್ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದ್ದ ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ ಹಾಕಿದ್ದು.
ಇದೀಗ ಕದನ ವಿರಾಮದ ಬಳಿಕ ಪಾಕ್ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕ್ರಮದ ವಿರುದ್ಧ ಅಮೆರಿಕದೊಂದಿಗೆ ಚರ್ಚಿಸಬೇಕು. ಭಾರತ ತಕ್ಷಣವೇ ಇದನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಪಾಕಿಸ್ತಾನದ ಜಲ ತಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
‘ಅಮೆರಿಕದ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ಕುಳಿತು, ಸಿಂಧೂ ಜಲ ಒಪ್ಪಂದದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಪಾಕಿಸ್ತಾನದ ಮಾಜಿ ಆಯುಕ್ತ ಸೈಯದ್ ಜಮಾತ್ ಅಲಿ ಶಾ ಹೇಳಿದ್ದಾರೆ.
ಏನಿದು ಸಿಂಧೂ ಒಪ್ಪಂದ?
ಸಿಂಧೂ ನದಿ ನೀರು ಒಪ್ಪಂದ (Indus Water Treaty -IWT) ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನದಿ ನೀರು ಹಂಚಿಕೆಯ ಒಂದು ಒಪ್ಪಂದ. 1960ರ ಸಪ್ಟೆಂಬರ್ 19ರಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದ್ದರು. ದೇಶಗಳ ನಡುವಿನ ನೀರು ಹಂಚಿಕೆ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಮನ್ನಣೆಗೆ ಕಾರಣವಾದ ಒಪ್ಪಂದವಿದು.
ಇದನ್ನೂ ಓದಿ Operation Sindoor: ಪಾಕಿಸ್ತಾನ ನಮ್ಮ ರಫೇಲ್ ಜೆಟ್ ಹೊಡೆದುರುಳಿಸಿದ್ಯ? ಏರ್ ಮಾರ್ಷಲ್ ಕೊಟ್ರು ಸ್ಪಷ್ಟನೆ