ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಬೀದಿ ನಾಯಿ, ಹಸಿರು ಪಟಾಕಿ, ಅರಾವಳಿ ಬೆಟ್ಟ...ಈ ವರ್ಷ ಸುಪ್ರೀಂ ಕೋರ್ಟ್‌ ನೀಡಿದ 10 ಪ್ರಮುಖ ತೀರ್ಪುಗಳು

ಜನಜೀವನದ ಮೇಲೆ ಪರಿಣಾಮ ಬೀರುವ ಹತ್ತು ಪ್ರಮುಖ ತೀರ್ಪುಗಳನ್ನು ಸುಪ್ರೀಂ ಕೋರ್ಟ್ 2025ರಲ್ಲಿ ನೀಡಿದೆ. ಸಾರ್ವಜನಿಕ ಸುರಕ್ಷತೆ, ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಪ್ರಮುಖವಾಗಿ ಬೀದಿ ನಾಯಿ, ಹಸಿರು ಪಟಾಕಿ, ಅರಾವಳಿ ಬೆಟ್ಟಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇವುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

2025ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ 10 ಪ್ರಮುಖ ತೀರ್ಪುಗಳು

ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -

ನವದೆಹಲಿ: ಸಾರ್ವಜನಿಕ ಸುರಕ್ಷತೆ, ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಈ ವರ್ಷದಲ್ಲಿ ಹಲವು ಮಹತ್ವಪೂರ್ಣ ತೀರ್ಪುಗಳನ್ನು ಸುಪ್ರೀಂ ಕೋರ್ಟ್ (supreme court) ನೀಡಿದೆ. ಬೀದಿ ನಾಯಿ (stray dog), ಹಸಿರು ಪಟಾಕಿ (Green Firecrackers), ಅರಾವಳಿ ಬೆಟ್ಟ (Aravalli Hills).. ಸೇರಿದಂತೆ 2025ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ 10 ಪ್ರಮುಖ ತೀರ್ಪುಗಳು ದೇಶಾದ್ಯಂತ ಕಾನೂನು, ಆಡಳಿತ ಮತ್ತು ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರಿದೆ. 2025ರಲ್ಲಿ (Year Ender 2025) ಸುಪ್ರೀಂ ಕೋರ್ಟ್ ನೀಡಿರುವ 10 ಪ್ರಮುಖ ತೀರ್ಪುಗಳ ಮಾಹಿತಿ ಇಲ್ಲಿವೆ.

ಮಸೂದೆ ಅನುಮೋದನೆಗೆ ಸಮಯ ತೆಗೆದುಕೊಳ್ಳಬಹುದು

ದೇಶದ ರಾಷ್ಟ್ರಪತಿ, ರಾಜ್ಯಗಳ ರಾಜಪಾಲರು ಯಾವುದೇ ಮಸೂದೆ ಅನುಮೋದಿಸಲು ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಬಹುದು. ಕಳೆದ ನವೆಂಬರ್‌ನಲ್ಲಿ ಮಸೂದೆ ಅನುಮೋದಿಸಲು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಕಟ್ಟುನಿಟ್ಟಾದ ಸಮಯ ಪಾಲನೆ ಮಾಡಲು ಒತ್ತಾಯಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ.

ಆಪರೇಷನ್ ಸಿಂದೂರ್ ವೇಳೆ ಬಂಕರ್‌ನಲ್ಲಿ ಅಡಗಿ ಕುಳಿತಿದ್ರಾ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ?

ಬೀದಿ ನಾಯಿ ನಿರ್ವಹಣೆ

ಕಳೆದ ನವೆಂಬರ್‌ ತಿಂಗಳಲ್ಲಿ ನೀಡಿರುವ ಮತ್ತೊಂದು ಮಹತ್ವದ ತೀರ್ಪು ಬೀದಿ ನಾಯಿಗಳ ನಿರ್ವಹಣೆ. ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿರುವ ಬೀದಿ ನಾಯಿಗಳನ್ನು ಗೊತ್ತುಪಡಿಸಿರುವ ಆಶ್ರಯಗಳಿಗೆ ಸ್ಥಳಾಂತರಿಸಿ ಅವುಗಳ ಜನನ ನಿಯಂತ್ರಣ ನಿಯಮಗಳನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಹಸಿರು ಪಟಾಕಿಗಳಿಗೆ ಅನುಮತಿ

ದೆಹಲಿ ಮತ್ತು ನೆರೆಯ ನಗರಗಳಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಕಳೆದ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ತೀವ್ರ ಮಾಲಿನ್ಯದಿಂದಾಗಿ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ನಿಷೇಧವನ್ನು ಈ ಸಂದರ್ಭದಲ್ಲಿ ಸಡಿಲಿಸಲಾಯಿತು.

ನಿಥಾರಿ ಸರಣಿ ಹತ್ಯೆ ಪ್ರಕರಣ

ನಿಥಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಮನೆ ಕೆಲಸಗಾರ ಸುರೇಂದ್ರ ಕೋಲಿಯನ್ನು ಖುಲಾಸೆಗೊಳಿಸಿ, ತಕ್ಷಣ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದು ಸುಮಾರು ಎರಡು ದಶಕಗಳಷ್ಟು ಹಳೆಯದಾದ ಪ್ರಕರಣವಾಗಿದೆ. 2005- 2006ರಲ್ಲಿ ನೋಯ್ಡಾದಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋಲಿ ಮತ್ತು ಆತನ ಉದ್ಯೋಗದಾತ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಅವರನ್ನು ದೋಷ ಮುಕ್ತಗೊಳಿಸಲಾಗಿದೆ.

ಮರ್ಯಾದಾ ಹತ್ಯೆ ಅಪರಾಧ

ಕಳೆದ ಏಪ್ರಿಲ್‌ನಲ್ಲಿ ಕನ್ನಗಿ-ಮುರುಗೇಶನ್ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿದಿದೆ. 2003ರ ಜುಲೈಯಲ್ಲಿ ತಮಿಳುನಾಡಿನ ಯುವ ದಂಪತಿಯ ಕ್ರೂರ ಹತ್ಯೆಗೆ ಸಂಬಂಧಿಸಿ 11 ಮಂದಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶಿಸಿತ್ತು.

ಮೀಸಲು ವರ್ಗದ ಅಭ್ಯರ್ಥಿಗಳ ನೇಮಕಾತಿ ನಿಯಮ

ಮೀಸಲಾತಿ ಅಡಿಯಲ್ಲಿ ವಯಸ್ಸಿನ ಸಡಿಲಿಕೆ ಪಡೆಯುವ ಮೀಸಲು ವರ್ಗದ ಅಭ್ಯರ್ಥಿಗಳನ್ನು ಅನಂತರ ಮೀಸಲಾತಿಯಿಲ್ಲದ (ಸಾಮಾನ್ಯ) ವರ್ಗದ ಖಾಲಿ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿದೆ. ಇದು ಎಸ್‌ಎಸ್‌ಸಿ ಕಾನ್ಸ್‌ಟೇಬಲ್ (ಜಿಡಿ) ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಬಾರ್ ಕೌನ್ಸಿಲ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯ

ಡಿಸೆಂಬರ್ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ಮುಂಬರುವ ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿಯನ್ನು ಖಚಿತಪಡಿಸಿಕೊಳ್ಳುವಂತೆ ಭಾರತೀಯ ಬಾರ್ ಕೌನ್ಸಿಲ್ (BCI) ಗೆ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ

ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರದ ವಕ್ಫ್ ಕಾನೂನುಗಳ ಪ್ರಮುಖ ನಿಬಂಧನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಿತು, ಇದರಲ್ಲಿ ದಾನಿಗಳು ಐದು ವರ್ಷಗಳ ಕಾಲ ಮುಸ್ಲಿಂ ಧರ್ಮವನ್ನು ಅನುಸರಿಸಬೇಕು ಮತ್ತು ಫೆಡರಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ನಾಮನಿರ್ದೇಶನ ಮಾಡಬೇಕು ಎಂಬ ಅವಶ್ಯಕತೆಗಳು ಸೇರಿವೆ. ಮತ್ತೊಂದು ಸ್ಥಗಿತಗೊಂಡ ನಿಬಂಧನೆಯು ಜಿಲ್ಲಾಧಿಕಾರಿಗಳಿಗೆ ಆಸ್ತಿಯು ವಕ್ಫ್ ಆಗಿ ಅರ್ಹತೆ ಪಡೆಯುತ್ತದೆಯೇ ಎಂದು ನಿರ್ಧರಿಸಲು ವ್ಯಾಪಕ ಅಧಿಕಾರವನ್ನು ನೀಡಿತು. ಇದು ಅಧಿಕಾರಗಳ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗ ಸೇವಾ ಆಕಾಂಕ್ಷಿಗಳಿಗೆ ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸ

ಕಳೆದ ಮೇ ತಿಂಗಳಲ್ಲಿ ನೀಡಿರುವ ತೀರ್ಪಿನಲ್ಲಿ ಹೊಸ ಕಾನೂನು ಪದವೀಧರರು ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದೆ. ಆರಂಭಿಕ ಹಂತದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸವನ್ನು ಕಡ್ಡಾಯಗೊಳಿಸಿದೆ.

ಅಪರೂಪದಲ್ಲಿ ಅಪರೂಪದ ಘಟನೆ; ಮೊಸಳೆ ಬಾಯಿಗೆ ಸಿಕ್ಕ ಸಹಚರನನ್ನು ಕಾಪಾಡಲು ನದಿಗೆ ಹಾರಿದ ಮಂಗಗಳು: ರೋಮಾಂಚನಕಾರಿ ದೃಶ್ಯವನ್ನು ನೀವೂ ನೋಡಿ

ಅರಾವಳಿ ಬೆಟ್ಟಗಳು

ಅರಾವಳಿ ಬೆಟ್ಟಗಳಲ್ಲಿ ನಡೆಯುವ ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸುಪ್ರೀಂ ಕೋರ್ಟ್ ಒಂದು ಮಹತ್ವದ ಆದೇಶವನ್ನು ನೀಡಿದೆ. ಸ್ಥಳೀಯ ಭೂಪ್ರದೇಶದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರದಲ್ಲಿರುವ ಅರಾವಳಿ ಬೆಟ್ಟಗಳು ಅಂತರ್ಜಲವನ್ನು ಮರುಪೂರಣಗೊಳಿಸುವಲ್ಲಿ ಮತ್ತು ಥಾರ್ ಮರುಭೂಮಿಯಿಂದ ಬರುವ ಧೂಳಿನ ಬಿರುಗಾಳಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸುಸ್ಥಿರ ಗಣಿಗಾರಿಕೆಗಾಗಿ ಸಮಗ್ರ ನಿರ್ವಹಣಾ ಯೋಜನೆ ಸಿದ್ಧಪಡಿಸುವವರೆಗೆ ಹೊಸ ಗಣಿಗಾರಿಕೆಗೆ ಗುತ್ತಿಗೆ ನೀಡುವುದನ್ನು ನಿಷೇಧಿಸಿ ಆದೇಶ ನೀಡಿದೆ.