ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಕಾರ್ಮಿಕನ ಮೃತದೇಹ 120 ದಿನಗಳ ಬಳಿಕ ಭಾರತಕ್ಕೆ; ಕುಟುಂಬಸ್ಥರ ಆಕ್ರೋಶ
Worker’s Body Brought to India: ಸೌದಿ ಅರೇಬಿಯಾಗೆ ಹೊಟ್ಟೆಪಾಡಿಗೆ ತೆರಳಿದ್ದ ಝಾರ್ಖಂಡ್ ಮೂಲದ ಕಾರ್ಮಿಕ ಶವವಾಗಿ ಸ್ವದೇಶಕ್ಕೆ ಮರಳಿದ್ದಾನೆ. ಆತನ ಶವ ಮೃತಪಟ್ಟ 120 ದಿನಗಳ ಬಳಿಕ ಭಾರತಕ್ಕೆ ಮರಳಿದೆ. ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಹಾಗೂ ಅಪರಾಧಿಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಕಾರ್ಮಿಕನಿಗೆ ಗುಂಡೇಟು ಬಿದ್ದು ಮೃತಪಟ್ಟಿದ್ದ.
ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಕಾರ್ಮಿಕ ಮತ್ತು ಅವರ ಕುಟುಂಬ -
ರಾಂಚಿ, ಫೆ. 16: ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ (Saudi Arabia) ಅಪರಾಧಿಗಳು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೃತದೇಹವನ್ನು 120 ದಿನಗಳ ನಂತರ ಭಾರತಕ್ಕೆ ಕರೆತರಲಾಗಿದೆ. ಮೃತನನ್ನು ಜಾರ್ಖಂಡ್‌ನ ಗಿರಿದಿಹ್‌ನ ವಿಜಯ್ ಕುಮಾರ್ ಮಹ್ತೋ (27) ಎಂದು ಗುರುತಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ ವಿದ್ಯುತ್ ಪ್ರಸರಣ ಯೋಜನೆಯಲ್ಲಿ ಮಹ್ತೋ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 15ರಂದು ಮಹ್ತೋ ಕೆಲಸ ಮಾಡುತ್ತಿದ್ದಾಗ ಪೊಲೀಸರು ಮತ್ತು ಅಪರಾಧಿಗಳ ನಡುವೆ ಎನ್‌ಕೌಂಟರ್ ನಡೆದಾಗ ಗುಂಡೊಂದು ಮಹ್ತೋಗೆ ತಗುಲಿದೆ. ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡು ಮಹ್ತೋ ಬಳಿಕ ಮೃತಪಟ್ಟಿದ್ದರು.
ಘಟನೆ ನಡೆದು 4 ತಿಂಗಳ ನಂತರ ಮಹ್ತೋ ಮೃತದೇಹವು ರಾಂಚಿ ವಿಮಾನ ನಿಲ್ದಾಣವನ್ನು ತಲುಪಿತು. ಇದು ಅವರು ಹುಟ್ಟೂರು ಡುಮ್ರಿ ಬ್ಲಾಕ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯ್ತು. ಆರಂಭದಲ್ಲಿ ಕುಟುಂಬ ಸದಸ್ಯರು ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದರು. ಸೂಕ್ತ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಸೌದಿ ಅರೇಬಿಯಾದಲ್ಲಿ ಶವವಾಗಿ ಪತ್ತೆಯಾದ ಲಕ್ನೋ ಮಹಿಳೆ; ವರದಕ್ಷಿಣೆ ಕಿರುಕುಳ, ಕೊಲೆ ಆರೋಪ
ಮಾಧ್ಯಮಗಳೊಂದಿಗೆ ಮಾತನಾಡಿದ ಮೃತರ ಪತ್ನಿ ಬಸಂತಿ ದೇವಿ, ʼʼನಮಗೆ 7 ಮತ್ತು 5 ವರ್ಷದ 2 ಗಂಡು ಮಕ್ಕಳಿದ್ದಾರೆ. ನಮಗೆ ಸ್ಥಿರವಾದ ಆದಾಯದ ಮೂಲವಿಲ್ಲʼʼ ಎಂದು ಹೇಳಿದರು. ʼʼವಿಜಯ್ 2023ರಲ್ಲಿ ಖಾಸಗಿ ಗುತ್ತಿಗೆದಾರರ ಮೂಲಕ ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದರು. 2024ರ ಡಿಸೆಂಬರ್ 31ರಂದು ಮತ್ತೆ ಕರ್ತವ್ಯಕ್ಕೆ ಸೇರುವ ಮೊದಲು ಒಮ್ಮೆ ಮನೆಗೆ ಮರಳಿದ್ದರುʼʼ ಎಂದು ಅವರು ತಿಳಿಸಿದರು.
ಕುಟುಂಬವು ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ವಿಜಯ್ ಅವರ ತಂದೆ ಸೂರ್ಯ ನಾರಾಯಣ್ ಮಹ್ತೋ ವಿವರಿಸಿದರು. ʼʼಮಕ್ಕಳು ಮತ್ತು ವಿಜಯ್ ಅವರ ಅಂಗವಿಕಲ ಪತ್ನಿಯನ್ನು ಪೋಷಿಸುವುದು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಘಟನೆಯ ನಂತರ ಉದ್ಯೋಗದಾತರು ಕುಟುಂಬವನ್ನು ಸಂಪರ್ಕಿಸಿಲ್ಲ. ನಮಗೆ ಪರಿಹಾರ ನೀಡಬೇಕುʼʼ ಎಂದು ಅವರು ಆಗ್ರಹಿಸಿದರು.
ಯೆಮೆನ್ ಆಸ್ಪತ್ರೆಯ ಮೇಲೆ ಸೌದಿ ವೈಮಾನಿಕ ದಾಳಿ; 20 ಕ್ಕೂ ಅಧಿಕ ಸಾವು
ʼʼಸರ್ಕಾರಿ ನಿಬಂಧನೆಗಳ ಅಡಿಯಲ್ಲಿ, ಮೃತ ವಲಸೆ ಕಾರ್ಮಿಕರ ಕುಟುಂಬಗಳು ಅರ್ಜಿ ಸಲ್ಲಿಸಿದರೆ 5 ಲಕ್ಷ ರುಪಾಯಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗದಾತರಿಂದ ಪರಿಹಾರವು ಯುಎಇ ಕಾನ್ಸುಲೇಟ್ ಜನರಲ್ ಮತ್ತು ಸಂಬಂಧಪಟ್ಟ ಕಂಪನಿಯನ್ನು ಒಳಗೊಂಡ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತದೆʼʼ ಗಿರಿದಿಹ್ ಜಿಲ್ಲಾಧಿಕಾರಿ ರಾಮನಿವಾಸ್ ಯಾದವ್ ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಉದ್ಯೋಗದ ಕೊರತೆಯಿರುವುದರಿಂದ ಕಾರ್ಮಿಕರು ಮೂಲಸೌಕರ್ಯ ಮತ್ತು ವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡಲು ಗಲ್ಫ್ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಮೃತ ಕುಟುಂಬಕ್ಕೆ ಸಾಕಷ್ಟು ಪರಿಹಾರ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.