Readers Colony: ರಸಗೊಬ್ಬರಕ್ಕೆ ಮುಂಜಾಗ್ರತೆ
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಮುಂಗಾರು ಆರಂಭವಾಗುತ್ತಿದೆ. ರೈತರು ಬಿತ್ತನೆ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ, ಇರಾನ್ ಅಮೆರಿಕ ನಡುವಿನ ಉದ್ವಿಗ್ನತೆಯ ಬಿಸಿ ರಸಗೊಬ್ಬರದ ಮೇಲೂ ತಟ್ಟುವ ಆತಂಕ ಇದೀಗ ರೈತರಲ್ಲಿ ಮನೆ ಮಾಡಿದೆ. ಈ ಕುರಿತು ಸ್ವತಃ ಕೃಷಿ ಸಚಿವ ಚಲುವ ನಾರಾಯಣ ಸ್ವಾಮಿಯವರೇ ತುಟಿ ಬಿಚ್ಚಿದ್ದು, ರಾಜ್ಯಕ್ಕೆ ಅಗತ್ಯ ಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದಿದ್ದಾರೆ.
-
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಮುಂಗಾರು ಆರಂಭವಾಗುತ್ತಿದೆ. ರೈತರು ಬಿತ್ತನೆ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ, ಇರಾನ್ ಅಮೆರಿಕ ನಡುವಿನ ಉದ್ವಿಗ್ನತೆಯ ಬಿಸಿ ರಸಗೊಬ್ಬರದ ಮೇಲೂ ತಟ್ಟುವ ಆತಂಕ ಇದೀಗ ರೈತರಲ್ಲಿ ಮನೆ ಮಾಡಿದೆ. ಈ ಕುರಿತು ಸ್ವತಃ ಕೃಷಿ ಸಚಿವ ಚಲುವ ನಾರಾಯಣ ಸ್ವಾಮಿಯವರೇ ತುಟಿ ಬಿಚ್ಚಿದ್ದು, ರಾಜ್ಯಕ್ಕೆ ಅಗತ್ಯ ಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದಿದ್ದಾರೆ.
ಹಾಗಾಗಿ ಬೆಂಕಿ ಬಿದ್ದ ಮೇಲೆ ಬಾವಿ ತೋಡುವುದನ್ನು ಬಿಟ್ಟು ಸರಕಾರ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಪರ್ಯಾಯ ವ್ಯವಸ್ಥೆಗೆ ಮುಂದಾಗುವುದು ಅನಿವಾರ್ಯ. ಇಲ್ಲವಾದಲ್ಲಿ ರೈತರಿಗೆ ಗೊಬ್ಬರದ ಸಮಸ್ಯೆ ಬಿಸಿ ತಟ್ಟುತ್ತದೆ. ಕೊನೆಗೆ ಎಲ್ಲ ಮುಗಿದ ಮೇಲೆ ರಾಜ್ಯ ಸರಕಾರ ಕೇಂದ್ರದಿಂದ ಗೊಬ್ಬರ ಬರುತ್ತಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುವುದಕ್ಕಿಂತಲೂ ಮುಂಚಿತವಾಗಿ ಎಚ್ಚೆತ್ತುಕೊಳ್ಳಬೇಕಿದೆ.
- ಕೆ.ಎನ್. ರಂಗನಾಥ್, ಚಿತ್ರದುರ್ಗ
ಇದನ್ನೂ ಓದಿ: Readers Colony: ಅಭಿವೃದ್ಧಿಗೆ ಹಣ ಬಳಸಿ
ಇಷ್ಟವಾದ ಎರಡು ಅಂಕಣಗಳು
ನಿನ್ನೆಯ ಪತ್ರಿಕೆಯಲ್ಲಿ (ಮೇ 22) ವಿಶ್ವೇಶ್ವರ ಭಟ್ಟರ ವಾರದ ಅಂಕಣ ‘ನೂರೆಂಟು ವಿಶ್ವ’ ನಮ್ಮ ಪ್ರಧಾನ ಮಂತ್ರಿಗಳು ನಡೆಸುವ ಪತ್ರಿಕಾಗೋಷ್ಠಿಯ ಉದ್ದೇಶ, ಮಹತ್ವ ಮತ್ತದರ ಸಂವಿಧಾನಾತ್ಮಕ ಚೌಕಟ್ಟಿನ ಕುರಿತು ಹೇಳುತ್ತದೆ. ಭಟ್ಟರು ಪ್ರತಿಪಾದಿಸಿದಂತೆ ಪತ್ರಿಕಾ ಗೋಷ್ಠಿಯನ್ನು ಪ್ರಧಾನಿ ನಡೆಸಲೇ ಬೇಕಂತಿಲ್ಲ. ಪ್ರಜೆಗಳಿಗೆ ಹೇಳಬೇಕಾದ ಸಂದೇಶವನ್ನು ಮೋದಿಯವರು ಅನೇಕ ಸಾಮಾ ಜಿಕ ಜಾಲತಾಣಗಳ, ಮಾಧ್ಯಮಗಳ ಮೂಲಕ ಹೇಳುತ್ತಾ ಬಂದಿದ್ದಾರೆ. ಮನ್ ಕೀ ಬಾತ್ ಎಂಬ ವಿಶಿಷ್ಟ ಮಾಧ್ಯಮದ ಮೂಲಕ ಮನದಾಳದ ಮಾತುಗಳನ್ನು ಒಂದು ದಶಕದಿಂದ ಹಂಚಿಕೊಳ್ಳು ತ್ತಿದ್ದಾರೆ.
ಇನ್ನು, ‘ಗಂಟಾಘೋಷ’ ಅಂಕಣದಲ್ಲಿ ಗುರುರಾಜ್ ಗಂಟಿಹೊಳೆ ಅವರು ರಾಜ್ಯದಲ್ಲಿ ಪ್ರಸ್ತುತ ವಿರುವ ಗ್ಯಾರಂಟಿಯ ಅಲ್ಪ ವಯಸ್ಸು, ಅದು ತರುವ ದೀರ್ಘಕಾಲದ ಆರ್ಥಿಕ ದಿವಾಳಿತನ ಬಗ್ಗೆ ಒಂದು ಕುಟುಂಬದ ಮುಖ್ಯಸ್ಥ ಮಾಡುವ ಎರಡು ವಿಧದ ಸಾಲದ ಉದಾಹರಣೆ ನೀಡಿ ವಿವರಿಸಿದ್ದಾರೆ.
ಮನೆಯ ಮೇಲ್ಛಾವಣಿ ಮಾರಿ ಹಬ್ಬದ ಊಟ ಮಾಡಿ ನಾವೆಷ್ಟು ದಿನ ಬದುಕುತ್ತೇವೆ ? ಈಗಲೇ ಜಾಗೃತರಾಗೋಣ. ಭಟ್ಟರ ಮನದಾಳದ ಸ್ಪಷ್ಟ ನೇರ ನುಡಿ, ಗಂಟಿಹೊಳೆ ಅವರ ಎಚ್ಚರಿಕೆ ಮಾತು ಎರಡೂ ಇಷ್ಟವಾದವು.
- ಲಕ್ಷ್ಮೀಕಾಂತ ಪಾಟೀಲ, ಮೈಸೂರು
ಪಟ್ಟದ ಆನೆ ತರಲು ನಿರ್ಲಕ್ಷ್ಯ ಏಕೆ?
ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನ ಪಟ್ಟದ ಆನೆ ಗೌರಿ ಕಾಲಿನ ಗಾಯ ಹಾಗೂ ಅನಾರೋಗ್ಯದಿಂದ ಬಳಲಿದ ಕಾರಣ ಸೂಕ್ತ ಚಿಕಿತ್ಸೆಗಾಗಿ 2017-2018ರಲ್ಲಿ ಬೆಂಗಳೂರಿನ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರಕ್ಕೆ ಉತ್ತಮ ಆರೈಕೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ವರ್ಗಾಯಿಸಿದ್ದು ಸರಿಯಷ್ಟೇ. ಈಗ, ಸರಿ ಸುಮಾರು 8-9 ವರ್ಷ ಕಳೆದಿದ್ದು ಆನೆ ಗೌರಿ ಇನ್ನೂ ವಾಪಸ್ ಕರೆ ತಂದಿಲ್ಲ. ತರದೇ ಇರಲು ಕಾರಣವು ತಿಳಿಯುತ್ತಿಲ್ಲ.
ಸದ್ಯ, ಆನೆಯ ಪ್ರಸ್ತುತ ಸ್ಥಿತಿ ಗುಣಮುಖವಾಗಿ ಚೆನ್ನಾಗಿದೆ ಎನ್ನುವ ಮಾಹಿತಿ ಇದೆ. ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುವ ಸಾಂಪ್ರದಾಯಿಕ ಕೈಂಕರ್ಯಗಳು ಅಭಿಷೇಕಕ್ಕಾಗಿ ಕಪಿಲಾ ನದಿಯಿಂದ ನೀರನ್ನು ತರುವುದು ಹಾಗೂ ಉತ್ಸವ ಮೆರವಣಿಗೆಗಳಿಗೆಲ್ಲ ಆನೆಯ ಬಳಕೆಯಿದ್ದು, ಸದಾ ಮುಂಚೂಣಿಯಲ್ಲಿ ಕಾಣುತ್ತಿದ್ದ ಗೌರಿ ಆನೆ ಇಲ್ಲದೆ ತೊಂದರೆ ಆಗುತ್ತಿದೆ. ಗೌರಿ ಆನೆ ತಂಗಿದ್ದ ದೇವಸ್ಥಾನದ ಮುಂಭಾಗದ ಶೆಡ್ ಕೂಡ ಖಾಲಿಯಾಗಿ ಬಿಕೋ ಎನ್ನುತ್ತಿದ್ದು ಆಕರ್ಷಣಾ ಕೇಂದ್ರ ಬಿಂದುವಾಗಿದ್ದ ಈ ಗೌರಿಯ ದರ್ಶನಕ್ಕೆ ಆಗಾಗ ಬರುತ್ತಿದ್ದ ಶಾಲಾ ಮಕ್ಕಳು, ಭಕ್ತ ಸಮೂಹ ಸೇರಿದಂತೆ ಎಲ್ಲರಿಗೂ ಗೌರಿಯ ನೋಡಲಾಗದೆ ನಿರಾಸೆಯಾಗಿದೆ.
ಧಾರ್ಮಿಕ ಹಾಗೂ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ಈ ದೇಗುಲ ಅತಿ ಹೆಚ್ಚು ಆದಾಯ ಬರುವ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ವಾರ್ಷಿಕ ಆದಾಯ ಸರಿ ಸುಮಾರು 10-15 ಕೋಟಿ ಇಷ್ಟೆಲ್ಲ, ಭವ್ಯ ಹಿನ್ನೆಲೆ, ಇತಿಹಾಸ ಸಂಪತ್ತು ಇದ್ದರೂ ನಂಜನಗೂಡು ಶ್ರೀಕಂಠೇಶ್ವರ ದೇಗುಲ ಆಡಳಿತ ಮಂಡಳಿ ಆನೆ ಕರೆ ತಂದು ಸಾಕಲು ಹಿಂದೇಟು ಹಾಕುತ್ತಿರುವು ದಾದರೂ ಯಾವ ಕಾರಣಕ್ಕೆ? ಅಥವಾ ಆನೆ ಸಾಕಲು ಹಣ ಇಲ್ಲವೇ? ಎನ್ನುವುದು ಇಂದಿಗೂ ಕೂಡ ಅರ್ಥವಾಗದ ಯಕ್ಷಪ್ರಶ್ನೆ. ಇನ್ನಾದರೂ ಸಂಬಂಧಪಟ್ಟವರು ಖುದ್ದಾಗಿ ತುರ್ತು ಗಮನವಹಿಸ ಬೇಕಿದೆ.
- ಅನಿಲ್ ಕುಮಾರ್, ನಂಜನಗೂಡು
ಭೋಜಶಾಲೆ ತೀರ್ಪು ಗಮನಾರ್ಹ
ಭೋಜಶಾಲೆ ಸರಸ್ವತಿ ದೇಗುಲದ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಧ್ಯಪ್ರದೇಶದ ಧಾರ್ ಜಿಯ ವಿವಾದಿತ ಭೋಜಶಾಲಾ ಸರಸ್ವತಿ ದೇಗುಲ ಹಿಂದುಗಳಿಗೆ ಸೇರಿದ್ದು ಎಂಬ ತೀರ್ಪು ನಿಜಕ್ಕೂ ಅತ್ಯಂತ ಸ್ವಾಗತಾರ್ಹ. 11ನೇ ಶತಮಾನದಲ್ಲಿ ಪರಮಾರ ರಾಜವಂಶಸ್ಥ ಭೋಜರಾಜ ಈ ದೇವಾಲಯವನ್ನು ನಿರ್ಮಿಸಿದ ಬಗ್ಗೆ ಐತಿಹ್ಯ ಹಾಗು ದಾಖಲೆಗಳಿವೆ. ಈ ಸಂಬಂಧದ ವೈeನಿಕ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು. ವಿವಾದಿತ ಸ್ಥಳದಲ್ಲಿ 98 ದಿನಗಳ ವೈಜ್ಞಾನಿಕ ಹಾಗು ರಾಸಾಯನಿಕ ಸಮೀಕ್ಷೆ ಕೈಗೊಂಡ ಪುರಾತತ್ವ ಇಲಾಖೆ ಅತ್ಯಂತ ಮಹತ್ವ ಪೂರ್ಣ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಕೋರ್ಟ್ ಪ್ರಸ್ತುತ ತೀರ್ಪು ಅಷ್ಟೇ ಅಲ್ಲ, ಬ್ರಿಟಿಷರು ಕೊಂಡೊಯ್ದು ಲಂಡನ್ ಮ್ಯೂಸಿಯಂನಲ್ಲಿರಿಸಿರುವ ದೇವಿಯ ವಿಗ್ರಹವನ್ನು ಹಿಂಪಡೆದು ಪ್ರತಿಷ್ಠಾಪಿಸಲು ಸೂಚಿಸಿದೆ. ಸನಾತನ ಇತಿಹಾಸದ ಇದು ಅತ್ಯಂತ ಮಹತ್ವದ ತೀರ್ಪು.
- ರಾ. ರಾಮಾರಾಧ್ಯ, ಮೈಸೂರು
ವಿಟಿಯು ನಡೆ ಶ್ಲಾಘನೀಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಡ್ರೋನ್ ತರಬೇತಿ ಮತ್ತು ಡಿಜಿಸಿಎ ಲೈಸೆನ್ಸ್ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಇದಕ್ಕೆ ಸುಮಾರು 1 ಲಕ್ಷ ವೆಚ್ಚವಾಗಲಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಗಗನಕುಸುಮವಾಗಿತ್ತು. ಪ್ರಸ್ತುತ ಜಾಗತಿಕವಾಗಿ ಡ್ರೋನ್ ಮಾರು ಕಟ್ಟೆಯು ಶೇಕಡಾ 20ಕ್ಕಿಂತಲೂ ಹೆಚ್ಚಿನ ವಾರ್ಷಿಕ ಬೆಳವಣಿಗೆಯನ್ನು ಕಾಣುತ್ತಿದೆ.
ರಕ್ಷಣೆ, ಕೃಷಿ ಮತ್ತು ವಿತರಣಾ ವಲಯಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿ ಯಾಗುತ್ತಿವೆ. ಇಂತಹ ಸಮಯದಲ್ಲಿ ವಿಟಿಯುನ ಈ ಉಚಿತ ಉದ್ಯೋಗಾಧಾರಿತ ತರಬೇತಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಆಸರೆಯಾಗಿದೆ. ಕರ್ನಾಟಕದ ಇತರ ಎಲ್ಲಾ ವಿಶ್ವವಿದ್ಯಾ ಲಯಗಳೂ ಸಹ ಇದೇ ಮಾದ ರಿಯನ್ನು ಅಳವಡಿಸಿಕೊಂಡು ತಮ್ಮ ವಿದ್ಯಾರ್ಥಿಗಳಿಗೆ ಇಂತಹ ಅತ್ಯಾಧುನಿಕ ತರಬೇತಿಗಳನ್ನು ನೀಡಬೇಕು. ಇದರಿಂದ ನಮ್ಮ ರಾಜ್ಯದ ಯುವಕರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ.
- ಡಾ. ವಿಜಯಕುಮಾರ್ ಎಚ್.ಕೆ
ಕೊಲ್ಲುವ ವಿಧೇಯಕ?
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಕೊಲ್ಲಲು ಇರಾನ್ ಸರ್ಕಾರ ‘ಕಿಲ್ ಟ್ರಂಪ್’ ಯೋಜನೆಯಡಿ 563 ಕೋಟಿ ರೂಪಾಯಿ ಮೌಲ್ಯದ ಬಹುಮಾನ ಘೋಷಿಸಿ ವಿಧೇಯಕ ಸಿದ್ಧಪಡಿಸುತ್ತಿದೆ ಎಂಬ ಮಾಧ್ಯಮಗಳ ವರದಿ ಕುತೂಹಲಕಾರಿಯಾಗಿದೆ. ಇರಾನಿನ ಸರ್ವೋಚ್ಚ ನಾಯಕರಾಗಿದ್ದ ಖಮೇನಿಯವರ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಇರಾನ್ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಗೊಂಡ ಸರ್ಕಾರ, ಈ ರೀತಿಯ ಕೊಲೆ ವಿಧೇಯಕವನ್ನು ತನ್ನ ದೇಶದ ಸಂಸತ್ತಿನಲ್ಲಿ ಮಂಡಿಸಬಹುದೇ?
- ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು