Angaraka Sankashti Chaturthi 2026: ಮಂಗಳವಾರದ ಸಂಕಷ್ಟ ಚತುರ್ಥಿಗೆ ವಿಶೇಷ ಮಹತ್ವ: ಗಣೇಶ ಪೂಜೆ, ವ್ರತದ ಸಂಪೂರ್ಣ ವಿವರ ಇಲ್ಲಿದೆ
ಅಂಗಾರಕ ಸಂಕಷ್ಟ ಚತುರ್ಥಿ 2026ರ ಸೆಪ್ಟೆಂಬರ್ 29ರಂದು ಮಂಗಳವಾರ ಆಚರಿಸಲಾಗುತ್ತಿದೆ. ಮಂಗಳವಾರದಂದು ಸಂಕಷ್ಟ ಚತುರ್ಥಿ ಬಂದಿರುವುದರಿಂದ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ವ್ರತ ಆಚರಿಸಿ ಹಾಗೂ ಚಂದ್ರನಿಗೆ ಅರ್ಘ್ಯ ನೀಡುವುದು ಈ ದಿನದ ಪ್ರಮುಖ ಆಚರಣೆಗಳಾಗಿವೆ.
ಗಣೇಶ ಪೂಜೆ -
ಬೆಂಗಳೂರು: ಗಣಪತಿಯ ಆರಾಧನೆಗೆ ಸಮರ್ಪಿತವಾದ ಸಂಕಷ್ಟ ಚತುರ್ಥಿ (Sankashti Chaturthi) ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮಹತ್ವದ ದಿನವಾಗಿದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಬರುವ ಈ ವ್ರತವನ್ನು ವಿಘ್ನರಾಜ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಬಾರಿ ಚತುರ್ಥಿ ತಿಥಿಯು ಮಂಗಳವಾರದಂದು ಬಂದಿರುವ ಹಿನ್ನೆಲೆಯಲ್ಲಿ ಇದಕ್ಕೆ ಅಂಗಾರಕ ಸಂಕಷ್ಟ ಚತುರ್ಥಿ ಎಂಬ ವಿಶೇಷ ಹೆಸರು ಬಂದಿದೆ. ಈ ದಿನ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ವ್ರತ ಆಚರಿಸಿ ಹಾಗೂ ಚಂದ್ರನಿಗೆ ಅರ್ಘ್ಯ ನೀಡುವುದು ಸಂಪ್ರದಾಯವಾಗಿದೆ. ಧಾರ್ಮಿಕ ನಂಬಿಕೆಯಂತೆ, ಅಂಗಾರಕ ಸಂಕಷ್ಟ ಚತುರ್ಥಿಯ ಆಚರಣೆಯು ಜೀವನದ ವಿಘ್ನಗಳು ದೂರವಾಗಿ ನೆಮ್ಮದಿ, ಸಕಾರಾತ್ಮಕತೆ ಮತ್ತು ಸಮೃದ್ಧಿ ದೊರೆಯಲು ಸಹಕಾರಿಯಾಗುತ್ತದೆ. 2026ರ ಅಂಗಾರಕ ಸಂಕಷ್ಟ ಚತುರ್ಥಿಯ ದಿನಾಂಕ, ತಿಥಿ, ಪೂಜಾ ವಿಧಾನ, ಮಹತ್ವ ಮತ್ತು ಮಂತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂಗಾರಕ ಸಂಕಷ್ಟ ಚತುರ್ಥಿ 2026ರ ದಿನಾಂಕ ಮತ್ತು ಸಮಯ
ದಿನಾಂಕ: ಸೆಪ್ಟೆಂಬರ್ 29, 2026, ಮಂಗಳವಾರ
ಸಂಕಷ್ಟ ಚತುರ್ಥಿಯ ಹೆಸರು: ಅಂಗಾರಕ ಸಂಕಷ್ಟ ಚತುರ್ಥಿ / ವಿಘ್ನರಾಜ ಸಂಕಷ್ಟ ಚತುರ್ಥಿ
ಚತುರ್ಥಿ ತಿಥಿ ಆರಂಭ: ಸೆಪ್ಟೆಂಬರ್ 29, ಸಂಜೆ 5:09
ಚತುರ್ಥಿ ತಿಥಿ ಅಂತ್ಯ: ಸೆಪ್ಟೆಂಬರ್ 30, ಮಧ್ಯಾಹ್ನ 2:55
ಚಂದ್ರೋದಯ: ಸೆಪ್ಟೆಂಬರ್ 29, ರಾತ್ರಿ 8.11
ಅಂಗಾರಕ ಸಂಕಷ್ಟ ಚತುರ್ಥಿಯಂದು ಪೂಜೆ ಹೇಗೆ ಮಾಡಬೇಕು?
ಸಂಕಷ್ಟ ಚತುರ್ಥಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ ವ್ರತ ಆಚರಿಸುವ ಸಂಕಲ್ಪ ಮಾಡಿಕೊಳ್ಳಬೇಕು.
ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಿ ದೀಪ ಹಚ್ಚಬೇಕು. ಗಣಪತಿಗೆ ನೀರು, ಕುಂಕುಮ, ಕೆಂಪು ಹೂವು ಹಾಗೂ ಗರಿಕೆಯನ್ನು ಅರ್ಪಿಸಬಹುದು. ಧೂಪ-ದೀಪಗಳಿಂದ ಗಣೇಶನನ್ನು ಆರಾಧಿಸಬೇಕು.
ಗಣೇಶನಿಗೆ ಪ್ರಿಯವಾದ ಮೋದಕ, ಲಡ್ಡು ಸೇರಿದಂತೆ ಸಾಂಪ್ರದಾಯಿಕ ನೈವೇದ್ಯಗಳನ್ನು ಸಮರ್ಪಿಸಬಹುದು. ಕುಟುಂಬದ ಆಚರಣೆಗಳಿಗೆ ಅನುಗುಣವಾಗಿ ಹಣ್ಣುಗಳು ಹಾಗೂ ಇತರ ಪೂಜಾ ಪದಾರ್ಥಗಳನ್ನು ಅರ್ಪಿಸುವ ಸಂಪ್ರದಾಯವೂ ಇದೆ.
ಭಕ್ತರು ದಿನವಿಡೀ ಉಪವಾಸ ಅಥವಾ ತಮ್ಮ ಆಚರಣೆಗೆ ಅನುಗುಣವಾಗಿ ವ್ರತವನ್ನು ಪಾಲಿಸುತ್ತಾರೆ. ಸಂಜೆ ಮತ್ತೆ ಗಣೇಶನಿಗೆ ಪೂಜೆ ಸಲ್ಲಿಸಿ ಸಂಕಷ್ಟ ಚತುರ್ಥಿ ವ್ರತ ಕಥೆಯನ್ನು ಓದುವುದು ಅಥವಾ ಕೇಳುವುದು ಶುಭಕರವೆಂದು ನಂಬಲಾಗಿದೆ.
Ganesha Mantra: ಬುಧವಾರ ಈ ಗಣೇಶ ಮಂತ್ರ ಪಠಿಸಿದರೆ ಜೀವನದಲ್ಲಿ ಶುಭಫಲ ಸಿಗೋದು ಖಚಿತ
ಗಣೇಶ ಮಂತ್ರಗಳನ್ನು ಪಠಿಸಿ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು. ರಾತ್ರಿ ಚಂದ್ರೋದಯವಾದ ನಂತರ ಚಂದ್ರನ ದರ್ಶನ ಮಾಡಿ, ಚಂದ್ರನಿಗೆ ಅರ್ಘ್ಯ ಅರ್ಪಿಸಿ ಗಣೇಶನ ಪೂಜೆ ನೆರವೇರಿಸಿದ ಬಳಿಕ ವ್ರತವನ್ನು ಮುಕ್ತಾಯಗೊಳಿಸಲಾಗುತ್ತದೆ.
ಅಂಗಾರಕ ಸಂಕಷ್ಟ ಚತುರ್ಥಿ ಆಚರಣೆಯ ಧಾರ್ಮಿಕ ಮಹತ್ವ
ಗಣೇಶನು ವಿಘ್ನಗಳನ್ನು ನಿವಾರಿಸುವ ದೇವರು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಸಂಕಷ್ಟ ಚತುರ್ಥಿಯಂದು ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗಿ, ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.
ವ್ರತ ಮತ್ತು ಪ್ರಾರ್ಥನೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಕಷ್ಟಕರ ಸಂದರ್ಭಗಳನ್ನು ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವೂ ದೊರೆಯುತ್ತದೆ ಎಂಬುದು ಈ ಆಚರಣೆಯ ಹಿಂದಿರುವ ನಂಬಿಕೆ.
ಅಂಗಾರಕ ಸಂಕಷ್ಟ ಚತುರ್ಥಿಯಂದು ಪಠಿಸಬಹುದಾದ ಗಣೇಶ ಮಂತ್ರಗಳು
ವಕ್ರತುಂಡ ಮಹಾಕಾಯ ಮಂತ್ರ
ಶ್ರೀ ವಕ್ರತುಂಡ ಮಹಾಕಾಯ
ಸೂರ್ಯ ಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ
ಸರ್ವ ಕಾರ್ಯೇಷು ಸರ್ವದಾ ॥
ಗಣೇಶ ಗಾಯತ್ರಿ ಮಂತ್ರ
ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ ।
ತನ್ನೋ ದಂತಿಃ ಪ್ರಚೋದಯಾತ್ ॥
ಸೌಭಾಗ್ಯ ಗಣಪತಿ ಮಂತ್ರ
ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ
ವರವರದ ಸರ್ವಜನ್ಮ ಮೇಂ ವಷಮಾನಾಯ ನಮಃ ॥
ಸಂಕಟ ನಿವಾರಣ ಮಂತ್ರ
ಓಂ ನಮೋ ಹೇರಂಬ ಮದಮೋಹಿತ ಮಮ
ಸಂಕಟಾನ್ ನಿವಾರಾಯ ನಿವಾರಾಯ ಸ್ವಾಹಾ ॥
ಸರಳ ಗಣೇಶ ಮಂತ್ರ
ಓಂ ಗಂ ಗಣಪತಯೇ ನಮಃ ॥