Varsha Bhavisya: ಎಚ್ಚರ; ಮಕರ ರಾಶಿಯವರಿಗೆ ಅಕ್ಟೋಬರ್ ಬಳಿಕ ಸಮಸ್ಯೆ ಎದುರಾಗಬಹುದು
2026ರಲ್ಲಿ ಶನಿ, ಗುರು, ರಾಹು–ಕೇತುಗಳ ಮಹತ್ವದ ಸಂಚಾರದಿಂದ ಮಕರ ರಾಶಿಯವರಿಗೆ ಜೀವನದ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾದರೂ ಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನಮಾನ ವೃದ್ಧಿ, ಹೊಸ ಅವಕಾಶಗಳು ಲಭ್ಯವಾಗಬಹುದು.
ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ -
ಬೆಂಗಳೂರು, ಜ. 20: 2026ರಲ್ಲಿ ಶನಿ, ಗುರು, ರಾಹು-ಕೇತು ಸೇರಿದಂತೆ ಅನೇಕ ಪ್ರಮುಖ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಲಿವೆ. ಗ್ರಹಗಳ ಈ ಸಂಚಾರವು ಪ್ರತಿ ರಾಶಿಚಕ್ರದ ಜನರ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ದ್ವಾದಶ ರಾಶಿಗಳಲ್ಲಿ 10ನೇ ಸ್ಥಾನದಲ್ಲಿರುವ ಮಕರ ರಾಶಿಯ ಜನರಿಗೆ ಹೊಸ ವರ್ಷದಲ್ಲಾಗುವ ಒಳಿತುಗಳೇನು? ಕೆಡಕುಗಳೇನು? ಎಂಬ ಬಗ್ಗೆ ವಿಶ್ವವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ವಿವರಿಸಿದ್ದಾರೆ.
ಅವರ ಪ್ರಕಾರ, ಈ ವರ್ಷವು ಮಕರ ರಾಶಿಯವರ ಜೀವನದಲ್ಲಿ ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಆತ್ಮಾವಲೋಕನ ಮತ್ತು ಶಾಶ್ವತ ಬದಲಾವಣೆಯ ಸಂಯೋಜನೆಯನ್ನು ತರುತ್ತದೆ. ಈ ವರ್ಷ ನಿಮ್ಮ ಪ್ರಯತ್ನಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಹೊರ ಹೊಮ್ಮುತ್ತದೆ.
ಆರ್ಥಿಕ ವಿಚಾರದಲ್ಲಿ ಎಚ್ಚರವಹಿಸಿ
2026 ಮಾರ್ಚ್ 19ಕ್ಕೆ ಪರಾಭವ ಸಂವತ್ಸರ ಪ್ರಾರಂಭವಾಗಲಿದ್ದು, ಈ ಮಕರ ರಾಶಿಯವರು ಆರ್ಥಿಕ ವಿಚಾರದಲ್ಲಿ ಪರಾಭವ ಹೊಂದುವಂತಹ ಸಾಕಷ್ಟು ಸಾಧ್ಯತೆಗಳಿವೆ. ಆದ್ದರಿಂದ ಈ ಹೊಸ ವರ್ಷದಲ್ಲಿ ಮಕರ ರಾಶಿಯವರು ಆರ್ಥಿಕ ವಿಚಾರದಲ್ಲಿ ಬಹಳ ಎಚ್ಚರವಹಿಸಬೇಕಾದ ಅವಶ್ಯಕತೆ ಇದೆ.
ಅತಿಯಾದ ಆತ್ಮವಿಶ್ವಾಸ ಬೇಡ
ಈ ರಾಶಿಯವರಿಗೆ 2026ರ ಜೂನ್ 2ರಿಂದ ಆರು ತಿಂಗಳ ಕಾಲ ಗುರುಬಲ ಇರಲಿದ್ದು, ಡಿಸೆಂಬರ್ ತಿಂಗಳು ಅದು ತಪ್ಪಲಿದೆ. ನಷ್ಟದ ಮನೆ ಯಜಮಾನನಾದಂತಹ ಗುರುವು ಗುರುಬಲ ಇದ್ದಾಗ ಒಂದಿಷ್ಟು ಸಂಪತ್ತನ್ನು ನೀಡಿ, ಗುರುಬಲ ತಪ್ಪಿದ ಕಾಲಕ್ಕೆ ಆ ಸಂಪತ್ತು ಜಾರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಇರಲಿ. ಆದರೆ ಆತಿಯಾದ ಆತ್ಮವಿಶ್ವಾಸ ಬೇಡ.
ಆರೋಗ್ಯದ ಬಗ್ಗೆಯೂ ಇರಲಿ ಎಚ್ಚರ
ಮಕರ ರಾಶಿಯ ಧನಸ್ಥಾನದಲ್ಲಿ ಸರ್ಪದ ನೆಲೆ ಇದ್ದು, ರಾಹು ಅಲ್ಲಿಯೇ ಕುಳಿತಿದ್ದಾನೆ. ಅಲ್ಲದೇ ಕೇತುವಿನ ಉಪಸ್ಥಿತಿಯೂ ಕೂಡ ತೊಂದರೆದಾಯಕ ರೀತಿಯಲ್ಲೇ ಸಿಂಹ ರಾಶಿಯಲ್ಲಿದ್ದು, ವ್ಯಾಧಿಗಳನ್ನು ತರುವಂತ ಕೆಲಸ ಮಾಡಲಿದ್ದಾನೆ. ಆದ್ದರಿಂದ ಮಕರ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅವಶ್ಯತೆ ಇದೆ.
ಅಕ್ಟೋಬರ್ ಬಳಿಕ ಕಂಟಕ!
ಈ ರಾಶಿಯವರಿಗೆ ಎರಡನೇ ಮನೆಯಲ್ಲಿರುವ ರಾಹು ಇರುವುದರಿಂದ ಗುರುವು ಆರು ತಿಂಗಳ ಕಾಲ ಆರೋಗ್ಯವಾಗಿರಲು ಶಕ್ತಿ ನೀಡಿದರೂ ಸಹ, ಅಕ್ಟೋಬರ್ ನಂತರ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ.
ಶನೈಶ್ಚರನ ಅನುಗ್ರಹ
ಈ ರಾಶಿಯುವರಿಗೆ ರಾಹು, ಕೇತುವಿನ ಮೂಲಕ ಅನೇಕ ಅಪಾಯಗಳು ಎದುರಾದರೂ ಸಹ ಮಕರ ರಾಶಿಯ ಯಜಮಾನನಾದ ಶನೈಶ್ಚರ ಮೀನರಾಶಿಯಲ್ಲಿ ಗಟ್ಟಿಯಾಗಿ ಕುಳಿತಿರುವುದರಿಂದ, ಶನೇಶ್ಚರ ದಿವ್ಯ ಅನುಗ್ರಹದಿಂದ ಹಾಗೂ ಜೂನ್‌ನಿಂದ ಅಕ್ಟೋಬರ್‌ವರೆಗೂ ಗುರುಬಲ ಇರುವುದರಿಂದ ಬಹಳಷ್ಟು ನರಳಾಟದ ದಿನಗಳು ಇರುವುದಿಲ್ಲ.
ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು
2026ರಲ್ಲಿ ಮಕರ ರಾಶಿಯವರ ಜಾತಕದಲ್ಲಿ ಚೈತನ್ಯದಾಯಕವಾದ ಶುಕ್ರ ಹಾಗೂ ಮಂಗಳ ಇದ್ದಲ್ಲಿ, ಇವರು ಅರೆತು, ಜಾಗರೂಕರಾಗಿ ಹೆಜ್ಜೆಗಳನ್ನಿಟ್ಟರೆ ವ್ಯಾಪಾರ-ವ್ಯವಹಾರ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿ ಗೆಲುವು, ಯಶಸ್ಸು ದೊರೆಯಲಿದೆ.